ರಾಮದುರ್ಗ: ವಸತಿ ಶಾಲೆಯ ಆಹಾರ ಸೇವಿಸಿ ಸುಮಾರು 15 ವಿದ್ಯಾರ್ಥಿಗಳು ಅಸ್ವಸ್ಥಗೊಂಡು, ಮೂವರು ಆಸ್ಪತ್ರೆ ಸೇರಿದ ಘಟನೆ ತಾಲ್ಲೂಕಿನ ಸಾಲಹಳ್ಳಿಯ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಗುರುವಾರ ಬೆಳಿಗ್ಗೆ ಮಕ್ಕಳು ಪುಲಾವ್ ಸೇವಿಸಿದ ನಂತರ ಹೊಟ್ಟೆನೋವು ಕಾಣಿಸಿಕೊಂಡು ಕೆಲವು ವಿದ್ಯಾರ್ಥಿಗಳು ವಾಂತಿ ಮಾಡಿಕೊಳ್ಳಲು ಆರಂಭಿಸಿದರು. ಅದರಲ್ಲಿ ತೀವ್ರ ತೊಂದರೆ ಅನುಭವಿಸಿ ಭರತ್ ಲಮಾಣಿ, ಪ್ರಣವ್ ಹುಣಶಿಗಿಡದ, ಮತ್ತು ನಿತೀಶ್‌ಆಶಿರೊಟ್ಟಿ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಹೊಟ್ಟೆ ನೋವು ಮತ್ತು ವಾಂತಿ ಮಾಡಿಕೊಂಡ ಮಕ್ಕಳು ಬಹಳಷ್ಟು ಬಳಲಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಬೇಕಿತ್ತು. ಆದರೆ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ. ಯಾವುದೇ ಭಯ ಇಲ್ಲ. ಮಕ್ಕಳ ಆರೋಗ್ಯದಲ್ಲಿ ತೊಂದರೆ ಇಲ್ಲ ಎಂದು ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೌಖತ್‌ಅಲಿ ಸಂಗಟಿ ವರದಿಗಾರರಿಗೆ ಮಾಹಿತಿ ನೀಡಿದರು.
ಕಳೆದ ಎರಡು ತಿಂಗಳಿಂದ ಊಟದಲ್ಲಿ ಸ್ವಚ್ಛತೆ ಇಲ್ಲ ಎಂದು ವಾರ್ಡನ್ ಅವರಿಗೆ ದೂರಿದರೂ ಏನೂ ಪ್ರಯೋಜನವಾಗಿಲ್ಲ. ಅನ್ನದಲ್ಲಿ ನುಶಿ, ಹುಳ ಕಾಣಿಸಿದ್ದನ್ನು ಗಮನಕ್ಕೆ ತರಲಾಗಿದೆ. ವಾರದಲ್ಲಿ ಒಂದು ದಿನ ಮಾತ್ರ ವಸತಿ ಶಾಲೆಗೆ ಬರುವ ವಾರ್ಡನ್ ಮಕ್ಕಳ ಆರೋಗ್ಯ ಕಡೆಗೆ ಗಮನ ನೀಡುತ್ತಿಲ್ಲ ಎಂದು ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿ ಮಸಗುಪ್ಪಿಯ ನಿತೀಶ್ ಆಶಿರೊಟ್ಟಿ ಹೇಳಿದರು.
ಸುದ್ದಿ ತಿಳಿಯುತ್ತಿದ್ದಂತೆ ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಮತ್ತು ಬೆಳಗಾವಿಯಿಂದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಕ್ಕಳನ್ನು ನೋಡಲು ಪಾಲಕರು ಮತ್ತು ಸಾರ್ವಜನಿಕರು ಸಾಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲೂ ಜಮಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.