ಖಾನಾಪುರ: ಬೀಡಿ ಹೋಬಳಿಯ ಗುಂಡೇನಟ್ಟಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದ ಸಮಾನ ಮನಸ್ಕ ಕೃಷಿಕರು ಸೇರಿ ಸಿದ್ಧಾರೂಢ ಸಾವಯವ ಕೃಷಿಕರ ಬಳಗ ಸ್ಥಾಪಿಸಿ, ದೇಸಿ ಬೀಜದ ತಳಿಗಳ ಸಂರಕ್ಷಣೆ ಮಾಡುತ್ತಿದ್ದಾರೆ.
ಸಾಂಪ್ರದಾಯಿಕ ಕೃಷಿ ಮುಂದುವರಿಸಿಕೊಂಡು ಹೋಗುವ ಸಂಕಲ್ಪ ಹೊಂದಿರುವ ಇವರು, ತಮ್ಮ ಜಮೀನುಗಳಲ್ಲಿ ಕ್ರಿಮಿನಾಶಕ, ಕೀಟನಾಶಕ, ರಸಗೊಬ್ಬರಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ; ಸಾವಯವ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಇತರ ರೈತರನ್ನೂ ಸಂಘಟಿಸಿ ಅವರಿಗೂ ಸಾವಯವ ಕೃಷಿಗೆ ಪ್ರೇರೇಪಿಸುತ್ತಿದ್ದಾರೆ.
ಸಾವಯವ ಕೃಷಿಕರು ಸೇರಿ:
‘ಪರಂಪರಾಗತವಾಗಿ ಬಳಕೆಯಲ್ಲಿದ್ದು, ಹೈಬ್ರೀಡ್ ಭರಾಟೆಯಿಂದ ತೆರೆಮರೆಗೆ ಸರಿದಿರುವ ಜವಾರಿ ಬೀಜಗಳ ಸಂಸ್ಕರಣೆ, ಅಭಿವೃದ್ಧಿ ಹಾಗೂ ಉತ್ತೇಜನದ ಉದ್ದೇಶಕ್ಕಾಗಿ ಈ ಬ್ಯಾಂಕ್ ಅಸ್ತಿತ್ವಕ್ಕೆ ಬಂದಿದೆ. ಇಲ್ಲಿನ ಕಾರ್ಯ ಮೆಚ್ಚಿರುವ ವಿವಿಧ ಸಂಘ ಸಂಸ್ಥೆಗಳು ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯವು ಇದರ ಸಂಸ್ಥಾಪಕರು ಮತ್ತು ಸದಸ್ಯರನ್ನು ಗೌರವಿಸಿವೆ. ಕೃಷಿ ಇಲಾಖೆಯೂ ಇವರ ಕಾರ್ಯಕ್ಕೆ ಪ್ರೋತ್ಸಾಹ ಮತ್ತು ನೆರವು ಒದಗಿಸಿದೆ. ಬಳಗದವರ ಜಮೀನುಗಳಲ್ಲಿ ಕಾಲಕಾಲಕ್ಕೆ ರೈತರ ಕ್ಷೇತ್ರ ಪ್ರಾತ್ಯಕ್ಷಿಕೆ ಆಯೋಜಿಸಿ ಇತರ ರೈತರಿಗೂ ಇವರು ಮಾಡುವ ಸಮಾಜಮುಖಿ ಕೆಲಸದ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಡಿ.ಬಿ. ಚವಾಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಳಗದ ಸದಸ್ಯರು ಶೂನ್ಯ ಬಂಡವಾಳದ ಕೃಷಿ ಕೈಗೊಂಡು ಸಾವಯವ ಉತ್ಪನ್ನಗಳನ್ನು ಬೆಳೆಯುತ್ತಿದ್ದಾರೆ. ಇವರ ಕೃಷಿ ಉತ್ಪನ್ನಗಳಿಗೆ ಬೆಳಗಾವಿ, ಕೊಲ್ಹಾಪುರ, ಪುಣೆ, ಸಾಂಗ್ಲಿ ಮತ್ತು ಧಾರವಾಡ-ಹುಬ್ಬಳ್ಳಿ ನಗರಗಳಲ್ಲಿ ಬೇಡಿಕೆ ಇದೆ. ಹೀಗಾಗಿ ಸಾವಯವ ಪದ್ಧತಿಯ ಬೆಳೆಗಳನ್ನು ಬೆಳೆಯಲು ಮುಂದಾಗಿರುವ ರೈತರು ತಮ್ಮಂತೆಯೇ ಉಳಿದವರೂ ಜವಾರಿ ಮತ್ತು ದೇಸಿ ಬೀಜಗಳನ್ನು ಬಿತ್ತಿ ಬೆಳೆಯುವ ನಿಟ್ಟಿನಲ್ಲಿ ಬಿತ್ತನೆಬೀಜಗಳ ಸರಬರಾಜಿಗೆ ಯೋಜನೆ ರೂಪಿಸಿದ್ದಾರೆ’ ಎಂದು ಗುಂಡೇನಟ್ಟಿ ಗ್ರಾಮದ ಕೃಷಿಕ ವಿಠ್ಠಲ ಹಿಂಡಲಕರ ಹೇಳಿದರು.
