ಬೆಳಗಾವಿ: ಮೂಢನಂಬಿಕೆ ನಂಬಿ ತನ್ನ ಇಬ್ಬರು ಪುತ್ರಿಯರಿಗೆ ಫಿನಾಯಿಲ್ ಕುಡಿಸಿ ಕೊಂದಿದ್ದ ಅನಿಲ ಚಂದ್ರಕಾಂತ ಬಾಂದೇಕರ ಎಂಬ ಆರೋಪಿಗೆ ಇಲ್ಲಿನ ಆರನೇ ಹೆಚ್ಚುವರಿ ಜಿಲ್ಲಾ ಸೆಷೆನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ₹20 ಸಾವಿರ ದಂಡ ವಿಧಿಸಿ, ಮಂಗಳವಾರ ತೀರ್ಪು ಪ್ರಕಟಿಸಿದೆ.
ತಾಲ್ಲೂಕಿನ ಕಂಗ್ರಾಳಿ ಕೆ.ಎಚ್ ಗ್ರಾಮದ ಅನಿಲ ಬಾಂದೇಕರ, ತನ್ನ ಮನೆ ಮಾರಾಟಕ್ಕೆ ಮುಂದಾಗಿದ್ದ. ಖರೀದಿಗೆ ಯಾರೂ ಬಾರದ್ದರಿಂದ ನೊಂದುಕೊಂಡಿದ್ದ.
ಇಬ್ಬರು ಮಕ್ಕಳನ್ನು ಕೊಂದು, ತನ್ನ ರಕ್ತವನ್ನು ಶಿವಲಿಂಗಕ್ಕೆ ಹಾಕಿದರೆ ಮನೆ ಮಾರಾಟವಾಗುತ್ತದೆ ಎಂದು ಕನಸು ಬೀಳುತ್ತಿತ್ತು. ಅದನ್ನು ನಂಬಿ ಪುತ್ರಿಯರಾದ ಅಂಜಲಿ(8) ಮತ್ತು ಅನನ್ಯ(4) ಅವರನ್ನು 2021ರ ಜುಲೈ 14ರಂದು ಕೊಲೆ ಮಾಡಿದ್ದ. ನಂತರ ತನ್ನ ರಕ್ತವನ್ನು ಜಗಲಿಯಲ್ಲಿದ್ದ ಶಿವಲಿಂಗಕ್ಕೆ ಹಾಕಿದ್ದ. ಈ ಸಂಬಂಧ ಪತ್ನಿ ಜಯಾ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಗಿನ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ಹಿರೇಮಠ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾದೀಶ ಎಚ್.ಎಸ್.ಮಂಜುನಾಥ ತೀರ್ಪು ಪ್ರಕಟಿಸಿದರು. ಸರ್ಕಾರಿ ಅಭಿಯೋಜಕಿ ನಸ್ರೀನ್ ಬಂಕಾಪುರೆ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.