ಬೆಳಗಾವಿ: ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಜಾರಿಯಾಗಿ ಹಲವು ವರ್ಷಗಳೇ ಕಳೆದಿದ್ದರೂ ಅದರಿಂದ ಪ್ರಯೋಜನ ಪಡೆಯಲು ನೋಂದಾಯಿಸುವ ರೈತರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆ ಆಗುತ್ತಲೇ ಬಂದಿದೆ. ಪರಿಹಾರ ಸಮರ್ಪಕವಾಗಿ ಸಿಗದಿರುವುದು ಇದಕ್ಕೆ ಕಾರಣವಾಗಿದೆ.
‘ನೋಂದಣಿ ಮಾಡಿಸುವ ಎಲ್ಲರಿಗೂ ಪರಿಹಾರ ದೊರೆಯುತ್ತಿಲ್ಲ’ ಎಂಬ ಆರೋಪವೂ ರೈತರಿಂದ ಕೇಳಿಬರುತ್ತಿದೆ. ನಿರ್ಬಂಧಗಳು ಕೂಡ ತೊಡಕಾಗಿ ಪರಿಣಮಿಸಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ಆಗುವುದರಿಂದ ಅಲ್ಲಿನ ರೈತರು ವಿಮೆಯತ್ತ ಮನಸ್ಸು ಮಾಡುತ್ತಿಲ್ಲ.
ಜಿಲ್ಲೆಯಲ್ಲಿ ಏಳು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತದೆ. ಇದರಲ್ಲಿ 3 ಲಕ್ಷ ಕಬ್ಬು ಬೆಳೆ ಇದೆ. ಅದಕ್ಕೆ ಯೋಜನೆ ಅನ್ವಯವಾಗುವುದಿಲ್ಲ. ಉಳಿದಂತೆ 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಹಲವು ಬೆಳೆಗಳು ಅಧಿಸೂಚಿತ ಬೆಳೆಗಳಾಗಿವೆ. ಖಾನಾಪುರ, ಬೆಳಗಾವಿ, ಕಿತ್ತೂರು, ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ ಮೊದಲಾದ ತಾಲ್ಲೂಕುಗಳಲ್ಲಿ ಉತ್ತಮ ಮಳೆ ಬೀಳುತ್ತದೆ. ಹೀಗಾಗಿ, ಅಲ್ಲಿನವರು ವಿಮೆ ಮಾಡಿಸಲು ಮುಂದಾಗುವುದು ಕಡಿಮೆ. ಉಳಿದಂತೆ ಸವದತ್ತಿ, ಅಥಣಿ, ಗೋಕಾಕ, ಮೂಡಲಗಿ, ರಾಮದುರ್ಗ ಹಾಗೂ ಕಾಗವಾಡ ತಾಲ್ಲೂಕುಗಳಲ್ಲಿ ಅಲ್ಲಲ್ಲಿ ರೈತರು ವಿಮೆ ಮಾಡಿಸುತ್ತಾರೆ.
ನೋಂದಾಯಿಸುವವರ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತಿದೆ.
