ADVERTISEMENT

ಬೆಳಗಾವಿ: ಭಕ್ತಿಯ ಮಳೆ, ಉನ್ಮಾದದ ಹೊಳೆ... ವಿನಾಯಕನಿಗೆ ವಿದಾಯ

ಕುಣಿದು ಕುಪ್ಪಳಿಸಿದ ಯುವಜನರು; ಮೈದಳೆದ ಸಾಮರಸ್ಯದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 16:00 IST
Last Updated 17 ಸೆಪ್ಟೆಂಬರ್ 2024, 16:00 IST
<div class="paragraphs"><p>ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ಮಂಗಳವಾರ ರಾತ್ರಿ ಬೃಹತ್‌ ಗಣಪನ ಮೂರ್ತಿ ವಿಸರ್ಜನೆ ಮಾಡಲಾಯಿತು</p></div>

ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ಮಂಗಳವಾರ ರಾತ್ರಿ ಬೃಹತ್‌ ಗಣಪನ ಮೂರ್ತಿ ವಿಸರ್ಜನೆ ಮಾಡಲಾಯಿತು

   

ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ: ನಗರದಲ್ಲಿ ಮಂಗಳವಾರ ರಾತ್ರಿ ಜನವೋ ಜನ. 11 ದಿನಗಳ ಕಾಲ ಪೂಜೆಗೊಂಡ ವಿನಾಯಕನಿಗೆ ವಿದಾಯ ಹೇಳುವ ಮೆರವಣಿಗೆಯಲ್ಲಿ ಲಕ್ಷಾಂತರ ಜನಸೇರಿದರು. ಎತ್ತ ನೋಡಿದರೂ ಸಂಭ್ರಮ, ಎಲ್ಲಿ ನೋಡಿದರೂ ವೈಭವ, ಭಕ್ತಿಯ ಮಳೆ, ಉನ್ಮಾದದ ಹೊಳೆ..!

ADVERTISEMENT

ಹೆಜ್ಜೆಹೆಜ್ಜೆಗೂ ಬೃಹತ್‌ ಮೂರ್ತಿಗಳ ಆಡಂಬರ. ಝಗಮಗಿಸುವ ವಿದ್ಯುದ್ದೀಪಗಳ ವೈಭೋಗ, ಹಾಡು, ಕುಣಿತ, ಸಂಗೀತ ವಾದಕರು ಸಡಗರ, ಯುವ ಹೃದಯಗಳ ಹುಮ್ಮಸ್ಸು ಮೆರವಣಿಗೆಗೆ ಇನ್ನಿಲ್ಲದ ಕಳೆ ತಂದಿತು.

ಇಳಿಸಂಜೆಯ ಹೊತ್ತಿಗೆ ಒಂದೊಂದೇ ಯುವಕ ಮಂಡಳ ಗಣಪನ ಮೂರ್ತಿಗಳನ್ನು ಹುತಾತ್ಮ ಚೌಕಿನತ್ತ ಸಾಗಿಸಿದವು. ಅಲ್ಲಿಂದ ಆರಂಭವಾಯಿತು ಯುವಕ– ಯುವತಿಯರ ಸಂಭ್ರಮ. ಎದೆ ನಡುಗಿಸುವಂಥ ಡಿ.ಜೆ ಸೌಂಡ್‌ ಸಿಸ್ಟಂಗೆ ಯುವ ಸಮೂಹ ಇನ್ನಿಲ್ಲದಂತೆ ಕುಣಿದು ಕುಪ್ಪಳಿಸಿತು. ಪ್ರತಿಯೊಂದು ಮೂರ್ತಿಯ ಮುಂದೆ ಝಗಮಗಿಸುವ ಬೆಳಕಿನ ವ್ಯವಸ್ಥೆ, ಕಿವಿಗಡಚಿಕ್ಕುವ ಡಾಲ್ಬಿ ಸಂಗೀತದ ಅಬ್ಬರ.

ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಮಂಗಳವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯಿತು

ದೇವಾ ಶ್ರೀಗಣೇಶ, ಗಣಪತಿ ಬಪ್ಪ ಮೋರಯಾ, ಪುಡಚಾ ವರ್ಷಿ ಲೋಕರಿಯಾ, ಜೈ ಭವಾನಿ, ಜೈ ಶಿವಾಜಿ ಮುಂತಾದ ಘೋಷಣೆಗಳು ನಿರಂತರ ಮೊಳಗಿದವು. ಸಿಡಿಮದ್ದು, ಪಟಾಕಿಗಳ ಭೋರ್ಗರೆತ ನಿರಂತರವಾಗಿತ್ತು. ಗಾನೆತ್ತರಕ್ಕೆ ಚಿಮ್ಮಿದ ಪಟಾಕಿಗಳು ಆಗಸದಲ್ಲಿ ಬೆಳಕಿನ ಚಿತ್ತಾರ ಮೂಡಿಸಿದವು.

