ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸತತ ನಾಲ್ಕನೇ ಬಾರಿಗೆ ಪ್ರತಿನಿಧಿಸುತ್ತಿದ್ದ, ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಸೇರಿದಂತೆ ಹಲವು ಗಣ್ಯರ ನಿಧನ ಜಿಲ್ಲೆಯನ್ನು ಕಾಡಿತು. ವಿವಿಧ ಕ್ಷೇತ್ರದ ಕೊಂಡಿಗಳು ಕಳಚಿದ ವಿದ್ಯಮಾನಕ್ಕೆ 2020ನೇ ವರ್ಷ ಸಾಕ್ಷಿಯಾಯಿತು.
ಸುರೇಶ ಅಂಗಡಿ (66) ಅವರು ಸೆ.23ರಂದು ದೆಹಲಿಯ ಏಮ್ಸ್ ಅಸ್ಪತ್ರೆಯಲ್ಲಿ ಕೋವಿಡ್–19ನಿಂದ ಅಸುನೀಗಿದರು. ಅವರ ಅಕಾಲಿಕ ನಿಧನ ಇಲ್ಲಿನವರಲ್ಲಿ ಆಘಾತ ಮೂಡಿಸಿತು. ಕೋವಿಡ್ ನಿಯಮಾವಳಿಗಳ ಪ್ರಕಾರ, ಅಂತ್ಯಕ್ರಿಯೆಯನ್ನು ದೆಹಲಿಯಲ್ಲೇ ನಡೆಸಲಾಯಿತು. ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಆಗಲಿಲ್ಲವಲ್ಲ ಎಂಬ ನೋವು ಬಂಧುಗಳು, ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರನ್ನು ಕಾಡಿತು. ಕೇಂದ್ರ ಸಚಿವರು, ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಾದವರು ಅಂಗಡಿ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ತಾಲ್ಲೂಕಿನ ಶಿಂದೊಳ್ಳಿಯವರಾದ ‘ಮಾನವೀಯ ಕವಿ’ ಡಾ.ಬಿ.ಎ. ಸನದಿ (86) ಅನಾರೋಗ್ಯದಿಂದ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹೆರವಟ್ಟಾದ ಮನೆಯಲ್ಲಿ ಮಾರ್ಚ್ 31ರಂದು ನಿಧನರಾದರು.
ಆನೆಗಳ ಕುರಿತು ಸುದೀರ್ಘ ಅಧ್ಯಯನ ನಡೆಸಿ ಹೊಸ ಒಳ ನೋಟಗಳಿಂದ ವಿಶ್ವವನ್ನು ಬೆರಗುಗೊಳಿಸಿದ್ದ ಕನ್ನಡಿಗ ಅಜಯ್ ಎ.ದೇಸಾಯಿ (64) ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಸ್ವಗೃಹದಲ್ಲಿ ಹೃದಯಾಘಾತದಿಂದ ನ.20ರಂದು ನಿಧನರಾದರು. ಅರಣ್ಯ ಇಲಾಖೆ ಅಧಿಕಾರಿಗಳು ಅಂತಿಮ ದರ್ಶನ ಪಡೆದು, ಸಮವಸ್ತ್ರ ಗೌರವ ಸಲ್ಲಿಸಿದರು.
* ಏ.19: ಭಾವೈಕ್ಯಕ್ಕೆ ಹೆಸರಾದ ಮೂಡಲಗಿಯ ಶಿವಬೋಧರಂಗ ಮಠದ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ (66) ಹೃದಯಾಘಾತದಿಂದ ದೇಹ ತ್ಯಾಗ ಮಾಡಿದರು.
* ಜೂನ್ 2: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ನ್ಯಾಯಾಲಯದಲ್ಲಿ ವಾದ ಮಂಡಿಸಲು ಬಂದಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಆತಿಥ್ಯ ನೀಡಿದ್ದ ಚಿಕ್ಕೋಡಿ ತಾಲ್ಲೂಕು ಕರೋಶಿಯ ಶತಾಯುಷಿ ಜಿಗನಬಿ ಪಟೇಲ ನಿಧನ.
