ಬೆಳಗಾವಿ: ನಗರದಲ್ಲಿ ಗುರುವಾರ ತಡರಾತ್ರಿಯವರೆ ಸಂಭ್ರಮವೋ ಸಂಭ್ರಮ. 11 ದಿನಗಳ ಕಾಲ ಪೂಜಿತನಾದ ಗಣಪನ ಮೂರ್ತಿ ವಿಸರ್ಜನೆಯ ಕಾರಣ ಎಲ್ಲೆಡೆ ವೈಭವದ ಹೊಳೆ ಹರಿಯಿತು. ಎತ್ತ ನೋಡಿದರೂ ಜನಸಾಗರ, ಹೆಜ್ಜೆಹೆಜ್ಜೆಗೂ ಬೃಹತ್ ಮೂರ್ತಿಗಳ ಸಡಗರ. ಹಾಡುವವರು, ಕುಣಿಯುವವರು, ಸಂಗೀತ ವಾದಕರು... ಹೀಗೆ ಸೇರಿದವರೆಲ್ಲ ಮೆರವಣಿಗೆಗೆ ಇನ್ನಿಲ್ಲದ ಕಳೆ ತಂದರು.
ಜಿಲ್ಲೆಯಲ್ಲಿ ಕೂಡ ಈ ಬಾರಿ ಬರದ ಛಾಯೆ ಆವರಿಸಿದ್ದರಿಂದ ಬಹುಪಾಲು ಭಕ್ತರು ಈ ಸಂಕಷ್ಟ ನಿವಾರಣೆಗೆ ಪ್ರಾರ್ಥಿಸಿದರು.
ಇಳಿಸಂಜೆಯ ಹೊತ್ತಿಗೆ ಒಂದೊಂದೇ ಯುವಕ ಮಂಡಳ ಗಣಪನ ಮೂರ್ತಿಗಳನ್ನು ಹುತಾತ್ಮ ಚೌಕಿನತ್ತ ಸಾಗಿಸಿದವು. ಸಂಸದೆ ಮಂಗಲಾ ಅಂಗಡಿ, ಶಾಸಕರಾದ ಅಭಯ ಪಾಟೀಲ, ಆಸೀಫ್ ಸೇಠ್, ಮೇಯರ್ ಶೋಭಾ ಸೋಮನ್ನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಯ್ಯ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಮುಖಂಡರಾದ ಅನಿಲ ಬೆನಕೆ, ಮಹಾಂತೇಶ ಕವಟಗಿಮಠ ಮತ್ತು ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಪ್ರಮುಖರು ಮೆರವಣಿಗೆಗೆ ಚಾಲನೆ ನೀಡಿದರು.
ಅಲ್ಲಿಂದ ಆರಂಭವಾಯಿತು ಯುವಕ– ಯುವತಿಯರ ಸಂಭ್ರಮ. ಎದೆ ನಡುಗಿಸುವಂಥ ಡಿ.ಜೆ ಸೌಂಡ್ ಸಿಸ್ಟಂಗೆ ಯುವ ಸಮೂಹ ಇನ್ನಿಲ್ಲದಂತೆ ಕುಣಿದು ಕುಪ್ಪಳಿಸಿತು. ಮೂರ್ತಿ ವಿಸರ್ಜನಾ ಮೆರವಣಿಗೆಗಾಗಿ ನಗರದಾದ್ಯಂತ ವಿದ್ಯುದ್ದೀಪಾಲಂಕಾರ ಮಾಡಲಾಗಿತ್ತು. ಪ್ರತಿಯೊಂದು ಮೂರ್ತಿಯ ಮುಂದೆ ಝಗಮಗಿಸುವ ಬೆಳಕಿನ ವ್ಯವಸ್ಥೆ, ಕಿವಿಗಡಚಿಕ್ಕುವ ಡಿ.ಜೆ ಸಂಗೀತದ ವಾಹನಗಳೂ ಇದ್ದವು. ಅವುಗಳ ಮುಂದೆ ಯುವ ಹೃದಯಗಳ ಕುಣಿತ.
ಡೋಲ್ ತಾಶಾ, ಝಾಂಝ್ ಪಥಕ್, ಡೊಳ್ಳು ಮೇಳಗಳು, ಕೋಲಾಟವರು, ವೇಷಗಾರರು, ಪೂರ್ಣಕುಂಭ ಹೊತ್ತವರು ಕಿಲೋಮೀಟರ್‌ಗಟ್ಟಲೆ ಹೆಜ್ಜೆ ಹಾಕಿದರು.
ಮತ್ತೆ ಕೆಲವು ಮಂಡಳಿಯ ಸದಸ್ಯರು ಕನ್ನಡ ಹಾಗೂ ಮರಾಠಿ ಸಾಂಪ್ರದಾಯಿಕ ಉಡುಗೆಯಲ್ಲಿ ಚಿತ್ತ ಸೆಳೆದರು. ಭಕ್ತಿಗೀತೆ ಹಾಡಿದರು. ಜನಪದ ವಾದ್ಯಗಳಿಗೆ ಹೆಜ್ಜೆ ಹಾಕಿದರು. ಕೇಸರಿ ಧ್ವಜಗಳನ್ನು ಹಿಡಿದ ಯುವತಿಯರ ತಂಡ ಡಿ.ಜೆ. ಬೀಟ್‌ಗಳಿಗೆ ತಕ್ಕಂತೆ ಹೆಜ್ಜೆ ಹಾಕಿ ನಲಿಯಿತು.