ಒಂದಷ್ಟು ಮಂಡಳಿಗಳ ಸದಸ್ಯರು ಪ್ರಾರ್ಥನೆ, ನಾಮಾವಳಿಗಳನ್ನೇ ಹಾಡುತ್ತ, ಭಜನೆ ಮಾಡುತ್ತ ಹೆಜ್ಜೆ ಹಾಕಿದರು. ಬಹುಪಾಲು ಕಡೆ ಪಾಶ್ಚಿಮಾದ್ಯ ಸಂಗೀತದ್ದೇ ಅಬ್ಬರ. ಗಣಪತಿ ಮೂರ್ತಿಯನ್ನು ಒಂದು ಟ್ಟ್ರಯಾಕ್ಟರ್‌ನಲ್ಲಿ ಇಟ್ಟು, ಅದರ ಮುಂದೆ ಇನ್ನೊಂದು ಟ್ರ್ಯಾಕ್ಟರ್‌ ಭರ್ತಿ ಧ್ವನಿವರ್ಧಕಗಳನ್ನೇ ತುಂಬಿದ್ದರು.

ಮಹಾರಾಷ್ಟ್ರದಿಂದ ಬಂದ ಯುವತಿಯರ ನೃತ್ಯ, ಯುವತಿಯರದೇ ಡೋಲ್‌ ತಾಶಾ ತಂಡ, ಝಾಂಝ್‌ ಪಥಕ್‌, ಡೊಳ್ಳು ಮೇಳಗಳು, ಕೋಲಾಟದವರು, ವೇಷಗಾರರು, ಪೂರ್ಣಕುಂಭ ಹೊತ್ತವರು ಮೆರವಣಿಗೆಯ ವೈಭವ ಹೆಚ್ಚಿಸಿದರು.

30 ತಾಸು ಮೆರವಣಿಗೆ: ಈ ಬಾರಿಯೂ ನಗರದ ವಿವಿಧ ಬಡಾವಣೆಗಳಲ್ಲಿ 380ಕ್ಕೂ ಹೆಚ್ಚು ಸಾರ್ವಜನಿಕ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಕಳೆದ ವರ್ಷ ಕೂಡ ಇಷ್ಟೇ ಮೂರ್ತಿಗಳಿದ್ದವು. ಆಗ ನಿರಂತರ 30 ತಾಸು ಮೆರವಣಿಗೆ ನಡೆದಿತ್ತು. ಈ ಬಾರಿ ಕೂಡ ಬುಧವಾರ ರಾತ್ರಿಯವರೆಗೂ ಮುಂದುವರಿಯುವ ಸಾಧ್ಯತೆ ಇದೆ.

ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಮಂಗಳವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಯಲ್ಲಿ ಯುವಜನರ ನೃತ್ಯ ಗಮನ ಸೆಳೆಯಿತು

ಹೀಗೆ ಸಾಗಿತು ಮೆರವಣಿಗೆ

ಮೆರವಣಿಗೆ ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೇಖೂಟ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಕಿರ್ಲೋಸ್ಕರ್‌ ರಸ್ತೆ, ರಾಮಲಿಂಗಖಿಂಡ್‌ ಗಲ್ಲಿ ರಸ್ತೆ, ಟಿಳಕ ಚೌಕ, ಹೆಮು ಕಲಾನಿ ಚೌಕ್‌, ಪಾಟೀಲ ಗಲ್ಲಿಯ ಶನಿ ಮಂದಿರ, ಕಪಿಲೇಶ್ವರ ರೈಲ್ವೆ ಮೇಲ್ಸೇತುವೆ ಮಾರ್ಗವಾಗಿ ಸಾಗಿ, ಕಪಿಲೇಶ್ವರ ದೇವಸ್ಥಾನ ಬಳಿಯ ಹೊಂಡದಲ್ಲಿ ಸಮಾಪನಗೊಂಡಿತು.

ನಗರದ ನಾಲ್ಕೂ ದಿಕ್ಕುಗಳಿಂದ ವಾಹನ ಸಂಚಾರ ಮಾರ್ಗ ಬದಲಿಸಲಾಯಿತು. ಜನರು ಹತ್ತಾರು ಕಿ.ಮೀ ದೂರದವರೆಗೆ ನಡೆದುಕೊಂಡೇ ಬರಬೇಕಾಯಿತು.

ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಮಂಗಳವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಗಮನ ಸೆಳೆಯಿತು

4,100 ಪೊಲೀಸರು, 571 ಸಿಸಿಟಿವಿ ಕ್ಯಾಮೆರಾ

ನಗರ ಪೊಲೀಸ್ ಆಯುಕ್ತಾಲದಿಂದ 4,100 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಮನೆ– ಕಚೇರಿಗಳ ಸಿಸಿಟಿವಿ ಕ್ಯಾಮೆರಾ ಹೊರತಾಗಿ ಇಲಖೆಯಿಂದ 571 ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಹಾಗೂ ಹಲವರು ಡ್ರೋನ್‌ ಬಳಸಲಾಯಿತು.

ಎಸ್‌ಪಿ ಶ್ರೇಣಿಯ 7 ಅಧಿಕಾರಿಗಳು, 31 ಡಿವೈಎಸ್‌ಪಿ, 110 ಇನ್‌ಸ್ಪೆಕ್ಟರ್‌, 130 ಸಬ್‌ ಇನ್‌ಸ್ಪೆಕ್ಟರ್‌, 10 ಕೆಎಸ್‌ಆರ್‌ಪಿ ತುಕಡಿ, 8 ಸಿಎಆರ್‌ ತುಕಡಿಗಳೂ ಇವೆ.

‘ಸಾಮರಸ್ಯದ ಸಂದೇಶ ನೀಡೋಣ’

ನಗರದ ಹುತಾತ್ಮ ಚೌಕ್‌ ಬಳಿ ಮಂಗಳವಾರ ಸಂಜೆ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗ ಗಣ್ಯರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಆಸೀಫ್‌ ಸೇಠ್‌, ‘ಗಣೇಶ ಮೆರವಣಿಗೆ ಅದ್ದೂರಿಯಾಗಿ ನಡೆಯಲೆಂದು ಮುಸ್ಲಿಮರು ಈದ್‌–ಮಿಲಾದ್‌ ಮೆರವಣಿಗೆ ಮುಂದೂಡಿದ್ದೇವೆ. ಪರಸ್ಪರ ಸಹಕಾರದೊಂದಿಗೆ ಸಮಾಜಕ್ಕೊಂದು ಸಂದೇಶ ಕೊಡೋಣ’ ಎಂದರು.

ಶಾಸಕ ಅಭಯ ಪಾಟೀಲ, ‘ಮೆರವಣಿಗೆ ಸುಗಮವಾಗಿ ಪೂರ್ಣಗೊಳಿಸಲು ಎಲ್ಲರೂ ಸಹಕರಿಸಬೇಕು. ಸಣ್ಣ–ಪುಟ್ಟ ಗೊಂದಲಗಳಿದ್ದರೆ ಪೊಲೀಸರು ಸ್ಥಳದಲ್ಲೇ ಬಗೆಹರಿಸಿ, ಪರಿಸ್ಥಿತಿ ಹತೋಟಿಯಲ್ಲಿ ನೋಡಿಕೊಳ್ಳಬೇಕು. ಮಂಡಳಿಯವರೂ ಆಡಳಿತ ಯಂತ್ರಕ್ಕೆ ಸಹಕಾರ ಕೊಡಬೇಕು’ ಎಂದು ಕೋರಿದರು.

‘ಬೆಳಗಾವಿ ಗಣೇಶೋತ್ಸವದಂತೆ ಈ ವೇದಿಕೆಯೂ ಭಾವೈಕ್ಯದಿಂದ ಕೂಡಿದೆ. ಅಮರ್‌, ಅಕ್ಬರ್‌, ಅಂಥೋನಿಯಂತೆ ಮೂವರು ಅಧಿಕಾರಿಗಳು (ರಾಹುಲ್‌ ಶಿಂಧೆ, ಮೊಹಮ್ಮದ್‌ ರೋಷನ್‌, ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌) ವೇದಿಕೆಯೇರಿ ಗಣೇಶನಿಗೆ ಪೂಜಿಸಿ ಸಾಮರಸ್ಯದ ಸಂದೇಶ ಸಾರುತ್ತಿದ್ದಾರೆ’ ಎಂದರು.

ಬೆಳಗಾವಿಯಲ್ಲಿ ಮಂಗಳವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವೈಭವದಿಂದ ನಡೆಯಿತು

ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಮಂಗಳವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನೋಡಲು ಸಿದ್ಧಪಡಿಸಿದ ವೀಕ್ಷಕರ ಗ್ಯಾಲರಿ ಜನರಿಂದ ತುಂಬಿತು

ಬೆಳಗಾವಿಯ ಧರ್ಮವೀರ ಸಂಭಾಜಿ ವೃತ್ತದಲ್ಲಿ ಮಂಗಳವಾರ ರಾತ್ರಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ನೋಡಲು ಸಿದ್ಧಪಡಿಸಿದ ವೀಕ್ಷಕರ ಗ್ಯಾಲರಿ ಜನರಿಂದ ತುಂಬಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.