2016ರಲ್ಲಿ ಹಿಂಗಾರಲ್ಲಿ 2.04 ಲಕ್ಷ ಮಂದಿ ನೋಂದಣಿ ಮಾಡಿಸಿದ್ದರು. ಮುಂಗಾರಲ್ಲಿ 49ಸಾವಿರ ರೈತರು ನೋಂದಣಿ ಮಾಡಿಸಿದ್ದರು. 2020ರ ಮುಂಗಾರಲ್ಲಿ 26,310 ಮಂದಿ ನೋಂದಣಿ ಮಾಡಿಸಿದ್ದರು. ಅದರಲ್ಲಿ ಬೆಳೆ ಹಾನಿಯಾದ 4ಸಾವಿರ ಮಂದಿಗೆ ಪರಿಹಾರವಾಗಿ ₹ 3.65 ಕೋಟಿ ಬಂದಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 32,785 ರೈತರು ಬೆಳೆ ವಿಮೆ ಯೋಜನೆಯಡಿ ಪಾಲ್ಗೊಂಡಿದ್ದಾರೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ಹಿಂದೆ, ಬೆಳೆ ಸಾಲ ಪಡೆದವರೆಲ್ಲರಿಗೂ ಕಡ್ಡಾಯ ಮಾಡಲಾಗಿತ್ತು. ಈಗ, ಐಚ್ಛಿಕವಾಗಿದೆ. ಈ ವಿಮೆಯನ್ನು ಗುಂಪು ವಿಮೆ (ಘಟಕವಾರು ಅಂದರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ) ಎಂದು ಪರಿಗಣಿಸಲಾಗುತ್ತದೆ. ಆ ಇಡೀ ಘಟಕದಲ್ಲಿ ಬೆಳೆ ಹಾನಿ ಸಂಭವಿಸಿದರೆ ಮಾತ್ರ ಪರಿಹಾರ ಸಿಗುತ್ತದೆ. ಒಬ್ಬರಿಗೆ ಮಾತ್ರ ಸಿಗುವುದಿಲ್ಲ. ಇದು ಗೊಂದಲಕ್ಕೆ ಕಾರಣವಾಗಿದೆ. ವೈಯಕ್ತಿಕ ಪರಿಹಾರ ದೊರೆಯುವುದಿಲ್ಲವಾದ್ದರಿಂದ ಯೋಜನೆಯ ಲಾಭ ಎಲ್ಲರಿಗೂ ಸಿಗುತ್ತಿಲ್ಲ. ಕನ್ನಡಿಯೊಳಗಿನ ಗಂಟಿನಂತಾಗಿದೆ. ಇದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ನೆರೆಯ ಧಾರವಾಡಕ್ಕೆ ಹೋಲಿಸಿದರೆ ಸವದತ್ತಿ ಹಾಗೂ ಕಿತ್ತೂರಲ್ಲಿ ವಿಮಾ ಹಣವನ್ನು ಕಡಿಮೆ ನೀಡಲಾಗುತ್ತದೆ ಎಂಬ ಆರೋಪ ವ್ಯಾಪಕವಾಗಿದೆ. ಇದನ್ನು ಪರಿಹರಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ. ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಸವದತ್ತಿ–ಯಲ್ಲಮ್ಮ ಶಾಸಕ ಆನಂದ ಮಾಮನಿ ಈ ಕುರಿತು ಕೆಡಿಪಿ ಸಭೆಯಲ್ಲಿ ಗಮನಸೆಳೆಯುತ್ತಲೇ ಇರುತ್ತಾರೆ. ಆದರೆ, ಪರಿಹಾರ ಸಿಕ್ಕಿಲ್ಲ.
‘ಧಾರವಾಡದಲ್ಲಿ ಇಳುವರಿ ಕಡಿಮೆ ಬರುತ್ತದೆ; ಹೆಚ್ಚು ಪ್ರದೇಶವಿರುತ್ತದೆ. ಮೇಲಾಗಿ ಒಣ ಭೂಮಿ ಇರುವುದರಿಂದ ಬೆಳೆ ಹೆಚ್ಚು ನಾಶವಾಗುತ್ತದೆ. ಇಲ್ಲಿ ಮಳೆ ಇರುವುದರಿಂದ ಬೆಳೆ ಹಾನಿ ಪ್ರಮಾಣ ಕಡಿಮೆ ಇರುತ್ತದೆ. ಹೀಗಾಗಿ ವಿಮೆಯಲ್ಲಿ ವ್ಯತ್ಯಾಸ ಆಗುತ್ತದೆ’ ಎನ್ನುತ್ತಾರೆ ಕೃಷಿ ಅಧಿಕಾರಿ.
