ADVERTISEMENT

ಬೆಳಗಾವಿ: 15 ತಿಂಗಳಲ್ಲಿ 90 ರೈತರ ಆತ್ಮಹತ್ಯೆ

ಜಿಲ್ಲೆಯ ರೈತರಿಗೆ ಬರ ತಂದ ಸಂಕಷ್ಟ, ಸಾಲಭಾದೆಯಿಂದ ಆತ್ಮಹತ್ಯೆ ಪ್ರಕರಣ ಹೆಚ್ಚಳ

ಇಮಾಮ್‌ಹುಸೇನ್‌ ಗೂಡುನವರ
Published 28 ಜೂನ್ 2024, 4:24 IST
Last Updated 28 ಜೂನ್ 2024, 4:24 IST
<div class="paragraphs"><p> ಆತ್ಮಹತ್ಯೆ</p></div>

ಆತ್ಮಹತ್ಯೆ

   

ಬೆಳಗಾವಿ: ಜಿಲ್ಲೆಯಲ್ಲಿ ಕಳೆದ 15 ತಿಂಗಳಲ್ಲಿ 90 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡ ಕೃಷಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಸಕಾಲಕ್ಕೆ ಪರಿಹಾರ ಕೈಗೆಟುಕದೆ ಕೆಲವರು ಅಲೆದಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಏಳು ನದಿಗಳು ಹರಿದರೂ, ಕಳೆದ ವರ್ಷ 15 ತಾಲ್ಲೂಕುಗಳು ‘ಬರ’ದಿಂದ ತತ್ತರಿಸಿದ್ದವು. ವರುಣ ಕೈಕೊಟ್ಟಿದ್ದರಿಂದ ಬಹುತೇಕ ಬೆಳೆ ಹಾನಿಗೀಡಾಗಿದ್ದವು. ಹಾಗಾಗಿ ಸಾಲಭಾದೆಯಿಂದ 2023–24ರಲ್ಲಿ 82 ರೈತರು ಆತ್ಮಹತ್ಯೆಗೆ ಶರಣಾಗಿದ್ದರು. 2024ರ ಏ.1ರಿಂಂದ ಜೂ.27ರವರೆಗೆ 8 ಮಂದಿ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.

ADVERTISEMENT

20 ಅರ್ಜಿ ತಿರಸ್ಕೃತ: ‘2023–24ರಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಡಿ ಪರಿಹಾರ ಕೋರಿ 102 ಅರ್ಜಿ ಸಲ್ಲಿಕೆಯಾಗಿದ್ದವು. ಈ ಪೈಕಿ 20 ಅರ್ಜಿ ತಿರಸ್ಕೃತವಾಗಿವೆ. ಜಿಲ್ಲಾಧಿಕಾರಿ, ಆಯಾ ಉಪವಿಭಾಗಾಧಿಕಾರಿ ನೇತೃತ್ವದ ಸಮಿತಿಗಳು 82 ಅರ್ಜಿಗಳಿಗೆ ಅನುಮೋದನೆ ನೀಡಿವೆ. ಪ್ರಸಕ್ತ ಸಾಲಿನಲ್ಲಿ ಸಲ್ಲಿಕೆಯಾದ 8 ಅರ್ಜಿಗಳನ್ನು ಪರಿಶೀಲನೆಗೆ ಒಳಪಡಿಸಬೇಕಿದೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಅಲೆದಾಡಿಸುತ್ತಿದ್ದಾರೆ: ‘ರೈತರು ತಾವು ಬೆಳೆದ ಬೆಳೆಗಳಿಗೆ ಉತ್ತಮ ದರ ಸಿಗುತ್ತಿಲ್ಲ. ಇದೇ ಕಾರಣಕ್ಕೆ ರೈತರು ಸಕಾಲಕ್ಕೆ ಸಾಲ ಮರುಪಾವತಿಸುವುದಿಲ್ಲ ಎಂದು ರಾಷ್ಟ್ರೀಯ ಬ್ಯಾಂಕ್‌ಗಳೂ ಸಾಲ ಕೊಡುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಫೈನಾನ್ಸ್‌, ಸೊಸೈಟಿ ಮತ್ತು ಕೈಗಡ ರೂಪದಲ್ಲಿ ಹೆಚ್ಚಿನವರು ಸಾಲ ಪಡೆಯುತ್ತಿದ್ದಾರೆ. ಬೆಳೆ ಹಾನಿ, ಸಾಲಭಾದೆಯಿಂದ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಧಿಕಾರಿಗಳು ಇಲ್ಲಸಲ್ಲದ ದಾಖಲೆ ಕೇಳಿ ಅಲೆದಾಡಿಸುತ್ತಿದ್ದಾರೆ’ ಎಂದು ರೈತ ಮುಖಂಡ ಸಿದಗೌಡ ಮೋದಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷಿ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸರಿಯಾಗಿ ಮಾನದಂಡ ಅನುಸರಿಸಿದರೆ, ಆತ್ಮಹತ್ಯೆಗೀಡಾದ ರೈತನ ಅವಲಂಬಿತರಿಗೆ ಒಂದು ತಿಂಗಳಲ್ಲೇ ಪರಿಹಾರ ಕೊಡಬಹುದು’ ಎಂದರು.

‘ಕೆಲವು ರೈತರು ಮೃತಪಟ್ಟು ವರ್ಷವಾದರೂ, ಅವರ ಅವಲಂಬಿತರಿಗೆ ಪರಿಹಾರ ಸಿಕ್ಕಿಲ್ಲ. ನಾನಾ ದಾಖಲೆ ಕೇಳುತ್ತ ಅಲೆದಾಡಿಸದೆ, ಮಾನವೀಯತೆ ಆಧಾರದಲ್ಲಿ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ನೀಡುವಂತಾಗಬೇಕು’ ಎನ್ನುತ್ತಾರೆ ಮತ್ತೊಬ್ಬ ರೈತ ಮುಖಂಡ ಪ್ರಕಾಶ ನಾಯ್ಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.