ಬೆಳಗಾವಿ: ಇಲ್ಲಿ ಭಾನುವಾರ ಸಂಜೆ 4ಕ್ಕೆ ಆರಂಭವಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ, ಕೆಲವು ಅಹಿತಕರ ಘಟನೆಗಳ ನಡುವೆ ಸತತ ಇಪ್ಪಾತ್ತಾರೂವರೆ ತಾಸುಗಳ ನಂತರ ಮುಕ್ತಾಯಗೊಂಡಿತು.
ಕಪಿಲೇಶ್ವರ ದೇವಸ್ಥಾನ ಬಳಿಯ ಹೊಂಡದಲ್ಲಿ ನಗರಪಾಲಿಕೆಯ ಮೂರ್ತಿ ವಿಸರ್ಜಿಸುವುದರೊಂದಿಗೆ, ಈ ಬಾರಿಯ ಗಣೇಶೋತ್ಸವಕ್ಕೆ ಅಧಿಕೃತ ತೆರೆಬಿದ್ದಿತು. ಮೇಯರ್ ಬಸವರಾಜ ಚಿಕ್ಕಲದಿನ್ನಿ, ಪಾಲಿಕೆ ಆಯುಕ್ತ ಶಶಿಧರ ಕುರೇರ ಹಾಗೂ ಅಧಿಕಾರಿಗಳು ವಿಘ್ನ ವಿನಾಶಕನಿಗೆ ಪೂಜೆ ಸಲ್ಲಿಸಿ ಶ್ರದ್ಧಾ–ಭಕ್ತಿಯಿಂದ ವಿದಾಯ ಹೇಳಿದರು.
‘ಕಪಿಲೇಶ್ವರ ಹೊಂಡಕ್ಕೆ ಹೋದ ವರ್ಷ 79 ಮೂರ್ತಿಗಳನ್ನು ವಿವಿಧ ಮಂಡಳದವರು ತಂದಿದ್ದರು. ಈ ಬಾರಿ 101 ಮೂರ್ತಿಗಳು ಬಂದಿದ್ದು ದಾಖಲೆಯಾಗಿದೆ. ಹೀಗಾಗಿ, ವಿಸರ್ಜನೆಗೆ ಹೆಚ್ಚಿನ ಸಮಯ ಬೇಕಾಯಿತು. ಸಣ್ಣ ಮೂರ್ತಿಗಳನ್ನು ಮಂಡಳದವರೇ ವಿಸರ್ಜಿಸಿದರೆ, ದೊಡ್ಡ ಮೂರ್ತಿಗಳನ್ನು 9 ಕ್ರೇನ್‌ಗಳನ್ನು ಬಳಸಿ ವಿಸರ್ಜಿಸಲಾಯಿತು’ ಎಂದು ಪಾಲಿಕೆ ಆಯುಕ್ತ ಶಶಿಧರ ಕುರೇರ ‘ಪ್ರಜಾವಾಣಿ’ಗೆ ತಿಳಿಸಿದರು.
ಶಾಂತಿಯುತ
‘ವಿಸರ್ಜನೆ ಕಾರ್ಯ ಶಾಂತಿಯುತವಾಗಿ ನಡೆದಿದೆ. ಪಾಲಿಕೆಯ ಸಿಬ್ಬಂದಿ ಹಾಗೂ ಪೌರಕಾರ್ಮಿಕರ 9 ತಂಡಗಳು ಪಾಳಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ’ ಎಂದು ಮಾಹಿತಿ ನೀಡಿದರು.
ವಿವಿಧೆಡೆ ಮೂರ್ತಿಗಳ ಮೆರವಣಿಗೆ ಇಡೀ ದಿನ ಮುಂದುವರಿಯಿತು. ಜಿಲ್ಲಾ ಪಂಚಾಯ್ತಿ ಕಟ್ಟಡದ ಬಳಿಯ ಶೆಟ್ಟಿಗಲ್ಲಿ ರಸ್ತೆಯಲ್ಲಿ ಎರಡು ಗಣೇಶ ಮಂಡಳಗಳವರ ನಡುವೆ ಘರ್ಷಣೆ ನಡೆದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದರು. ಇದಾದ ಕೆಲವು ಹೊತ್ತಿನಲ್ಲಿ ಮೆರವಣಿಗೆ ಪುನರಾರಂಭಗೊಂಡಿತು.