ಸೇರ್ಪಡೆಯಾದವರು ಕಡಿಮೆ
ಮೂಡಲಗಿ: ತಾಲ್ಲೂಕಿನಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುವುದರಿಂದ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಗೆ ಸೇರ್ಪಡೆಯಾಗಿರುವ ರೈತರ ಸಂಖ್ಯೆ ಕಡಿಮೆ ಇದೆ.
ಸಜ್ಜೆ, ಗೋವಿನಜೋಳ, ಜೋಳ ಸೇರಿದಂತೆ ಆಹಾರ ಬೆಳೆಗಳು ಮತ್ತು ತೋಟಗಾರಿಕೆಯ ಕೆಲವು ಬೆಳೆಗಳಿಗೆ ಯೋಜನೆಯು ಅನ್ವಯಿಸುತ್ತದೆ. ಆದರೆ, ಇಂತಹ ಬೆಳೆಗಳನ್ನು ಈ ಭಾಗದಲ್ಲಿ ಬೆಳೆಯುವವರು ಕಡಿಮೆ. ಕೆಲವು ವರ್ಷಗಳಿಂದ ಆಹಾರ ಬೆಳೆಗಳನ್ನು ಹೆಚ್ಚಾಗಿ ಬೆಳೆಯು ಯಾದವಾಡ ಭಾಗದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತುಕ್ಕಾನಟ್ಟಿಯ ಸುತ್ತಮುತ್ತಲಿನ ಕೆಲವು ತರಕಾರಿ ಬೆಳೆಯುವ ರೈತರು ಕೆಲವು ವರ್ಷ ಯೋಜನೆಗೆ ನೋಂದಣಿ ಮಾಡಿಸಿದ್ದು ಅದನ್ನು ಮುಂದುವರಿಸಿಲ್ಲ. ತಾಲ್ಲೂಕಿನಲ್ಲಿ 1,500ಕ್ಕೂ ಅಧಿಕ ರೈತರು ನೋಂದಣಿ ಮಾಡಿಸಿದ್ದಾರೆ ಎಂದು ಯೋಜನೆ ನಿರ್ವಹಿಸುತ್ತಿರುವ ಜಿಲ್ಲಾ ಪ್ರತಿನಿಧಿ ಬಾಲರಾಜ ಸತ್ತಿಗೇರಿ ತಿಳಿಸಿದರು. ಕೆಲವು ರೈತರು ಗೊತ್ತಿದ್ದರೂ ನೋಂದಣಿ ಮಾಡಿಸಿಲ್ಲ. ಕೆಲವರಿಗೆ ಜಾಗೃತಿ ಇಲ್ಲ.
ಸ್ಪಂದಿಸಬೇಕು
ಸವದತ್ತಿ: ವಿಮಾ ಕಂಪನಿಗಳು ರೈತರ ನೆರವಿಗೆ ಬಾರದೆ ತಮ್ಮದೇ ಶೈಲಿಯಲ್ಲಿ ಹೊರಟಿವೆ. ವಿಮಾ ಪರಿಹಾರ ಮೊತ್ತವು ನಿಗದಿತ ಸಮಯದಲ್ಲಿ ಸಿಕ್ಕಿಲ್ಲ ಎನ್ನುವುದು ರೈತರ ದೂರಾಗಿದೆ. ಈ ವರ್ಷದ ಇಳುವರಿಯನ್ನು ಹಿಂದಿನ 7 ವರ್ಷಗಳ ಸರಾಸರಿ ಇಳುವರಿಗೆ ಹೋಲಿಕೆ ಮಾಡಲಾಗುತ್ತಿದೆ. ‘ವಿಮಾ ಕಂಪನಿ ಪ್ರತಿನಿಧಿ ಹೋಬಳಿ ಮಟ್ಟದಲ್ಲಿದ್ದುಕೊಂಡು ರೈತರ ಕುಂದುಕೊರತೆಗೆ ಸ್ಪಂದಿಸಬೇಕು’ ಎಂಬ ಬೇಡಿಕೆ ಇದೆ.
