ADVERTISEMENT

ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಸದಾಶಿವರಾವ ಭೋಸಲೆ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 4:35 IST
Last Updated 15 ಏಪ್ರಿಲ್ 2021, 4:35 IST
ಸದಾಶಿವರಾವ ಬಾಪುಸಾಹೇಬ ಭೋಸಲೆ
ಸದಾಶಿವರಾವ ಬಾಪುಸಾಹೇಬ ಭೋಸಲೆ   

ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಶಾಸಕ ಹಾಗೂ ಅಪ್ಪಟ ಗಾಂಧಿವಾದಿಯಾಗಿದ್ದ ಸದಾಶಿವರಾವ ಬಾಪುಸಾಹೇಬ ಭೋಸಲೆ (101) ವಯೋಸಹಜ ಅನಾರೋಗ್ಯದಿಂದ ತಾಲ್ಲೂಕಿನ ಕಡೋಲಿ ಗ್ರಾಮದ ಸ್ವಗೃಹದಲ್ಲಿ ಗುರುವಾರ ಮುಂಜಾನೆ ನಿಧನರಾದರು.

ಅವರಿಗೆ ಪುತ್ರ, ಸೊಸೆ, ಮಗಳು, ಅಳಿಯ ಹಾಗೂ ಮೊಮ್ಮಕ್ಕಳು ಇದ್ದಾರೆ.ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ.

ಗಾಂಧೀಜಿ ಹಾಗೂ ವಿನೋಬಾ ಭಾವೆ ಅವರ ವಿಚಾರಧಾರೆಗಳನ್ನು ಪಾಲಿಸುತ್ತಿದ್ದರು. ಅವರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. 1946 (ಬ್ರಿಟಿಷ್ ಸರ್ಕಾರವು ಆಗ ಚುನಾವಣೆ ನಡೆಸಿತ್ತು. ಆಗ ಬೆಳಗಾವಿಯು ಮುಂಬೈ ಪ್ರಾಂತ್ಯಕ್ಕೆ ಒಳ‍ಪಟ್ಟಿತ್ತು. ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು) ಹಾಗೂ 1952 (ಹಿರೇಬಾಗೇವಾಡಿ ಕ್ಷೇತ್ರದಿಂದ)ರಲ್ಲಿ ಎರಡು ಬಾರಿ ಶಾಸಕರಾಗಿದ್ದವರು. ಸರ್ಕಾರವು ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಮತ್ತು ಸ್ಥಳೀಯರ ಪ್ರಗತಿಗೆ ಸಮಯ ಮೀಸಲಿಡಬೇಕೆಂದು 1954ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಭೂ ದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಗ್ರಾಮದ ಜನರಿಗೆ ನೂರು ಎಕರೆವರೆಗೆ ಜಮೀನನ್ನು ದಾನವಾಗಿ ನೀಡಿ ನೆರವಾಗಿದ್ದರು. ಆ ಭಾಗದಲ್ಲಿ ಆಗಾಗ ತರುಣ ಕ್ರಾಂತಿ ಶಿಬಿರ ನಡೆಸಿ, ಯುವಜನರಿಗೆ ಗಾಂಧಿ ತತ್ವದ ಬಗ್ಗೆ ತಿಳಿಸಿಕೊಡುತ್ತಿದ್ದರು. ಸ್ವತಃ ಸಾವಯವ ಕೃಷಿ ಮಾಡುತ್ತಿದ್ದರು. ಅದನ್ನು ಪಾಲಿಸುವಂತೆ ಇತರರಿಗೂ ಜಾಗೃತಿ ಮೂಡಿಸುತ್ತಿದ್ದರು. ತಮಗೆ ಹಾಗೂ ಪತ್ನಿಗೆ ಬೇಕಾದ ಖಾದಿ ಬಟ್ಟೆಗಳನ್ನು ಚರಕದಲ್ಲಿ ತಾವಾಗಿಯೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವರು ವಯೋಸಹಜ ಕಾರಣದಿಂದಾಗಿ ಜಮೀನಿಗೆ ಹೋಗುತ್ತಿರಲಿಲ್ಲ; ಚರಕ ಬಳಸುತ್ತಿರಲಿಲ್ಲ. ಸರಳ ಜೀವನ ಕ್ರಮದಿಂದಾಗಿ ಗಮನಸೆಳೆದಿದ್ದರು.

ಗಾಂಧಿ ತತ್ವ ಪಾಲನೆಯು ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು ಎಂದು ಪ್ರತಿಪಾದಿಸುತ್ತಿದ್ದರು ಹಾಗೂ ಕಾರ್ಯಕ್ರಮಗಳಲ್ಲಿ ಅದನ್ನೇ ಹೇಳುತ್ತಿದ್ದರು. ಕಡೋಲಿ ಸಮೀಪದ ದೇವಗಿರಿಯಲ್ಲಿ ಕಟ್ಟಡವೊಂಡನ್ನು ಕಟ್ಟಿಸಿ ಅದಕ್ಕೆ ‘ಗಾಂಧಿ ಘರ್‌’ ಎಂದು ಹೆಸರಿಟ್ಟಿದ್ದರು. ಗಾಂಧೀಜಿ ಅವರ ಸತ್ಯ, ಅಹಿಂಸೆ, ಗ್ರಾಮ ಸ್ವರಾಜ್ಯದ ತತ್ವಗಳನ್ನು ಪಸರಿಸುವ ಕೆಲಸವನ್ನು ಅದರ ಮೂಲಕ ಮಾಡುತ್ತಿದ್ದರು. ‘ಗಾಂಧಿ ಘರ್‌’ನಲ್ಲಿ ನೂಲು ತೆಗೆಯುವುದು, ಮಕ್ಕಳಿಗೆ ಅಕ್ಷರಾಭ್ಯಾಸ, ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ, ಕೃಷಿ, ಸ್ವಚ್ಛತೆ ಜಾಗೃತಿ ಮತ್ತು ಚಿಂತನ–ಮಂಥನ ಕಾರ್ಯಕ್ರಮಗಳು ನಡೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

‘ಸೆರೆಮನೆ ವಾಸ ನನಗೆ ಶಿಕ್ಷೆಯಾಗಿ ಗೋಚರಿಸಲಿಲ್ಲ. ಬದಲಿಗೆ ಅಲ್ಲಿ ನಾನು ಶಿಸ್ತು ಮತ್ತು ಸಂಯಮವನ್ನು ಕಲಿತೆ’ ಎಂದು ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.