* ಆ.9: ಗೋಕಾಕ ನಗರಸಭೆ ಸದಸ್ಯ ಹಾಗೂ ಸಚಿವ ರಮೇಶ ಜಾರಕಿಹೊಳಿ ಆಪ್ತರಾಗಿದ್ದ ಎಸ್.ಎ. ಕೋತ್ವಾಲ್ (61) ಅನಾರೋಗ್ಯದಿಂದ ನಿಧನ.
* ಆ.22: ಎಸ್‌ಜಿಬಿಐಟಿ ಕಾಲೇಜಿನ ಅಧ್ಯಕ್ಷರಾಗಿದ್ದ ಎಸ್.ಜಿ. ಸಂಬರಗಿಮಠ (77) ಅನಾರೋಗ್ಯದಿಂದ ನಿಧನ.
* ಆ. 26: ಬೆಳಗಾವಿ ಮಹಾನಗರಪಾಲಿಕೆಯ ಪ್ರಥಮ ಕನ್ನಡ ಮೇಯರ್ ಹಾಗೂ ಗಡಿಯಲ್ಲಿ ಕನ್ನಡದ ಗಟ್ಟಿ ದನಿಯಾಗಿದ್ದ ಸಿದ್ದನಗೌಡ ಪಾಟೀಲ (87) ವಯೋಸಹಜ ಅನಾರೋಗ್ಯದಿಂದ ನಿಧನರಾದರು.
* ಸೆ. 19: ರಾಜಕೀಯ ಮುಖಂಡ, ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷರಾಗಿದ್ದಸವದತ್ತಿಯ ಆನಂದ ಚೋಪ್ರಾ (53) ಹೃದಯಾಘಾತದಿಂದ ನಿಧನ.
* ಸೆ. 30: ಮೂಡಲಗಿ ತಾಲ್ಲೂಕು ತುಕ್ಕಾನಟ್ಟಿಯ ಆಕಾಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರಕಾಶ ಬಾಗೇವಾಡಿ ನಿಧನ.
* ಅ. 10: ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಶಶಿಧರ ಘಿವಾರಿ (60) ಅನಾರೋಗ್ಯದಿಂದ ಕೊನೆಯುಸಿರೆಳೆದರು.
* ಡಿ.8: ಮೂಡಲಗಿ ತಾಲ್ಲೂಕು ತುಕ್ಕಾನಟ್ಟಿಯ ಅಮೋಘಸಿದ್ಧೇಶ್ವರ ಮಠ ಗಾಯತ್ರೀ ಪೀಠದ ಶಾಂತಾನಂದ ಭಾರತಿ ಸ್ವಾಮೀಜಿ ದೇಹ ತ್ಯಾಗ.
* ಡಿ. 8: ಕಿತ್ತೂರು ಸೈನಿಕ ಶಾಲೆ ಅಧ್ಯಕ್ಷ ಡಾ.ಮಹೇಂದ್ರ ಕಂಠಿ ಅವರು ತಾಯಿ ಹಾಗೂ ಮಾಜಿ ಮುಖ್ಯಮಂತ್ರಿ ದಿ.ಎಸ್.ಆರ್. ಕಂಠಿ ಅವರ ಪತ್ನಿ ಮರಿಬಸಮ್ಮ ಕಂಠಿ (103) ನಿಧನ.
* ಡಿ. 14: ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದವರಾದ, ದೇಶದ ಪ್ರಥಮ ‘ಹಿಂದ್ ಕೇಸರಿ’ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಶ್ರೀಪತಿ ಖಂಚನಾಳೆ (86) ಅನಾರೋಗ್ಯದಿಂದ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಿಧನರಾದರು.
* ಡಿ.21: ಕನ್ನಡ ಪರ ಹೋರಾಟಗಾರ ಮತ್ತು ಪತ್ರಕರ್ತ ರಾಘವೇಂದ್ರ ಜೋಶಿ (78) ಹೃದಯಾಘಾತದಿಂದ ನಿಧನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.