ಅನುಸರಿಸುವಂತಾಗಲು:
ಅಜ್ಜ ಮುತ್ತಜ್ಜರ ಕಾಲದಿಂದಲೂ ಸಂರಕ್ಷಿಸಿಟ್ಟಿದ್ದ ಬೀಜಗಳನ್ನು ಬಳಸಿ ಸ್ವಾವಲಂಬಿಯಾಗಿ ಬೆಳೆ ಬೆಳೆಯುತ್ತಿದ್ದ ರೈತ ಇಂದು ರಾಸಾಯನಿಕ ಕೀಟನಾಶಕ, ಹೈಬ್ರೀಡ್ ಬೀಜ, ಗೊಬ್ಬರಗಳ ಮೇಲೆ ಅವಲಂಬಿತನಾಗಿ ತಾನು ಬಡವನಾಗುತ್ತಿದ್ದಾನೆ. ಬೀಜ, ಗೊಬ್ಬರ ಮತ್ತು ಔಷಧಿ ಕಂಪನಿಗಳನ್ನು ಶ್ರೀಮಂತರನ್ನಾಗಿ ಮಾಡುತ್ತಿದ್ದಾನೆ. ಬಿತ್ತನೆಬೀಜ, ಗೊಬ್ಬರ, ಕ್ರಿಮಿನಾಶಕಗಳ ಖರೀದಿಗಾಗಿ ಸಾಲ ಮಾಡಿ ಅದನ್ನು ತುಂಬಲಾಗದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಆದರೆ, ಸಾವಯವ ಕೃಷಿ ಅನುಸರಿಸುವ ರೈತ ಪೌಷ್ಟಿಕ ಆಹಾರ ಒದಗಿಸುವ ಬೆಳೆಗಳನ್ನು ಬೆಳೆದು ತಾನೂ ಸಂತುಷ್ಟನಾಗಿ ಖರೀದಿಸುವವರ ಆರೋಗ್ಯದ ಕಾಳಜಿಯನ್ನೂ ನೋಡಿಕೊಂಡು ಸಮಾಜ ಸೇವೆ ಮಾಡಿದಂತಾಗುತ್ತದೆ’ ಎನ್ನುತ್ತಾರೆ ಸಂಸ್ಥಾಪಕ ಬಿ.ಬಿ. ಖಿಲಾರಿ.
ಬ್ಯಾಂಕ್‌ಗೆ ಭೇಟಿ ನೀಡುವವರಿಗೆ ಸಾವಯವ ಕೃಷಿ ಕುರಿತು ತಿಳಿಸಲಾಗುತ್ತದೆ. ಬೇಡಿಕೆಯಷ್ಟು ಬೀಜ ವಿತರಣೆ ಕೂಡ ಮಾಡಲಾಗುತ್ತದೆ. ಸಂಪರ್ಕಕ್ಕೆ 99721 50378.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.