‘ಕಡಲೆ, ಗೋವಿನಜೋಳ ಮೇಲೆ 2-3 ವರ್ಷ ನಿರಂತರ ವಿಮೆ ಮಾಡಿಸಿದ್ದೆ. ಅಧಿಕಾರಿಗಳು ಫೋಟೊ ಸಹಿತ ಮಾಹಿತಿ ಪಡೆದಿದ್ದರು. ಹಾನಿಯಾದರೂ ಈವರೆಗೂ ವಿಮೆ ಬಂದಿಲ್ಲ. ಆರ್ಥಿಕವಾಗಿ ತತ್ತರಿಸಿದ ನಾವು ಬಾರದೇ ಇರುವ ವಿಮೆಗೆ ಹಣ ಪಾವತಿಸುವುದು ವ್ಯರ್ಥ ಎನ್ನುವಂತಾಗಿದೆ ಎಂದು ರೈತ ಶಂಕರ ರಾಮಪ್ಪ ಬೆಣ್ಣಿ ತಿಳಿಸಿದರು. ಹಲವು ರೈತರಿಗೆ ಇಂತಹ ಅನುಭವವಾಗಿದೆ.
ಇಳಿಕೆಯಾದ ರೈತರ ಸಂಖ್ಯೆ
ಚನ್ನಮ್ಮನ ಕಿತ್ತೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಬೆಳೆ ವಿಮೆ ತುಂಬುವವರ ಸಂಖ್ಯೆ ಕಡಿಮೆಯಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಮೂಲಗಳು ತಿಳಿಸಿವೆ. ಕಳೆದ ಬಾರಿ 1,200ಕ್ಕೂ ಹೆಚ್ಚು ರೈತರು ತಾಲ್ಲೂಕಿನಲ್ಲಿ ಬೆಳೆ ವಿಮೆ ಕಂತು ಕಟ್ಟಿದ್ದರು. ಆರಂಭದಲ್ಲೇ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ 718 ರೈತರು ಮಾತ್ರ ವಿಮೆ ಕಂತು ತುಂಬಿದ್ದಾರೆ ಎಂದು ತಿಳಿಸುತ್ತಾರೆ ಕೇಂದ್ರದ ಅಧಿಕಾರಿ ಮಂಜುನಾಥ ಕೆಂಚರಾಹುತ.
ಭತ್ತ, ಸೋಯಾಅವರೆಗೆ ಬೆಳೆ ವಿಮೆ ಮಾಡಿಸಿದ್ದಾರೆ. ಸೋಯಾ ಅವರೆ ಬೆಳೆಯು ರೋಗಕ್ಕೆ ತುತ್ತಾಗಿದೆ. ಸಮೀಕ್ಷೆ ನಡೆಸಿದ ನಂತರ ಪರಿಹಾರ ನೀಡಿಕೆಯ ವಿವರ ಲಭ್ಯವಾಗಲಿದೆ ಎಂದರು.
ಹಿಂದೇಟು ಹಾಕುತ್ತಾರೆ
ತೆಲಸಂಗ: ಯೋಜನೆಯು ದ್ರಾಕ್ಷಿ ಬೆಳೆಗಾರರಿಗೆ ವರದಾನವಾಗಿದೆ. ಆದರೆ, ದಾಳಿಂಬೆ ಸೇರಿದಂತೆ ಇನ್ನಿತರ ಬೆಳೆಗಳು ನಷ್ಟವಾಗಿದ್ದರೂ ಪರಿಹಾರ ಸಿಕ್ಕಿಲ್ಲ. ಪರಿಣಾಮ, ಆ ಬೆಳೆಗಳಿಗೆ ರೈತರು ವಿಮೆ ಭರಿಸಲು ಹಿಂದೇಟು ಹಾಕುತ್ತಿದ್ದಾರೆ.