ಚವಾಟ ಗಲ್ಲಿ ಹಾಗೂ ಖಡಕ್ ಗಲ್ಲಿ ಗಣೇಶ ಮಂಡಳದವರ ನಡುವೆ ಮಾತಿನ ಚಕಮಕಿ, ಘರ್ಷಣೆ ನಡೆದ್ದಿದ್ದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪೊಲೀಸರು ಲಘು ಲಾಠಿಪ್ರಹಾರ ನಡೆಸಿ, ಗುಂಪನ್ನು ಚದುರಿಸಿದರು.
ಮಾತಿನ ಚಕಮಕಿ
ಕೆಲವು ಮಂಡಳದವರು ತಮ್ಮ ಮೂರ್ತಿಯನ್ನು ಕೊನೆಯದಾಗಿ ವಿಸರ್ಜಿಸಬೇಕು ಎಂಬ ನಿಧಾನವಾಗಿ ಮೆರವಣಿಗೆಯಲ್ಲಿ ತೆರಳುತ್ತಿದ್ದರು. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತು.
ಮುಂದೆ ಸಾಗುವಂತೆ ತಿಳಿಸುತ್ತಿದ್ದ ಪೊಲೀಸರ ಮಾತುಗಳಿಗೆ ಮಂಡಳದದವರು ಕಿವಿಕೊಡುತ್ತಿರಲಿಲ್ಲ. ಡಿಜೆ ಸದ್ದಿಗೆ ನರ್ತಿಸುತ್ತಾ ನಿಂತು ಬಿಡುತ್ತಿದ್ದರು. ಇದರಿಂದಾಗಿ, ಮೆರವಣಿಗೆ ಅವಧಿಯು ಹಿಂದಿನ ವರ್ಷಗಳಿಗಿಂತ ಹೆಚ್ಚಾಯಿತು. ಡಾಲ್ಬಿ ಶಬ್ದ ಕಡಿಮೆ ಮಾಡುವಂತೆ ಪೊಲೀಸರು ನೀಡಿದ ಸೂಚನೆಯನ್ನೂ ಮಂಡಳದವರು ಕೇಳಲಿಲ್ಲ. ಕೆಲವು ಬಡಾವಣೆಯ ಮೂರ್ತಿಗಳ ಮೆರವಣಿಗೆ ಸೋಮವಾರ ಮಧ್ಯಾಹ್ನವಾದರೂ ಆ ಪ್ರದೇಶದಿಂದ ಹೊರಗಡೆಗೆ ಬಂದಿರಲಿಲ್ಲ!. ಕೆಲವು ವಾಹನಗಳಲ್ಲಿ ಯುವಕರು ಮಲಗಿ ನಿದ್ರಿಸುತ್ತಿದ್ದ ದೃಶ್ಯಗಳೂ ಕಂಡುಬಂದವು.
ಮುಂಜಾಗ್ರತಾ ಕ್ರಮವಾಗಿ, ಮೆರವಣಿಗೆ ಮಾರ್ಗದಲ್ಲಿ ಹಾಗೂ ಹೊಂಡಗಳ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.
‘ಎರಡು ಸಣ್ಣಪುಟ್ಟ ಅಹಿತಕರ ಘಟನೆ (ವೀರಭದ್ರ ನಗರ, ಶೆಟ್ಟಿ ಗಲ್ಲಿಯಲ್ಲಿ) ನಡೆದವು. ತಕ್ಷಣ ಸ್ಥಳಕ್ಕೆ ತೆರಳಿ ಪರಿಸ್ಥಿತಿ ನಿಯಂತ್ರಿಸಿದೆವು. ಆ ಘಟನೆಗಳನ್ನು ಹೊರತುಪಡಿಸಿದರೆ ಮೆರವಣಿಗೆ ಬಹುತೇಕ ಶಾಂತಿಯುತವಾಗಿ ಮುಗಿದಿದೆ. ಮಂಗಳವಾರ ರಾತ್ರಿಯೂ ಭದ್ರತೆ ಮುಂದುವರಿಯಲಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ’ ಎಂದು ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.