ಮೂಡಲಗಿ: ಹಲವು ದೇವಾಲಯಗಳ ತೊಟ್ಟಿಲಾಗಿರುವ ತಾಲ್ಲೂಕಿನ ಕಲ್ಲೋಳಿ ಗ್ರಾಮದ ‘ದೇವರ ಕಲ್ಲೋಳಿ’ ಎಂದೇ ಜನಜನಿತ. ಈ ಊರಿಗೆ ಐತಿಹಾಸಿಕ ಹಾಗೂ ಆಧ್ಯಾತ್ಮಿಕ ನೆಲೆ ಕಟ್ಟಿಕೊಟ್ಟಿದ್ದು ಸಿದ್ಧಾರೂಢ ಮಠದ ವೇದಾಂತ ಪರಿಷತ್ತು. ಈ ಪರಿಷತ್ ಈಗ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದೆ. ಆಗಸ್ಟ್ 29ರಿಂದ ಸೆಪ್ಟೆಂಬರ್ 1ರವರೆಗೆ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
ಇತಿಹಾಸ: 19ನೇ ಶತಮಾನದಲ್ಲಿ ಪ್ರಸಿದ್ಧರಾಗಿದ್ದ ಸಿದ್ಧಿಪುರುಷ ಸಿದ್ಧಾರೂಢರು ಲೋಕ ಕಲ್ಯಾಣದ ಸಂಚಾರ ಮಾಡಿ ಕಲ್ಲೋಳಿಗೆ ಬಂದು, ಇಲ್ಲಿ ಹರಿಯುವ ಪೌರಾಣಿಕ ಮಹತ್ವ ಪಡೆದ ಇಂದ್ರವೇಣಿ ಹಳ್ಳದ ಪಕ್ಕದ ನೆಲವನ್ನು ಸ್ಪರ್ಶಿಸಿದರು. ಅವರು ನಿಂತು– ನಿರ್ಗಮಿಸಿದ್ದ ಸ್ಥಳವನ್ನೇ ಗ್ರಾಮದ ಪೂರ್ವಜರು ಪಾವನ ಸ್ಥಳವನ್ನಾಗಿಸಿ ಆರಾಧಿಸುತ್ತ ಬಂದಿದ್ದಾರೆ.
1930 ದಶಕದಲ್ಲಿ ಸಿದ್ಧಾರೂಢರ ಕುಟೀರವನ್ನು ಇಲ್ಲಿ ನಿರ್ಮಿಸಲಾಯಿತು. ನಿತ್ಯ ಧ್ಯಾನ, ಭಜನೆ ಮಾಡಿಕೊಂಡು ಬರಲಾಯಿತು. ಊರು ಬೆಳೆದಂತೆ ಸಿದ್ಧಾರೂಢರಿಗೆ ಭಕ್ತರ ಸಂಖ್ಯೆ ಅಧಿಕವಾಗಿ, 1985ರಲ್ಲಿ ಟ್ಟಸ್ಟ್ ಸ್ಥಾಪಿಸಿ, ಆ ಮೂಲಕ ಮಠವನ್ನು ಬೆಳೆಸಿದರು.
ಜನಪ್ರತಿನಿಧಿಗಳು ಸರ್ಕಾರದ ವಿವಿಧ ಯೋಜನೆಗಳಲ್ಲಿ ಕೊಡಿಸಿದ ಅನುದಾನ ಹಾಗೂ ಭಕ್ತರ ಅಪಾರ ದೇಣಿಗೆಯಿಂದ ಸಿದ್ಧಾರೂಢರ ಮಠವು ಬೃಹದ್ದಾಗಿ ಬೆಳೆದಿದೆ. ಸುಂದರ ಕಟ್ಟಡ ತಲೆ ಎತ್ತಿದ್ದು ಭಕ್ತರ ಶ್ರದ್ಧೆಯ ಕೇಂದ್ರವಾಗಿದೆ. ಮಠದ ಪಕ್ಕದಲ್ಲಿ ಇಂದ್ರವೇಣಿ ಹಳ್ಳ
ಹರಿಯುತ್ತದೆ. ಮಠದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮಗಳು, ಭಜನೆ, ಪ್ರವಚನ, ಪುರಾಣಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ. ಹಳ್ಳದ ಮೇಲೆ ಈ ರೀತಿಯ ಸತ್ಸಂಗಗಳು ಸುತ್ತಲಿನ ಜನರಿಗೆ ನೆಮ್ಮದಿ ನೀಡುತ್ತ ಬಂದಿವೆ.