3 ವರ್ಷಗಳಿಂದ ಸಂಕಷ್ಟದಲ್ಲಿದ್ದ ದ್ರಾಕ್ಷಿ ಬೆಳೆಗಾರರಿಗೆ ವಿಮೆ ಆರ್ಥಿಕ ಶಕ್ತಿ ನೀಡಿದೆ. ವರ್ಷದಿಂದ ವರ್ಷಕ್ಕೆ ದ್ರಾಕ್ಷಿ ವಿಮೆ ತುಂಬವ ರೈತರ ಸಂಖ್ಯೆಯೂ
ಹೆಚ್ಚಿದೆ. ಈ ಭಾಗದ ದಾಳಿಂಬೆ ಬೆಳೆಗಾರರು ದಾಳಿಂಬೆಗೆ ವಿಮೆ ಭರಿಸುತ್ತಲೇ ಇದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ 10 ವರ್ಷಗಳಿಂದ ದಾಳಿಂಬೆ ಬೆಳೆಗೆ ರೋಗ ಕಾಡುತ್ತಲೇ ಇದೆ. ವಿಮೆ ಕೈಹಿಡಿಯುತ್ತಿಲ್ಲ.
‘ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿ ವಿಕೋಪದಿಂದಾಗಿ ದ್ರಾಕ್ಷಿ ಬೆಳೆ ಒಂದಿಲ್ಲೊಂದು ಹೊಡೆತ ಬೀಳುತ್ತಲೇ ಇದೆ. ಈ ಕಠಿಣ ಸ್ಥಿತಿಯಲ್ಲಿ ವಿಮೆ ಸಿಗುತ್ತಿರುವುದು ಆನೆ ಬಲ ಬಂದಂತಾಗಿದೆ. ಇದರೊಂದಿಗೆ ಇತರ ಬೆಳೆಗಳಿಗೂ ಪಾರದರ್ಶಕ ಸಮೀಕ್ಷೆ ನಡೆದು ವಿಮಾ ಹಣ ದೊರೆಯುವಂತಾದರೆ ಯೋಜನೆಯ ಉದ್ದೇಶ ಯಶಸ್ವಿಯಾಗುತ್ತದೆ’ ಎನ್ನುತ್ತಾರೆ ಒಣ ದ್ರಾಕ್ಷಿ ಸಂಸ್ಕರಣ ಘಟಕದ ಅಧ್ಯಕ್ಷ ಶಹಜಹಾನ ಡೊಂಗರಗಾಂವ.
‘ಅಥಣಿ ತಾಲ್ಲೂಕಿನಲ್ಲಿ 2,153 ಎಕರೆ ಭೂಮಿಯಲ್ಲಿ 630 ರೈತರು ದಾಳಿಂಬೆ ಬೆಳೆಯುತ್ತಿದ್ದಾರೆ. ದುಂಡಾಣು ರೋಗದಿಂದ ಕುಟುಂಬಗಳು ಬೀದಿಗೆ ಬರುತ್ತಿವೆ. ವಿಮೆಯನ್ನು ಪ್ರತಿ ವರ್ಷವೂ ತುಂಬುತ್ತಿದ್ದೇವೆ. ಬೆಳೆಯು ರೋಗಕ್ಕೆ ತುತ್ತಾದರೂ ವಿಮೆ ಹಣ ಏಕೆ ದೊರೆಯುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರವೇ ದೊರೆಯುತ್ತಿಲ್ಲ. ಇದರಿಂದ ನಾವು ಯೋಜನೆಯಿಂದ ಹಿಂದೆ ಸರಿಯುವುದು ಅನಿವಾರ್ಯವಾಗುತ್ತಿದೆ’ ಎಂದು ದಾಳಿಂಬೆ ಬೆಳೆಗಾರ ಸಂಗಮೇಶ ಯಲ್ಲಡಗಿ ತಿಳಿಸಿದರು.
