ADVERTISEMENT

ಕಬ್ಬಿನ ಬಿಲ್‌ ಪಾವತಿಸದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ: ಶಾಂತಕುಮಾರ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 8:28 IST
Last Updated 11 ಜೂನ್ 2024, 8:28 IST
   

ಬೆಳಗಾವಿ: ‘ರಾಜ್ಯದಲ್ಲಿ ಹಲವು ಸಕ್ಕರೆ ಕಾರ್ಖಾನೆಗಳು ಎಂಟು ತಿಂಗಳಿಂದ ₹700 ಕೋಟಿ ಕಬ್ಬಿನ ಬಿಲ್‌ ಬಾಕಿ ಉಳಿಸಿಕೊಂಡಿವೆ. ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ನಿಜವಾಗಿ ಕಾಳಜಿ ಇದ್ದರೆ, ಆ ಕಾರ್ಖಾನೆಗಳನ್ನು ವಶಕ್ಕೆ ಪಡೆದು ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರ ಶಾಂತಕುಮಾರ್ ಒತ್ತಾಯಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಸಕ್ತ ಸಾಲಿನಲ್ಲಿ 10.25 ಇಳುವರಿಯ ಕಬ್ಬಿಗೆ ಕೇಂದ್ರ ಸರ್ಕಾರ ₹3,400 ಎಫ್‌ಆರ್‌ಪಿ ನಿಗದಿಪಡಿಸಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಬಾರಿ ಕಬ್ಬಿನ ಇಳುವರಿ ಶೇ.30ರಷ್ಟು ಕುಸಿದಿದೆ. ಹೀಗಿರುವಾಗ ಉತ್ಪಾದನೆ ವೆಚ್ಚಕ್ಕಿಂತ ಕಡಿಮೆ ದರ ನಿಗದಿಗೊಳಿಸಿದ್ದು ನ್ಯಾಯಸಮ್ಮತವಲ್ಲ. ಮತ್ತೊಂದೆಡೆ ಕಾರ್ಖಾನೆಯವರು ಕಬ್ಬಿಗೆ ಕಡಿಮೆ ಇಳುವರಿ ತೋರಿಸಿ, ರೈತರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಬರ ಮತ್ತು ನೆರೆಯಿಂದ ಬೆಳೆಗಳ ಹಾನಿಗೆ ಪರಿಹಾರ ನೀಡಲು ಪರಿಗಣಿಸುತ್ತಿರುವ ಎನ್‌ಡಿಆರ್‌ಎಫ್ ಮಾನದಂಡವನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕು. ಹಾನಿಗೆ ಅತ್ಯಲ್ಪ ಪರಿಹಾರ ಕೊಡುವ ಬದಲಿಗೆ, ಪೂರ್ಣ ಪರಿಹಾರ ನೀಡಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಬರ ಮತ್ತು ನೆರೆಯಿಂದ ಹಾನಿಗೀಡಾದ ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ನೀತಿ ಜಾರಿಗೆ ತರಲು ರಾಜ್ಯದ ನೂತನ ಸಂಸದರು ಕೇಂದ್ರದ ಮೇಲೆ ಒತ್ತಡ ತರಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕಳಪೆ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಕಾನೂನು ಜಾರಿಗೆ ತರಬೇಕು. ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ನೀಡಬೇಕಿರುವ ₹750 ಕೋಟಿ ಪ್ರೋತ್ಸಾಹಧನ ತಕ್ಷಣ ಬಿಡುಗಡೆಗೊಳಿಸಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ವಿದ್ಯುತ್‌ ನಿಗಮಗಳು ರೈತರಿಂದ ಹೆಚ್ಚಿನ ಹಣ ಸಂಗ್ರಹಿಸುತ್ತಿರುವುದನ್ನು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದ ನಾಲ್ವರು ಸಂಸದರು ಕೇಂದ್ರ ಸಚಿವರಾಗಿದ್ದಾರೆ. ಇದರಿಂದ ಕರ್ನಾಟಕದ ಅಭಿವೃದ್ಧಿಗೆ ಅನುಕೂಲವಾಗಲಿದೆ. ಕರ್ನಾಟಕ ಹಾಗೂ ನೆರೆ ರಾಜ್ಯಗಳೊಂದಿಗೆ ವಿವಾದ ಉಂಟಾದಾಗ, ಕೇಂದ್ರ ಸಚಿವರು ಕೊಂಡಿಯಾಗಿ ಕೆಲಸ ಮಾಡಬೇಕು. ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ ರಾಜ್ಯದ ‍ಪರವಾಗಿ ಗಟ್ಟಿಯಾಗಿ ನಿಲ್ಲಬೇಕು. ಮಹದಾಯಿ, ಕಾವೇರಿ ನದಿಗಳ ವಿಚಾರದಲ್ಲಿ ರಾಜ್ಯದ ರೈತರಿಗೆ ಬಹಳ ವರ್ಷಗಳಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಲು ಸಂಸತ್ತಿನಲ್ಲಿ ಧ್ವನಿ ಎತ್ತಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಸುರೇಶ ಪಾಟೀಲ, ಗುರುಸಿದ್ದಪ್ಪ ಕೋಟಗಿ, ಹತ್ತಳ್ಳಿ ದೇವರಾಜ್, ಪರಶುರಾಮ ಎತ್ತಿನಗುಡ್ಡ, ರಮೇಶ ಹಿರೇಮಠ, ಶಾಸಪ್ಪ ನಾವಿ ಇದ್ದರು.

‘ಅಧಿಕಾರಿಗಳ ವಿರುದ್ಧ ಕ್ರಮವಾಗಲೇಬೇಕು’

‘ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ರಾಯಬಾಗ ತಾಲ್ಲೂಕಿನ ಮೂವರು ರೈತರಿಗೆ ಮಂಜೂರಾಗಿದ್ದ ಅನುದಾನವನ್ನು ರೈತರಿಗೆ ನೀಡದೆ ಅಧಿಕಾರಿಗಳು ವಂಚಿಸಿದ ಪ್ರಕರಣದಲ್ಲಿ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮವಾಗಲೇಬೇಕು’ ಎಂದು ಕುರಬೂರ ಶಾಂತಕುಮಾರ್‌ ಆಗ್ರಹಿಸಿದರು.

‘ಮೇಲಧಿಕಾರಿಗಳ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂದಕ್ಕೆ ಪಡೆದಿದ್ದೇವೆ. ನ್ಯಾಯ ಸಿಗದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.