ಬೆಳಗಾವಿ: ‘ಗಣಿಗಾರಿಕೆ ಸ್ಥಳಗಳಲ್ಲಿ ತಜ್ಞರ ಉಪಸ್ಥಿತಿಯಲ್ಲಿ ಬೆಳಿಗ್ಗೆ ಅಥವಾ ಸಂಜೆ ವೇಳೆಯಲ್ಲಿ ಮಾತ್ರವೇ ಸ್ಫೋಟಿಸಬೇಕು. ಇದಕ್ಕೆ ಮುನ್ನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸೂಚಿಸಿದರು.
ಇಲ್ಲಿ ಮಂಗಳವಾರ ಗಣಿ ಮತ್ತು ಕ್ವಾರಿಗಳ ಮಾಲೀಕರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
‘ಪರವಾನಗಿ ಹಾಗೂ ಬ್ಲಾಸ್ಟಿಂಗ್ ತಜ್ಞರಿಲ್ಲದೆ ನಿಯಂತ್ರಿತ ಸ್ಫೋಟಕಗಳನ್ನು ಬಳಸಬಾರದು. ಒಂದು ವೇಳೆ ಬಳಸಿದರೆ ಅಂಥವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಆಯ ತಾಲ್ಲೂಕುಗಳಿಗೆ ಅನುಗುಣವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ಜೊತೆಗೂಡಿ ಎಲ್ಲಾ ಕ್ವಾರಿ ಮಾಲೀಕರು ವಾಟ್ಸ್‌ಆ್ಯಪ್ ಗ್ರೂಪ್‌ಗಳನ್ನು ರಚಿಸಬೇಕು. ಪ್ರತಿ ಸಿಡಿಮದ್ದುಗಳ ಮಾಹಿತಿಯನ್ನೂ ಆ ಗ್ರೂಪಲ್ಲಿ ಹಂಚಿಕೊಳ್ಳಬೇಕು. ಸ್ಫೋಟಕ ಸಾಮಗ್ರಿಗಳನ್ನು ಆಮದು ಅಥವಾ ರಫ್ತು ಮಾಡುವಾಗ ಅದರ ಮಾಹಿತಿಯನ್ನೂ ನೀಡಬೇಕು. ಇದರಿಂದ ಕಾನೂನುಬಾಹಿರ ಆಮದು ಅಥವಾ ರಫ್ತು ತಡೆಯಬಹುದಾಗಿದೆ ಮತ್ತು ಸಂಭವನೀಯ ಅನಾಹುತ ತಪ್ಪಿಸುವುದಕ್ಕೂ ಅವಕಾಶವಿದೆ’ ಎಂದು ತಿಳಿಸಿದರು.
‘ಬ್ಲಾಸ್ಟಿಂಗ್ ಜಾಗಗಳಲ್ಲಿ ಯಾವುದೇ ರೀತಿಯ ಸ್ಫೋಟಕ ಪದಾರ್ಥಗಳನ್ನು ಬಿಟ್ಟು ಬರಬಾರದು. ಆ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು. ಬ್ಲಾಸ್ಟಿಂಗ್ ಮಾಡುವ ಜಾಗದಲ್ಲಿ ಕೆಂಪು ಧ್ವಜವನ್ನು ಅಳವಡಿಸಬೇಕು, ಮುನ್ನೆಚ್ಚರಿಕೆ ನೀಡಬೇಕು ಹಾಗೂ ಒಬ್ಬ ಕಾವಲುಗಾರನನ್ನು ಕ್ವಾರಿ ಜಾಗದಲ್ಲಿ ನೇಮಕ ಮಾಡಬೇಕು’ ಎಂದು ಸೂಚಿಸಿದರು.
‘ನಮ್ಮ ಮುಖ್ಯ ಉದ್ದೇಶ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳುವುದಾಗಿದೆಯೇ ಹೊರತು, ಗಣಿಗಾರಿಕೆಯನ್ನು ನಿಲ್ಲಿಸುವುದಿಲ್ಲ. ಎಲ್ಲಾ ರೀತಿಯ ನಿಯಮಗಳನ್ನು ಅನುಸರಿಸಿ ಕಾನೂನು ಬದ್ಧವಾಗಿ ಚಟುವಟಿಕೆಗಳನ್ನು ನಡೆಸಬೇಕು ಎಂದು ತಿಳಿಸಿದರು.
‘ಸ್ಫೋಟಕಗಳ ಸಾಗಾಟದ ವಿವರ, ಸಂಖ್ಯೆ ಹಾಗೂ ಸಂಗ್ರಹದ ಬಗ್ಗೆಯೂ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಭೇಕು. ಇಲ್ಲವಾದರೆ, ಈ ಸ್ಫೋಟಕಗಳು ಭಯೋತ್ಪಾದಕರ ಕೈಸೇರಬಹುದು’ ಎಂದು ಎಚ್ಚರಿಕೆ ನೀಡಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಡಿವೈಎಸ್ಪಿಗಳು, ಸಿಪಿಐಗಳು ಹಾಗೂ ಕ್ವಾರಿಗಳ ಮಾಲೀಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.