ರವಿಕುಮಾರ ಎಂ.ಹುಲಕುಂದ
ಬೈಲಹೊಂಗಲ: ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ, ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಇದರೊಂದಿಗೆ ದೊಡ್ಡ ಗಾತ್ರದ ಮೀನುಗಳೂ ಹೆಚ್ಚಾಗಿ ಸಿಗುತ್ತಿವೆ. ಪಟ್ಟಣ ಹಾಗೂ ಸುತ್ತಲಿನ ನದಿ ತೀರದ ಗ್ರಾಮಗಳಲ್ಲಿ ಈಗ ಮೀನುಗಾರಿಕೆ ಹಾಗೂ ಖರೀದಿ ಭರ್ಜರಿಯಾಗಿ ನಡೆದಿದೆ.
ತಾಲ್ಲೂಕಿನ ನಯಾನಗರ ಗ್ರಾಮದ ಪ್ರತಿ ಮಳಿಗೆಯಲ್ಲೂ ಕನಿಷ್ಠ 100 ಕೆ.ಜಿಯಷ್ಟು ಮೀನುಗಳು ದಿನವೂ ಬಿಕರಿಯಾಗುತ್ತಿವೆ. ಮೀನು ಪ್ರಿಯರು ನದಿ ಮೀನು ಖರೀದಿಗೆ ಮುಗಿಬೀಳುತ್ತಿದ್ದಾರೆ. ಮೀನುಗಾರರು ಝಣಝಣ ಹಣ ಎಣಿಸಿಕೊಳ್ಳುವ ದಿನಗಳು ಬಂದಿವೆ. ನಯಾನಗರದ ಮಲಪ್ರಭಾ ನದಿ ದಡದಲ್ಲಿರುವ ಮೀನು ಮಾರಾಟ ಕೇಂದ್ರದಲ್ಲಿ ಮೀನು ಖರೀದಿ ಜೋರಾಗಿ ನಡೆದಿದೆ.
ನದಿಯಲ್ಲಿ ಹೊಸ ನೀರು ಹರಿದು ಬರುತ್ತಿರುವುದರಿಂದ ಬಲೆಗೆ ಭಾರಿ ಗಾತ್ರದ ಮೀನುಗಳು ಸಿಗುತ್ತಿವೆ. ಗ್ರಾಹಕರು ಮೀನು ಮಾರಾಟ ಕೇಂದ್ರಕ್ಕೆ ಬಂದು ಖರೀದಿಸುತ್ತಿದ್ದಾರೆ.ದಿಲಾವರ, ಮೀನು ವ್ಯಾಪಾರಿ
ಸಮುದ್ರ ಮತ್ಸ್ಯಗಳ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಅಗ್ಗದಲ್ಲಿ ಸಿಗುವ ಹೊಳೆ, ಕೆರೆಗಳ ಮೀನುಗಳತ್ತ ಗ್ರಾಹಕರು ವಾಲಿದ್ದಾರೆ. ಮಲಪ್ರಭಾ ನದಿಗೆ ಮಳೆಯಿಂದ ಹೊಸ ನೀರು ಹರಿದು ಬರುತ್ತಿದ್ದು, ನದಿಯಲ್ಲಿ ಸಿಗುವ ಮೀನುಗಳನ್ನು ಮೀನುಗಾರರು ಬಲೆ ಬಿಸಿ ಹಿಡಿದು ಮಾರಾಟ ಮಾಡುತ್ತಿದ್ದಾರೆ. ಪ್ರತಿನಿತ್ಯ ಕೆ.ಜಿ.ಗೆ ₹150 ರಿಂದ ₹280 ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಮೀನು ಪ್ರಿಯರು ಸಹಜವಾಗಿಯೇ ನದಿಯತ್ತ ಬಂದು ಮೀನುಗಳ ರುಚಿಗೆ ಮಾರು ಹೋಗುತ್ತಿದ್ದಾರೆ.
ನದಿ ದಡದಲ್ಲಿಯೇ ಮೀನು ತೊಳೆದು ತಾಜಾ ಮೀನುಗಳ ಫ್ರೈ ಮಾಡಿಕೊಡಲಾಗುತ್ತಿದೆ. ರುಚಿಯೂ ಚೆನ್ನಾಗಿರುತ್ತದೆ. ಮೀನು ಪ್ರಿಯರು ಒಮ್ಮೆ ಸವಿದು ನೋಡಬಹುದುಚಂದ್ರಶೇಖರ ವಾಲಿ, ಗ್ರಾಹಕ
4ರಿಂದ 10 ಕೆ.ಜಿ ತೂಕದ ಮೀನು
ಕೆರೆಯ ಒಂದೊಂದು ಮೀನುಗಳು ಒಂದು ಕೆ.ಜಿ.ಯಿಂದ ಪ್ರಾರಂಭವಾಗಿ ಸುಮಾರು 25ರಿಂದ 40 ಕೆ.ಜಿಯವರೆಗೆ ತೂಕ ಬರುತ್ತವೆ. ಇಂಥವು ಮೀನು ಪ್ರಿಯರನ್ನು ಹೆಚ್ಚು ಆಕರ್ಷಿಸುತ್ತಿದೆ. ಹೀಗೆ ನದಿಯಲ್ಲಿ ಹಿಡಿದಂಥ ಕನ್ನಡಿ ಮೀನು, ಮುರಗೋಡ ಮಡ್ಡ, ಜಿಂಗೆ, ಹಾವಮೀನು, ವಿವಿಧ ಜಾತಿಯ ಮೀನುಗಳು ಸುಮಾರು 4ರಿಂದ 10 ಕೆ.ಜಿ. ತೂಕದ್ದಾಗಿವೆ. ಗ್ರಾಹಕರು ಇದನ್ನು ಕೊಂಡೊಯ್ಯಲು ಮುಗಿಬೀಳುವುದು ವಿಶೇಷವಾಗಿದೆ.
ಅದರಲ್ಲೂ ಕಾಟ್ಲಾ, ರೋಹು, ಹುಲ್ಲುಗಂಡೆ ಮೀನುಗಳಿಗೆ ಬಹುಬೇಡಿಕೆ ಇದೆ. ಈ ಎಲ್ಲ ಮೀನುಗಳು ಖರೀದಿಗೆ ಗ್ರಾಹಕರು ಚಡಪಡಿಸುತ್ತಿದ್ದು, ಉತ್ತಮ ವ್ಯಾಪಾರ ನಡೆಯುತ್ತಿದೆ. ಆನಿಗೋಳ, ಜಾಲಿಕೊಪ್ಪ, ಬೆಳವಡಿ, ನಯಾನಗರ, ಗರ್ಜೂರ, ಸಂಗೊಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಮೀನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋಗಿ ಕುಟುಂಬ ಸಮೇತರಾಗಿ ಮೀನೂಟ ಸವಿಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.