ಬೆಳಗಾವಿ: ಕಬ್ಬಿಗೆ ₹ 5,500 ದರ ನೀಡಬೇಕು ಎಂದು ಆಗ್ರಹಿಸಿ, ಶುಕ್ರವಾರ ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ 50ಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದ ರೈತರನ್ನು, ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಹಾಗೂ ಹುಕ್ಕೇರಿ ತಾಲ್ಲೂಕಿನ ಹತ್ತರಗಿ ರಾಷ್ಟ್ರೀಯ ಹೆದ್ದಾರಿ ಟೋಲ್‌ಗೇಟ್ ಬಳಿಯೇ ವಶಕ್ಕೆ ಪಡೆಯಲಾಯಿತು. ಬೆಳಿಗ್ಗೆಯಿಂದ ಸ್ಥಳದಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ಭದ್ರತೆ ಕೈಗೊಂಡಿದ್ದರು.
ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ರೈತರ ವಾಹನಗಳನ್ನು ತಡೆದ ಕಾರಣ ತೀವ್ರ ವಾಗ್ವಾದ ನಡೆಯಿತು. ಸುವರ್ಣ ವಿಧಾನಸೌಧದವರೆಗೂ ಹೋಗಿ ಪ್ರತಿಭಟನೆ ಮಾಡಲು ಅವಕಾಶ ಕೊಡಬೇಕು ಎಂದು ರೈತರು ಪಟ್ಟು ಹಿಡಿದರು. ಈ ವೇಳೆ ಕೆಲವರು ರಾಷ್ಟ್ರೀಯ ಹೆದ್ದಾರಿ ಮೇಲೆ ಕುಳಿತುಕೊಂಡರು.
ಪರಿಸ್ಥಿತಿ ಅರಿತ ಪೊಲೀಸರು ಮುಖಂಡರಾದ ರಾಘವೇಂದ್ರ ನಾಯಕ, ಪ್ರಕಾಶ ನಾಯಕ, ವೀರೇಶ ಮಂಡೇದ ಸೇರಿ 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದರು.
ತೆರಿಗೆಗಿಂತ ಕಬ್ಬಿನ ದರ ಕಡಿಮೆ:
ಯಮಕನಮರಡಿ: ಸುವರ್ಣ ವಿಧಾನಸೌಧದ ಕಡೆಗೆ ಹೊರಟ ಚಿಕ್ಕೋಡಿ, ಗೋಕಾಕ, ಮೂಡಲಗಿ ಹಾಗೂ ನಿಪ್ಪಾಣಿ ತಾಲ್ಲೂಕಿನ 40 ರೈತರನ್ನು ಸಮೀಪದ ಹತ್ತರಗಿ ಟೋಲ್‌ಗೇಟ್ ಬಳಿ ವಶಕ್ಕೆ ಪಡೆಯಲಾಯಿತು.
ಇದರಿಂದ ರೊಚ್ಚಿಗೆದ್ದ ರೈತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಘೋಷಣೆ ಕೂಗಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿ, ‘ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಬ್ಬಿನ ದರ ನಿಗದಿ ಮಾಡಿದ್ದು ಖಂಡನೀಯ. ಕಳೆದ ಒಂದು ದಶಕದಿಂದ ಕಬ್ಬಿನ ದರವೇ ಹೆಚ್ಚಾಗಿಲ್ಲ. ಈಗಂತೂ ಕೇಂದ್ರ ಸರ್ಕಾರ ವಸೂಲಿ ಮಾಡುವ ತೆರಿಗೆ ಪ್ರಮಾಣಕ್ಕಿಂತ ಟನ್ ಕಬ್ಬಿನ ದರ ಕಡಿಮೆ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಪವಾರ ಮಾತನಾಡಿ, ‘ಹಲವು ಕಾರ್ಖಾನೆಗಳು ಶಾಸಕರ ಒಡೆತನದಲ್ಲಿಯೇ ಇವೆ. ಹಾಗಾಗಿ, ಆಡಳಿತರೂಢ ಹಾಗೂ ವಿರೋಧ ಪಕ್ಷದ ಶಾಸಕರು ಕೂಡ ರೈತರ ಪರ ಇಲ್ಲ. ಮುಖ್ಯಮಂತ್ರಿ ಮೇಲೆ ಒತ್ತಡ ತಂದು ದರ ಪರಿಷ್ಕರಣೆ ಆಗದಂತೆ ಮಾಡುತ್ತಿದ್ದಾರೆ. ಇಂಥ ಮುಖ್ಯಮಂತ್ರಿ ನಮಗೆ ಬೇಕಿಲ್ಲ’ ಎಂದು ದೂರಿದರು.
ಸತ್ಯಪ್ಪ ಮಲ್ಲಾಪೂರೆ, ಗುರುನಾಥ ಹುಕ್ಕೇರಿ, ಕುಮಾರ ಮರದಿ, ವಾಸು ಕೋಡರೊಳ್ಳಿ, ಆನಂದ ಬೆಳಕೂಡ, ವಿಶಾಲ ಬಿಲ್ಲಕಾರ ಇನ್ನು ಹಲವಾರು ರೈತರು ಇದ್ದರು.
ಡಿಸಿಪಿ ರವೀಂದ್ರ ಗಡಾಡಿ ನೇತೃತ್ವದಲ್ಲಿ ಬೆಳಗಾವಿ ಮಾರ್ಕೆಟ್ ಠಾಣೆ, ಗ್ರಾಮೀಣ ಠಾಣೆ ಪೊಲೀಸರು ಭದ್ರತೆ ಕೈಗೊಂಡರು.
ರೈತರು ಹೇಳುವುದೇನು?
* ಕಾರ್ಖಾನೆಗಳು ಟನ್ ಕಬ್ಬಿಗೆ ₹ 3,500 ನೀಡಬೇಕು.
* ರಾಜ್ಯ ಸರ್ಕಾರ ₹ 2,000 ಸಹಾಯಧನ ನೀಡಬೇಕು.
* ಒಟ್ಟು ಪ್ರತಿ ಟನ್‌ಗೆ ₹ 5,500 ಘೋಷಣೆ ಮಾಡಬೇಕು.
* ಒಂದು ಟನ್ ಕಬ್ಬಿಗೆ ಸರ್ಕಾರಕ್ಕೆ ಕಾರ್ಖಾನೆಗಳಿಂದ ₹ 4,500 ತೆರಿಗೆ ಹೋಗುತ್ತದೆ.
* ದಶಕದಿಂದ ಕಬ್ಬಿನ ದರ ಪರಿಷ್ಕರಣೆ ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.