ADVERTISEMENT

'ರೈತ ಅಧಿವೇಶನ': ಕೃಷಿ ಕಾಯ್ದೆಗಳ ವಾಪಸ್‌ಗೆ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 4:32 IST
Last Updated 13 ಡಿಸೆಂಬರ್ 2021, 4:32 IST
ಬೆಳಗಾವಿಯ ಕಣಬರ್ಗಿಯ ಸಂಕಲ್ಪ ಗಾರ್ಡನ್‌ನಲ್ಲಿ ಸಂಯುಕ್ತ ಹೋರಾಟ–ಕರ್ನಾಟಕ ವತಿಯಿಂದ ಭಾನುವಾರ ಆಯೋಜಿಸಿದ್ದ ‘ರೈತ ಅಧಿವೇಶನ’ವನ್ನು ಸಂಯುಕ್ತ ಕಿಸಾನ್‌ ಮೋರ್ಚಾದ ಮುಖಂಡ ಅಶೋಕ ಧವಳೆ ಉದ್ಘಾಟಿಸಿದರು. ವಿವಿಧ ಸಂಘಟನೆಗಳ ಮುಖಂಡರಾದ ಸಿದಗೌಡ ಮೋದಗಿ, ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಅಲ್ಲಮಪ್ರಭು ಬೆಟ್ಟದೂರು, ದೇವಿ, ಪ್ರಕಾಶ್ ಕಮ್ಮರಡಿ ಹಾಗೂ ಚಾಮರಸ ಮಾಲಿಪಾಟೀಲ ಇದ್ದಾರೆ. -ಪ್ರಜಾವಾಣಿ ಚಿತ್ರ
ಬೆಳಗಾವಿಯ ಕಣಬರ್ಗಿಯ ಸಂಕಲ್ಪ ಗಾರ್ಡನ್‌ನಲ್ಲಿ ಸಂಯುಕ್ತ ಹೋರಾಟ–ಕರ್ನಾಟಕ ವತಿಯಿಂದ ಭಾನುವಾರ ಆಯೋಜಿಸಿದ್ದ ‘ರೈತ ಅಧಿವೇಶನ’ವನ್ನು ಸಂಯುಕ್ತ ಕಿಸಾನ್‌ ಮೋರ್ಚಾದ ಮುಖಂಡ ಅಶೋಕ ಧವಳೆ ಉದ್ಘಾಟಿಸಿದರು. ವಿವಿಧ ಸಂಘಟನೆಗಳ ಮುಖಂಡರಾದ ಸಿದಗೌಡ ಮೋದಗಿ, ಕೋಡಿಹಳ್ಳಿ ಚಂದ್ರಶೇಖರ್, ಬಡಗಲಪುರ ನಾಗೇಂದ್ರ, ಅಲ್ಲಮಪ್ರಭು ಬೆಟ್ಟದೂರು, ದೇವಿ, ಪ್ರಕಾಶ್ ಕಮ್ಮರಡಿ ಹಾಗೂ ಚಾಮರಸ ಮಾಲಿಪಾಟೀಲ ಇದ್ದಾರೆ. -ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಭೂ ಸುಧಾರಣೆ, ಎಪಿಎಂಸಿ ಮತ್ತು ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಗಳಿಗೆ ರಾಜ್ಯ ಸರ್ಕಾರವು 2020ರಲ್ಲಿ ತಂದಿರುವ ರೈತ ವಿರೋಧಿ ತಿದ್ದುಪಡಿಗಳನ್ನು ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಡಿ.13ರಿಂದ ನಡೆಯಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲೇ ರದ್ದುಗೊಳಿಸಬೇಕು’ ಎಂದು ‘ರೈತ ಅಧಿವೇಶನ’ ಹಕ್ಕೊತ್ತಾಯ ಮಂಡಿಸಿತು.

ಸಂಯುಕ್ತ ಹೋರಾಟ-ಕರ್ನಾಟಕ ವತಿಯಿಂದ ಹೊರವಲಯದ ಗೋಕಾಕ ರಸ್ತೆಯ ಸಂಕಲ್ಪ ಗಾರ್ಡನ್‌ನಲ್ಲಿ ‘ಪರ್ಯಾಯ ಕೃಷಿ ಧೋರಣೆಗಾಗಿ’ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಅಧಿವೇಶನ ನಡೆಸಲಾಯಿತು.

ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದನ್ನು ಸ್ವಾಗತಿಸಿ ಸಂಭ್ರಮಿಸಲಾಯಿತು. ನೆರೆದವರಿಗೆ ಕುಂದಾ ಹಂಚಲಾಯಿತು. ಕೇಂದ್ರದಂತೆ ರಾಜ್ಯ ಸರ್ಕಾರವೂ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯದಿದ್ದರೆ, ದೆಹಲಿಯ ಗಡಿಗಳಲ್ಲಿ ನಡೆದ ಮಾದರಿಯಲ್ಲೇ ರಾಜ್ಯದಲ್ಲೂ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.

ADVERTISEMENT

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಸಂಘರ್ಷ ಮಾಡುವುದರಲ್ಲಿ ನಾವು ಪ್ರವೀಣರು. ಸಮಾಜದ ಒಳಿತಿಗಾಗಿ ಅಗ್ನಿ ಆಹುತಿಗೂ ಸಿದ್ಧರಿದ್ದೇವೆ. ಪ್ರಧಾನಿ–ಮುಖ್ಯಮಂತ್ರಿ ಕಾರುಗಳಿಗೆ ಮುತ್ತಿಗೆಯನ್ನೂ ಹಾಕುತ್ತೇವೆ. ನಮ್ಮ ಇನ್ನೊಂದು ಆಯಾಮದ ಹೋರಾಟವೇ ಈ ರೈತ ಅಧಿವೇಶನ’ ಎಂದು ಹೇಳಿದರು.

‘ದೇಶದಲ್ಲಿ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವಗಳ ನಡುವೆ ಹೋರಾಟ ನಡೆಯುತ್ತಿದೆ. ಸರ್ವಾಧಿಕಾರಿಯ ನಡೆ ವಿರುದ್ಧ ದಿಟ್ಟ ಹೆಜ್ಜೆಗಳನ್ನು ಇಟ್ಟಿರುವುದರಿಂದಲೇ ದೇಶದಲ್ಲಿನ್ನೂ ಪ್ರಜಾಪ್ರಭುತ್ವ ಉಳಿದಿದೆ; ಉಳಿಸಿಕೊಳ್ಳುತ್ತೇವೆ ಎಂಬ ಸಂದೇಶವನ್ನು ರವಾನಿಸಿದೆ. ನಾವಿಲ್ಲಿ ಮಂಡಿಸಿರುವ ಹಕ್ಕೊತ್ತಾಯಗಳ ಬಗ್ಗೆ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸಬೇಕು’ ಎಂದು ‌ಒತ್ತಾಯಿಸಿದರು.

‘ನಮ್ಮ ಅಧಿವೇಶನದ ನಿರ್ಣಯಗಳನ್ನು ವಿಧಾನಸಭಾಧ್ಯಕ್ಷರು, ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಿಗೆ ಸಲ್ಲಿಸಲಾಗುವುದು. ಆ ಕಾರ್ಯಸೂಚಿ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಬೇಕು. ಸರ್ಕಾರದ ನಡೆ‌ಯು ನಮಗೆ ಪೂರಕವಾಗಿಲ್ಲದಿದ್ದರೆ ಸಂಘರ್ಷಕ್ಕೆ ಇಳಿಯಬೇಕಾಗುತ್ತದೆ. ಸರ್ಕಾರ ಕಿತ್ತೊಗೆಯಲು ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.‌

ರೈತರ ನಂಬಿಕೆ ಕಳೆದುಕೊಂಡ ಸರ್ಕಾರ:

ಸಭಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೈತ ಸಮುದಾಯದ ನಂಬಿಕೆ ಕಳೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ದೂರಿದರು.

‘ನಾವು ಬದುಕಿನ ಪ್ರಶ್ನೆಗಳ ಬಗ್ಗೆ ಚರ್ಚಿಸಿದರೆ, ಸರ್ಕಾರಕ್ಕೆ ಅದು ಆದ್ಯತೆಯ ವಿಷಯವಲ್ಲ. ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡಿಸಲು ಮುಂದಾಗಿದೆ. ಭಾವನಾವಾದಿಗಳನ್ನು ಮೆಚ್ಚಿಸಿ ತಮ್ಮ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಆದ್ಯತೆ ಕೊಟ್ಟಿದೆ’ ಎಂದು ಟೀಕಿಸಿದರು.

***

ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ದೆಹಲಿಯ‌ ಗಡಿಗಳಲ್ಲಿ ಸೇರಿದಂತೆ ಹಲವೆಡೆ ನಡೆದ ಹೋರಾಟಕ್ಕೆ ಮಾಧ್ಯಮ ಸಮರ್ಪಕ ಬೆಂಬಲ ನೀಡಲಿಲ್ಲ

- ಅಲ್ಲಮಪ್ರಭು ಬೆಟ್ಟದೂರು,ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.