ಸಮರ್ಪಕ ಅನುಷ್ಠಾನವಾಗಲಿ
ವಿಮಾ ಯೋಜನೆ ಅತ್ಯುತ್ತಮವಾಗಿದೆ. ಆದರೆ, ವಿಮಾ ಕಂಪನಿ ಹಾಗೂ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೌಲಭ್ಯವು ರೈತರಿಗೆ ಮುಟ್ಟುತ್ತಿಲ್ಲದಿರುವ ಉದಾಹರಣೆ ಇದೆ. ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿ, ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು.
– ಶಾಂತೇಶ ಯಮನಪ್ಪ ಹುಬ್ಬಳ್ಳಿ, ರೈತ, ಗದ್ದಿಕರವಿನಕೊಪ್ಪ
ಹಾರಿಕೆ ಉತ್ತರ ಕೊಡುತ್ತಾರೆ
ಚಲೋ ಯೋಜನೆ ಐತಿ ಅಂತ ವಿಮೆ ಮಾಡಿಸಿದೆವ್ರೀ. ಕಷ್ಟದಾಗ ಸಹಾಯ ಅಕ್ಕೆತೀ ಅಂತ ಮಾಡ್ತವೆರ್ರಿ. ಒಮ್ಮೊಮ್ಮೆ ನಮ್ಮ ಬೆಳಿ ಹಾಳಾದ್ರೂ ವಿಮಾ ಸರಿಯಾಗಿ ಸಿಗುದಿಲ್ರೀ. ಅಧಿಕಾರಿಗಳನ್ ಕೇಳಿದ್ರ ಹಾರಿಕೆ ಉತ್ರಾ ಕೊಡತಾರೀ.
– ಫಕ್ಕೀರಪ್ಪ ಚಂದರಗಿ, ರೈತ, ಗದ್ದಿಕರವಿನಕೊಪ್ಪ, ಬೈಲಹೊಂಗಲ ತಾಲ್ಲೂಕು
ಹೆಚ್ಚಿನವರು ಭಾಗವಹಿಸಬೇಕು
ಕೃಷಿ ಇಲಾಖೆಯಿಂದ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ. ರೈತರು ವಿಮಾ ಯೋಜನೆಯನ್ನು ಭದ್ರತೆ ಎಂದು ಭಾವಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನಿಯಮಾನುಸಾರ ಪರಿಹಾರ ದೊರೆಯುತ್ತದೆ.
– ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕ, ಕೃಷಿ ಇಲಾಖೆ
ವಿಮೆ ಸಿಗುತ್ತಿದೆ
ನಮ್ಮ ಭಾಗದಲ್ಲಿ ಪ್ರತಿ ವರ್ಷ ರೈತರಿಗೆ ಬೆಳೆ ವಿಮೆ ಸಿಗುತ್ತಿದೆ. ಇದರಿಂದ ತುಂಬುವವರ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರಕೃತಿ ವಿಕೋಪದಿಂದ ನಷ್ಟ ಅನುಭವಿಸುತ್ತಿದ್ದ ರೈತನ ಆರ್ಥಿಕ ಮಟ್ಟ ಕುಸಿಯದಂತೆ ವಿಮೆ ಕೈ ಹಿಡಿಯುತ್ತಿದೆ. ಸಾಕಷ್ಟು ಜಾಗೃತಿ ಮೂಡಿಸಲಾಗಿದೆ.
– ಅಕ್ಷಯಕುಮಾರ ಉಪಾಧ್ಯಾಯ, ತೋಟಗಾರಿಕೆ ಅಧಿಕಾರಿ, ತೆಲಸಂಗ
(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಬಸವರಾಜ ಶಿರಸಂಗಿ, ಬಾಲಶೇಖರ ಬಂದಿ, ಶಿವಾನಂದ ವಿಭೂತಿಮಠ, ಜಗದೀಶ ಖೊಬ್ರಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.