ADVERTISEMENT

ಭಾರತದೆಡೆ ಹೆಚ್ಚಿದ ವಿಶ್ವದ ನಿರೀಕ್ಷೆ: ಗಡ್ಕರಿ

ಡಾ. ಪ್ರಭಾಕರ ಕೋರೆ ಅವರಿಗೆ ನಾಗರಿಕ ಗೌರವ ಸತ್ಕಾರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 14:00 IST
Last Updated 4 ಅಕ್ಟೋಬರ್ 2024, 14:00 IST
ನಿಪ್ಪಾಣಿಯ ವಿಎಸ್‍ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಾ. ಪ್ರಭಾಕರ ಕೋರೆ ಅವರಿಗೆ ಕೇಂದ್ರ ಸಚಿವ ನಿತಿನ ಗಡ್ಕರಿ, ಪ್ರಲ್ಹಾದ ಜೋಶಿ, ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸತ್ಕರಿಸಿದರು. ಮಹಾಂತೇಶ ಕವಟಗಿಮಠ, ಪ್ರಕಾಶ ಹುಕ್ಕೇರಿ, ಚಂದ್ರಕಾಂತ ಕೋಠಿವಾಲೆ, ಶಶಿಕಳಾ ಜೊಲ್ಲೆ, ಉಮಾ ಕೋಠಿವಾಲೆ, ಜಗದೀಶ ಕವಟಗಿಮಠ ಮತ್ತಿತರರು ಇದ್ದಾರೆ.
ನಿಪ್ಪಾಣಿಯ ವಿಎಸ್‍ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಡಾ. ಪ್ರಭಾಕರ ಕೋರೆ ಅವರಿಗೆ ಕೇಂದ್ರ ಸಚಿವ ನಿತಿನ ಗಡ್ಕರಿ, ಪ್ರಲ್ಹಾದ ಜೋಶಿ, ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸತ್ಕರಿಸಿದರು. ಮಹಾಂತೇಶ ಕವಟಗಿಮಠ, ಪ್ರಕಾಶ ಹುಕ್ಕೇರಿ, ಚಂದ್ರಕಾಂತ ಕೋಠಿವಾಲೆ, ಶಶಿಕಳಾ ಜೊಲ್ಲೆ, ಉಮಾ ಕೋಠಿವಾಲೆ, ಜಗದೀಶ ಕವಟಗಿಮಠ ಮತ್ತಿತರರು ಇದ್ದಾರೆ.   

ನಿಪ್ಪಾಣಿ: ‘ತಾಂತ್ರಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿಭಾವಂತ ಮಾನವಶಕ್ತಿ ಕೇವಲ ಭಾರತದಲ್ಲಿ ಮಾತ್ರ ಇರುವುದರಿಂದ ಇಡಿ ವಿಶ್ವವು ಭಾರತವನ್ನು ಬಹು ನಿರೀಕ್ಷೆಯಿಂದ ಗಮನಿಸುತ್ತಿದೆ. ಇಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ತಯಾರಿಸುವ ಕಾರ್ಯ ಕೆ.ಎಲ್.ಇ.ಯಂತಹ ಶಿಕ್ಷಣ ಸಂಸ್ಥೆಗಳು ಈ ಭಾಗದಲ್ಲಿ ಮಾಡುತ್ತಿವೆ’ ಎಂದು ಕೇಂದ್ರ ರಸ್ತೆ, ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತೀನ ಗಡ್ಕರಿ ಹೇಳಿದರು.

ನಿಪ್ಪಾಣಿಯ ವಿಎಸ್‍ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜರುಗಿದ ಡಾ. ಪ್ರಭಾಕರ ಕೋರೆ ನಾಗರಿಕ ಗೌರವ ಸತ್ಕಾರ ಮತ್ತು ಎಂಬಿಎ-ಎಂಸಿಎ ಮಹಾವಿದ್ಯಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘₹ 22 ಲಕ್ಷ ಕೋಟಿ ಮೌಲ್ಯದ ಪೆಟ್ರೋಲ್, ಡೀಸಲ್‌ ಮತ್ತು ಗ್ಯಾಸ್ ಆಮದು ಮಾಡಿಕೊಳ್ಳುತ್ತೇವೆ. ಇದರಲ್ಲಿ ₹ 10 ಲಕ್ಷ ಕೋಟಿ ಇಥೆನಾಲ್ ಮೂಲಕ ಉಳಿಸಿದಲ್ಲಿ ದೇಶದ ಪ್ರತಿಯೊಬ್ಬ ರೈತ ಸಮೃದ್ಧರಾಗುತ್ತಾರೆ. ಸ್ಮಾರ್ಟ್ ಸಿಟಿಯೊಂದಿಗೆ ಸ್ಮಾರ್ಟ್ ಹಳ್ಳಿಗಳಾಗಲು ಸಮಯ ತಗಲುವುದಿಲ್ಲ. ಇಥೆನಾಲ್ ಉತ್ಪಾದನೆಯಿಂದ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯ’ ಎಂದರು.