ವೇದಾಂತ ಪರಿಷತ್ತಿನ ವಿಶೇಷ: ಈ ಮಠದ ಎಲ್ಲ ಶ್ರೇಯೋಭಿವೃದ್ಧಯು ಇಂಚಲದ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ
ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದುಕೊಂಡ ಬಂದಿವೆ. ಶ್ರೀಗಳ ಸಂಕಲ್ಪದಂತೆ 1972ರಲ್ಲಿ ಶ್ರಾವಣ ಮಾಸದಲ್ಲಿ ಸಿದ್ಧಾರೂಢರ ಮಠದಲ್ಲಿ ಅನೇಕ ಸತ್ಪುರುಷರನ್ನು ಬರಮಾಡಿ
ಕೊಂಡು ಮೊದಲ ವೇದಾಂತ ಪರಿಷತ್ ಪ್ರಾರಂಭಿಸಿದರು. ಹೀಗೆ ಪ್ರತಿ ವರ್ಷವೂ ಶ್ರಾವಣ ಮಾಸದಲ್ಲಿನಡೆದುಕೊಂಡು ಬಂದಿದೆ. ಪ್ರತಿ ಬಾರಿಯೂ ಇಂಚಲ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಈ ಪರಿಷತ್ತು ಈಗ 50 ವರ್ಷಗಳನ್ನು ಪೂರೈಸಿದ್ದು ವಿಶೇಷ.
50 ಪೂಜ್ಯರು: 50ನೇ ವರ್ಷಕ್ಕೆ ಕಾಲಿಟ್ಟ, ವೇದಾಂತ ಪರಿಷತ್ತಿನ ಸುವರ್ಣ ಮಹೋತ್ಸವಕ್ಕೆ ಕಾಶಿ, ಹರಿದ್ವಾರ ಸೇರಿದಂತೆ ನಾಡಿನ ವಿವಿಧೆಡೆಯಿಂದ 50 ಸಾಧು– ಸಂತರು, ಪೂಜ್ಯರು ಭಾಗವಹಿಸಲಿದ್ದಾರೆ. ನಾಲ್ಕು ದಿನಗಳವರೆಗೆ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ.
ಆ. 29ರಂದು ಬೆಳಿಗ್ಗೆ 9.30ಕ್ಕೆ ರಥೋತ್ಸವ ಹಾಗೂ ಕುಂಭೋತ್ಸವದೊಂದಿಗೆ ಪೂಜ್ಯರನ್ನು ಬರಮಾಡಿಕೊಳ್ಳುವರು. ಸಂಗೀತ, ಭಜನೆ, ಶ್ರೀಗಳ ತುಲಾಭಾರ, ಸಾಧಕರ ಸನ್ಮಾನ ಜರುಗಲಿವೆ. ಪಟ್ಟಣದಲ್ಲಿ ಜಾತಿ, ಧರ್ಮ ಎನ್ನದೆ, ಪಕ್ಷಾತೀತವಾಗಿ ಒಗ್ಗಟ್ಟಿನಿಂದ ಸಿದ್ಧಾರೂಢರ ಸೇವೆಗೆ ಭಕ್ತರು ಸಜ್ಜಾಗಿ
ನಿಂತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.