ಗಣಪತಿ ಬಪ್ಪ ಮೋರತಾ, ಪುಡಚಾ ವರ್ಷಿ ಲೋಕರಿಯಾ, ಜೈ ಭವಾನಿ, ಜೈ ಶಿವಾಜಿ ಮುಂತಾದ ಘೋಷಣೆಗಳು ನಿರಂತರ ಮೊಳಗಿದವು. ಜನಸಾಗರದ ಮಧ್ಯೆಯೂ ಹಲವರು ಸಿಡಿಮದ್ದುಗಳನ್ನು ಹಚ್ಚಿದರು. ಎತ್ತರಕ್ಕೆ ಚಿಮ್ಮಿದ ಪಟಾಕಿಗಳು ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದವು.
ಪ್ರಸಕ್ತ ವರ್ಷ 378 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಗುರುವಾರ ಸಂಜೆ ಮೆರವಣಿಗೆ ಆರಂಭವಾಗಿದ್ದರೂ ತಡರಾತ್ರಿಯವರೆಗೆ ಕೇವಲ 100 ಮೂರ್ತಿಗಳನ್ನು ಮಾತ್ರ ವಿಸರ್ಜನೆ ಮಾಡಲಾಗಿತ್ತು.
ಹುತಾತ್ಮ ಚೌಕ್‌ನಿಂದ ಆರಂಭಗೊಂಡ ಮೆರವಣಿಗೆ ರಾಮದೇವ ಗಲ್ಲಿ ಸಮಾದೇವಿ ಗಲ್ಲಿ ಯಂಡೇಖೂಟ ಕಾಲೇಜು ರಸ್ತೆ ಧರ್ಮವೀರ ಸಂಭಾಜಿ ವೃತ್ತ ಕಿರ್ಲೋಸ್ಕರ್ ರಸ್ತೆ ರಾಮಲಿಂಗಖಿಂಡ್ ಗಲ್ಲಿ ರಸ್ತೆ ಟಿಳಕ ಚೌಕ ಹೇಮು ಕಲಾನಿ ಚೌಕ್ ಪಾಟೀಲ ಗಲ್ಲಿಯ ಶನಿ ಮಂದಿರ ಕಪಿಲೇಶ್ವರ ರೈಲ್ವೆ ಮೇಲ್ಸೇತುವೆ ಮಾರ್ಗವಾಗಿ ಸಂಚರಿಸಿ ಕಪಿಲೇಶ್ವರ ದೇವಸ್ಥಾನದ ಬಳಿ ತಲುಪಿತು. ಕಪಿಲೇಶ್ವರ ಬಳಿಯ ಎರಡು ಹೊಂಡಗಳು ಜಕ್ಕೇರಿ ಹೊಂಡ ಅನಗೋಳದ ಕೆರೆ ಸೇರಿದಂತೆ 8 ಕಡೆಗಳಲ್ಲಿ ಸಾರ್ವಜನಿಕ ಗಣೇಶನ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಸರದಿ ಸಾಲಿನಲ್ಲಿ ಬಂದು ಗಣಪನನ್ನು ವಿಸರ್ಜಿಸಿದರು. ಮಹಾನಗರ ಪಾಲಿಕೆಯಿಂದ ಅಲ್ಲಿ ಕ್ರೇನ್‌ಗಳ ವ್ಯವಸ್ಥೆ ಮಾಡಲಾಗಿತ್ತು. ನುರಿತ ಈಜುಪಟುಗಳನ್ನು ನಿಯೋಜಿಸಲಾಗಿತ್ತು.
ಮೆರವಣಿಗೆ ನೋಡಲು ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಜನ ಸೇರಿದರು. ದೂರದಿಂದ ಬಂದವರಿಗಾಗಿ ಹಲವು ಸಂಘಟನೆಗಳು ಪಾನಕ ನೀರು ಉಪಾಹಾರದ ವ್ಯವಸ್ಥೆ ಮಾಡಿದರು. ಮಾರ್ಗ ಮಧ್ಯದಲ್ಲಿರುವ ಮನೆಯವರು ಶಿರಾ, ಪಲಾವ್, ಚಿತ್ರಾನ್ನ ಮುಂತಾದ ಪ್ರಸಾದಗಳನ್ನು ಸಿದ್ಧಪಡಿಸಿ ನೀಡಿದರು. ಮಹಿಳೆಯರೇ ಮುಂದಾಗಿ ಜನರನ್ನು ಕೂಗಿ ಕರೆದು ಪ್ರಸಾದ ನೀರು ಹಂಚಿದರು. ಕೆಲವು ಮುಸ್ಲಿಂ ಯುವಕ ಮಂಡಳಗಳು ಕೂಡ ವೃತ್ತಗಳಲ್ಲಿ ನಿಂತು ನೀರು, ಪಾನಕ ಹಂಚಿ ಸೌಹಾರ್ದ ಮೆರೆದವು. ತುಂತುರು ಮಳೆಯ ಮಧ್ಯೆಯೂ ಜನರ ಸಂಭ್ರಮಕ್ಕೆ ಪಾರವೇ ಇಲ್ಲದಾಯಿತು.
ಬಿಗಿ ಬಂದೋಬಸ್ತ್
ಸಂಚಾರ ದಟ್ಟಣೆ ನಗರ ಪೊಲೀಸ್ ಆಯುಕ್ತಾಲದಿಂದ 3000ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಪ್ರಮುಖ ಮಾರ್ಗ ವೃತ್ತ ಚೌಕಗಳಲ್ಲೇ ವಾಹನಗಳಿಗೆ ನಿರ್ಬಂಧ ಹೇರಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು. ತಡರಾತ್ರಿಯೂ ಕಿಲೋಮೀಟರ್‌ಗಳವರೆಗೆ ನಡೆದು ತಮ್ಮ ಮನೆ ಸೇರಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.