ಸವದತ್ತಿ: ಹತ್ತು ದಿನಗಳಿಂದ ಧಾರಾಕಾರ ಮಳೆ ಹಾಗೂ ಉಕ್ಕಿ ಹರಿದ ಜೀವನದಿ ಮಲಪ್ರಭಾ ಅರ್ಭಟಕ್ಕೆ ನಲುಗಿದ ಮುನವಳ್ಳಿ ಗ್ರಾಮ ಸಹಜಸ್ಥಿತಿಗೆ ಬರುತ್ತಿದೆ. ಆದರೆ, ಜನರು ಇನ್ನೂ ಆತಂಕದಲ್ಲಿದ್ದಾರೆ.
ಪ್ರವಾಹದಿಂದಾಗಿ 200ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಗ್ರಾಮ ಬಹುತೇಕ ಜಲಾವೃತಗೊಂಡ ಪರಿಣಾಮ ಕೆಸರುಮಯವಾಗಿದೆ. ದುರ್ವಾಸನೆ ಬೀರುತ್ತಿದೆ. ಮನೆಗಳು ಕೆಸರುಮಯವಾಗಿವೆ. ದವಸ–ದಾನ್ಯ, ಪಿಠೋಪಕರಣಗಳು, ಟಿ.ವಿ., ಫ್ರಿಜ್ ಮೊದಲಾದವು ನೀರು ಪಾಲಾಗಿ ಹಾಳಾಗಿವೆ. ಉಪಯೋಗಕ್ಕೆ ಬಾರದಂತಾಗಿವೆ. ಇದರಿಂದಾಗಿ ಜನರು ಅಪಾರ ನಷ್ಟ ಅನುಭವಿಸಿದ್ದಾರೆ.
ಆರ್‌ಸಿಸಿ ಮನೆಗಳನ್ನು ಹೊರತುಪಡಿಸಿದರೆ, ಮಣ್ಣಿನ ಹಾಗೂ ಹೆಂಚಿನ ಮನೆಗಳು ಯಾವಾಗ ಕುಸಿಯುತ್ತವೆಯೋ ಎನ್ನುವ ಆತಂಕದಲ್ಲಿ ನಿವಾಸಿಗಳಿದ್ದಾರೆ. ‘ನಮ್ಮಮನೆಯೊಳಗ ಹೋಗಾಕ್ ನಮಗ್ ಅಂಜಿಕಿ ಆಗಾಕತೈತಿರ್ರೀ’ ಎನ್ನುವ ನೋವಿನ ಹಾಗೂ ಆತಂಕದ ಮಾತುಗಳನ್ನು ಆಡುತ್ತಿದ್ದಾರೆ.
ಇಲ್ಲಿನ ಮರಾಠಾ ಚಾಳ ಮಲಪ್ರಭಾ ನದಿಯ ಅತಿ ಸಮೀಪದಲ್ಲಿರುವುದರಿಂದ ಅಲ್ಲಿರುವ 14 ಮನೆಗಳು ಸಂಪೂರ್ಣ ಕುಸಿದಿವೆ. ಅಲ್ಲಿನ ಪರಿಸ್ಥಿತಿ ನಿವಾಸಿಗಳನ್ನು ಕಂಗಾಲಾಗಿಸಿದೆ. ನಮಗೆ ಮನೆ ನಿರ್ಮಿಸಿಕೊಡಬೇಕು ಎಂದು ಅಗ್ರಹಿಸುತ್ತಿದ್ದಾರೆ. ಅಲ್ಲಿನ ನಿವಾಸಿ ಸುಧಾಕರ ಶೆಟ್ಟಿ, ‘ಕೊಡಲೇ ಸುರಕ್ಷಿತ ಸ್ಥಳದಲ್ಲಿ ನಿವಾಸ ಒದಗಿಸಿದಲ್ಲಿ ಹೆಚ್ಚು ಅನುಕೂಲವಾಗುತ್ತದೆ. ಇಲ್ಲಿರುವಷ್ಟೂ ದಿನಗಳು ಆತಂಕ ತಪ್ಪಿದ್ದಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಪರಿಹಾರ ಕೇಂದ್ರ:
ನಿರಾಶ್ರತರಿಗಾಗಿ ಪಂಚಲಿಂಗೇಶ್ವರ ದೇವಸ್ಥಾನ, ಸಾಯಿಮಂದಿರ, ಡಿ.ಪಿ.ವಿ.ಪಿ. ಸ್ಕೂಲ್ ಹಾಗೂ ಸೋಮಶೇಖರಮಠದಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ವ್ಯವಸ್ಥೆ ಮಾಡಲಾಗಿದ್ದು. ಅಲ್ಲಿರುವವರಿಗೆ ಯಾವುದೇ ತರಹದ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಯುವಕರು, ಆರ್.ಎಸ್.ಎಸ್. ಸಂಘ– ಸಂಸ್ಥೆಗಳ ಸದಸ್ಯರು ಸಂತ್ರಸ್ತರಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಮುಖಂಡ ಮಹಾಂತೇಶ ಬೆಲ್ಲದ ತಿಳಿಸಿದರು.
ಗಜಾನನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶ್ರೀಕಾಂತ ಮಿರಜಕರ ಹಾಗೂ ಸದಸ್ಯರು ಜಲಾವೃತಗೊಂಡಿದ್ದ ಮುನವಳ್ಳಿ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಮನೆಗಳಲ್ಲಿ ತುಂಬಿಕೊಂಡ ಕೆಸರನ್ನು ತಗೆಯುವ ಜೊತೆಗ ಅದನ್ನು ಗ್ರಾಮದಿಂದ ದೂರಕ್ಕೆ ಸಾಗಿಸಿದರು. ಅದಕ್ಕಾಗಿ 12 ಟ್ರ್ಯಾಕ್ಟರ್‌ಗಳನ್ನು ಬಾಡಿಗೆ ಪಡೆದಿದ್ದರು. ಸಂಘದ ಎಲ್ಲ ಸದಸ್ಯರು, ಯುವಕರು ಸಾಥ್ ನೀಡಿ ಊರಿನ ಸ್ವಚ್ಛತೆಗೆ ಶ್ರಮಿಸಿದರು.
ಮುನವಳ್ಳಿ ಸಮೀಪದ 33 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ನೀರಿನ ಪ್ರವಾಹದಿಂದಾಗಿ ಸ್ಥಗಿತಗೊಂಡಿದೆ. ವಿದ್ಯುತ್ ಪೂರೈಕೆ ಇಲ್ಲದಂತಾಗಿದೆ. ಬೆನಕಟ್ಟಿ ಗ್ರಾಮದ ಕಡೆಯಿಂದ ಪೂರೈಸಿದ್ದರಿಂದ ಬೆಳಕು ಕಾಣುವಂತಾಗಿದೆ.
ಹೊಸ ಸೇತುವೆ ಮೇಲೆ ನೀರು ಹರಿದ ಪರಿಣಾಮ ಸೇತುವೆ ಅಕ್ಕ–ಪಕ್ಕದ ರಸ್ತೆ ಕೊಚ್ಚಿಕೊಂಡು ಹೋಗಿದೆ. ಸಂಚಾರ ಬಂದ್ ಮಾಡಲಾಗಿದೆ. ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ. ಹಳೆ ಸೇತುವೆ ಮೂಲಕ ಸಂಚಾರ ಆರಂಭವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.