ಬೈಲಹೊಂಗಲ: ಆಕಸ್ಮಿಕವಾಗಿ ಬೆಂಕಿ ತಗುಲಿದ್ದರಿಂದ ಸೋಯಾಬೀನ್ ಕಾಳಿನ ಬಣವೆ ಸುಟ್ಟು ಕರಕಲಾದ ಘಟನೆ ತಾಲ್ಲೂಕಿನ ದೊಡವಾಡ ಗ್ರಾಮದ ಬುಧವಾರ ತಡರಾತ್ರಿ ಸಂಭವಿಸಿದೆ.
ರೈತ ಸಿದ್ದಪ್ಪ ವೀರಭದ್ರಪ್ಪ ಹುದಲಿ ಅವರಿಗೆ ಸೇರಿದ ಬಣವೆಗೆ ಬೆಂಕಿ ಹೊತ್ತಿಕೊಂಡಿದೆ. ಬೈಲಹೊಂಗಲದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸಿದರು.
‘11 ಎಕರೆಯಲ್ಲಿ ಬೆಳೆದಿದ್ದ ಸೋಯಾಬೀನ್ ಕಾಯಿಗಳನ್ನು ಒಂದೆಡೆ ರಾಶಿ ಮಾಡಿ ಇಟ್ಟಿದ್ದೆವು. ಇದರಿಂದ ಸುಮಾರು ₹5 ಲಕ್ಷ ಕೈಗೆಟುಕಬಹುದು ಎಂದು ಅಂದಾಜಿಸಿದ್ದೆವು. ಆದರೆ, ಈಗ ಇಡೀ ಬೆಳೆ ಬೆಂಕಿಗೆ ಆಹುತಿಯಾಗಿದೆ. ವರ್ಷವಿಡೀ ಕಷ್ಟಪಟ್ಟು ದುಡಿದ ಫಸಲು ಕೈಗೆ ಬಾರದಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತ ಸಿದ್ದಪ್ಪ ಹುದಲಿ ಒತ್ತಾಯಿಸಿದರು.
ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.