ADVERTISEMENT

‘ನಮ್ಮ ರೈತ ಅನ್ನದಾತದೊಂದಿಗೆ, ಊರ್ಜಾದಾತ, ಇಂಧನದಾತನಿದ್ದಾನೆ. ಕರ್ನಾಟಕದ ಬೆಳಗಾವಿ ಮತ್ತು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ರೈತರು ಪರಿಶ್ರಮಿಸಿದಲ್ಲಿ ಕೇವಲ ಭಾರತಕ್ಕಲ್ಲ ಇಡಿ ವಿಶ್ವಕ್ಕೆ ವಾಯು ಇಂಧನ ಪೂರೈಸುವ ಜಿಲ್ಲೆಗಳಾಗಲು ಸಾಧ್ಯವಾಗಲಿದೆ. ಅಷ್ಟು ಸಾಮರ್ಥ್ಯ ಉಭಯ ರಾಜ್ಯದ ಉಭಯ ಜಿಲ್ಲೆಗಳಲ್ಲಿಯ ರೈತರಲ್ಲಿದೆ. ಮನುಷ್ಯನಿಗೆ ಆಮ್ಲಜನಕ ಅವಶ್ಯಕತೆಯಿದೆ. ಹಾಗೆಯೇ ಕೃಷಿಗೆ ಸಾವಯವ ಗೊಬ್ಬರದ ಅವಶ್ಯಕತೆಯಿದೆ. ನ್ಯಾನೊ ಯೂರಿಯಾ ಮತ್ತು ನ್ಯಾನೊ ಗೊಬ್ಬರದಿಂದ ನನ್ನ ಭಾಗದಲ್ಲಿ ಪ್ರತಿ ಎಕರೆ ಸರಾಸರಿ 88 ಟನ್ ಕಬ್ಬು ಉತ್ಪಾದಿಸಲಾಗುತ್ತಿದೆ. ಅದೇ ಈ ಭಾಗದಲ್ಲಿ ಪ್ರಯತ್ನಿಸಿದಲ್ಲಿ ಪ್ರತಿ ಎಕರೆಗೆ 110ಕ್ಕೂ ಹೆಚ್ಚು ಟನ್ ಕಬ್ಬು ಉತ್ಪಾದಿಸಬಹುದು. ಈ ದೇಶದಲ್ಲಿ ನೀರಿನ ಕೊರತೆಯಿಲ್ಲ. ನೀರು ವ್ಯಯಿಸುವುದು ಎಲ್ಲರಿಗೂ ಗೊತ್ತು. ಆದರೆ ನೀರು ಉಳಿತಾಯ ಮಾಡುವುದು ಬಹಳ ಅವಶ್ಯವಿದೆ. ಅದರ ಮೇಲೆ ನಿಮ್ಮ ಭವಿಷ್ಯ ಸುರಕ್ಷಿತವಿರಲಿದೆ’ ಎಂದರು.

‘ಇಂದಿನ ಸತ್ಕಾರ ಡಾ. ಪ್ರಭಾಕರ ಕೋರೆ ಅವರ ಹೆಸರಿಗೆ ಮಾತ್ರ ಅಲ್ಲ, ಅವರ ವ್ಯಕ್ತಿತ್ವಕ್ಕೆ, ಅವರ ಸಾಧನೆಗೆ ಆಗಿದೆ. ಅವರು ಮಾಡಿದ ಕಾರ್ಯಗಳನ್ನು ನಾನು ನನ್ನ ಬದುಕಿನಲ್ಲಿ ಮಾಡಲು ಪ್ರಯತ್ನಿಸುವೆ ಎಂದು ಯುವವರ್ಗದಲ್ಲಿ ಅನಿಸಿದಲ್ಲಿ ಈ ಸತ್ಕಾರ ಸಾರ್ಥಕವಾಗುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಲ್ಹಾದ ಜೋಶಿ ಮಾತನಾಡಿ ‘ಇಥೆನಾಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಪ್ರಮುಖರಲ್ಲಿ ಸಚಿವ ಗಡ್ಕರಿ ಒಬ್ಬರು. ಅವರ ಸೇವೆ ಹೀಗೆಯೇ ಮುಂದುವರಿಯಲಿ’ ಎಂದರು.

ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ ‘ಜನರ ಸೇವೆಗೆ ಆದ್ಯತೆ ನೀಡಿದ ಡಾ. ಕೋರೆ ಅವರ ಅವರಿಗೆ ಸತ್ಕಾರ ಅರ್ಹವಾದದ್ದು. ಅಧಿಕಾರ ಬರುತ್ತದೆ, ಹೋಗುತ್ತದೆ, ಆದರೆ ಸಾರ್ವಜನಿಕ ಸೇವೆ ನಿರಂತರವಾಗಿರಬೇಕು’ ಎಂದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ‘ಚಿಕ್ಕ ಸಸಿಯನ್ನು ವಿಶಾಲವಾದ ಮರವನ್ನಾಗಿ ಪರಿವರ್ತಿಸಿದ ಕೀರ್ತಿ ಡಾ. ಕೊರೆ ಅವರಿಗೆ ಸಲ್ಲುತ್ತದೆ. ಅವರ 40 ವರ್ಷದ ಶೈಕ್ಷಣಿಕ ಸೇವೆ ಶಾಶ್ವತವಾಗಿ ಉಳಿಯಲಿದೆ. ಅವರ ಕಾರ್ಯ ಇತಿಹಾಸದಲ್ಲಿ ಅಜರಾಮರವಾಗಲಿ’ ಎಂದರು.

ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ ಕೋರೆ ಮತ್ತು ಆಶಾ ಕೋರೆ ದಂಪತಿಯನ್ನು ಕೇಂದ್ರ ಸಚಿವರು, ಅತಿಥಿಗಳು ಪುಷ್ಪಹಾರ ಹಾಕಿ, ಕಾಣಿಕೆ ನೀಡಿ ಸನ್ಮಾನಿಸಿದರು.

ಶಾಸಕಿ ಶಶಿಕಲಾ ಜೊಲ್ಲೆ, ಗಣೇಶ ಹುಕ್ಕೇರಿ, ಅರವಿಂದ ಬೆಲ್ಲದ ಮಹೇಶ ತೆಂಗಿನಕಾಯಿ, ವಿಠ್ಠಲ್ ಹಲಗೇಕರ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಸುಭಾಷ ಜೋಶಿ, ರಾಜ್ಯ ಸಹಕಾರ ಸಂಘದ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಉತ್ತಮ ಪಾಟೀಲ, ವಿದ್ಯಾ ಸಂವರ್ಧಕ ಮಂಡಳದ ವಾಯಿಸ್-ಚೇರಮನ್ ಪಪ್ಪು ಪಾಟೀಲ, ಉಪಾಧ್ಯಕ್ಷ ಸುನೀಲ ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ರಜತ ಢೋಲೆ, ಹರಿಶ್ಚಂದ್ರ ಶಾಂಡಗೆ, ಸ್ವಾಗತ ಸಮಿತಿಯ ಸದಸ್ಯ ಪ್ರಕಾಶ ಶಹಾ ಇದ್ದರು.

‘ನಿಪ್ಪಾಣಿಯೊಂದಿಗೆ ಉತ್ತಮ ಬಾಂಧವ್ಯ’

ಸತ್ಕಾರ ಸ್ವೀಕರಿಸಿದ ಡಾ. ಪ್ರಭಾಕರ ಕೋರೆ ಮಾತನಾಡಿ ‘ನಿಪ್ಪಾಣಿಯಲ್ಲಿ ತಂಬಾಕು ಫೆಡರೇಶನ್ ಸ್ಥಾಪಿಸಿದ್ದೆ. ಅದರ ಅದ್ಯಕ್ಷತೆ ಜವಾಬ್ದಾರಿಗೆ ಇಲ್ಲಿಯ ತಂಬಾಕು ವ್ಯಾಪಾರಸ್ಥರು ನನ್ನನ್ನೇ ಒಪ್ಪಿಸಿದ್ದರು. ಅದಕ್ಕೆ ಈ ನಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ನನಗೆ ಉತ್ತಮ ಬಾಂಧವ್ಯವಿದೆ. ಸತ್ಕರಿಸಿದ ಎಲ್ಲರ ಋಣಿಯಾಗಿದ್ದೇನೆ’ ಎಂದರು. ‘ಆಯುರ್ವೇದ ಆಸ್ಪತ್ರೆ ಶೀಘ್ರ ಆರಂಭ’ ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾತನಾಡಿ ‘ಕರಿ ಹೆಂಚಿನ ಸಾಧಾರಣ ಕಟ್ಟಡದಲ್ಲಿ ಶಾಲೆ ಆರಂಭಿಸಲಾಗಿತ್ತು. ಅಲ್ಲದೆ ಹಲವಾರು ಜನರು ದೇಣಿಗೆ ನೀಡಿದ್ದರಿಂದ ಅವರ ಹೆಸರಿನಲ್ಲಿ ಒಂದೊಂದು ಕೊಠಡಿ ನಿರ್ಮಿಸಲಾಗಿತ್ತು. ನರ್ಸರಿ ಮತ್ತು ಆಯುರ್ವೇದ ಆಸ್ಪತ್ರೆ ವಿಎಸ್‍ಎಂದಿಂದ ಆರಂಭಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.