ADVERTISEMENT

ಘಟಪ್ರಭಾ ಕಾಲುವೆ: ಮೂರು ಪಂಚಾಯಿತಿಗಳಲ್ಲಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 19:29 IST
Last Updated 15 ಜುಲೈ 2024, 19:29 IST
ರಾಯಬಾಗ ತಾಲ್ಲೂಕಿನ ನಿಪನಾಳ ಗ್ರಾಮದ ಹದ್ದಿಯ ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ಹೂಳು ತೆಗೆಯುವ ಕಾಮಗಾರಿ ಸೋಮವಾರವೂ ಮುಂದುವರಿಯಿತು
ರಾಯಬಾಗ ತಾಲ್ಲೂಕಿನ ನಿಪನಾಳ ಗ್ರಾಮದ ಹದ್ದಿಯ ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ಹೂಳು ತೆಗೆಯುವ ಕಾಮಗಾರಿ ಸೋಮವಾರವೂ ಮುಂದುವರಿಯಿತು   

ಬೆಳಗಾವಿ: ಹಿಡಕಲ್‌ ಜಲಾಶಯದ ಘಟಪ್ರಭಾ ಬಲದಂಡೆ ಕಾಲುವೆಯ ದುರಸ್ತಿ ಹಾಗೂ ಹೂಳು ತೆಗೆಯುವ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಆರಂಭಿಸಲಾಗಿದೆ.

ಜುಲೈ 11ರ ‘ಪ್ರಜಾವಾಣಿ’ಯಲ್ಲಿ ‘ಅಧಿಕಾರಿಗಳ ನಿರ್ಲಕ್ಷ್ಯ: ರೈತರಿಂದ ಹೂಳು ತೆರವು’ ವಿಶೇಷ ವರದಿ ಪ್ರಕಟವಾಗಿತ್ತು. ಇದಕ್ಕೆ ಪೂರಕವಾಗಿ ಮೂವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಕೆಲಸ ಆರಂಭಿಸಿದ್ದಾರೆ.

‘ನಿಪನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಾಲುವೆಯಲ್ಲಿ ಹೂಳು ತುಂಬಿಕೊಂಡ ಕಾರಣ ಕೊನೆಯ ಗ್ರಾಮಗಳಿಗೆ ನೀರು ಮುಟ್ಟುತ್ತಿಲ್ಲ. 40 ಕಾರ್ಮಿಕರ ತಂಡ ರಚಿಸಿ ಕೆಲಸ ಶುರು ಮಾಡಲಾಗಿದೆ. ₹3 ಲಕ್ಷ ಅನುದಾನ ಮಂಜೂರಾಗಿದೆ. 15 ದಿನಗಳಲ್ಲಿ ನೀರು ಕೊನೆಯ ಹಂತ ತಲುಪಲಿದೆ’ ಎಂದು ನಿಪನಾಳ ಪಿಡಿಒ ಮಲ್ಲಪ್ಪ ಗುಳಿದಾರ ತಿಳಿಸಿದರು.

ADVERTISEMENT

ಕಬ್ಬೂರ ಅಂಚು ಕಾಲುವೆಯ ನೀರು ಜೋಡಟ್ಟಿ– ಜಾಗನೂರ– ಮಮದಾಪುರ– ದಂಡಾಪುರ– ನಿಪನಾಳ– ಮಂಟೂರ– ಖಟಕಬಾವಿ ಮಾರ್ಗದಲ್ಲಿ ಹರಿಯಲಿದೆ. ದಂಡಾಪುರ, ಮಮದಾಪುರದಲ್ಲೂ ಸೋಮವಾರ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಮಂಟೂರಿನ ಮತ್ತಷ್ಟು ರೈತರು ಊಟ ಕಟ್ಟಿಕೊಂಡು ಬಂದು, ಸಂಬಳವಿಲ್ಲದೇ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಜೋಡಟ್ಟಿ ಗ್ರಾಮದ ಹದ್ದಿಯಲ್ಲಿ ಹೂಳು ತೆಗೆಯುವ ಕಾಯಕ ನಡೆಸಿದ್ದಾರೆ.

‘70ಕ್ಕೂ ಹೆಚ್ಚು ರೈತರು ಹಣ ಸೇರಿಸಿ ಕಾಲುವೆ ಹೂಳು ತೆಗೆಯುತ್ತಿದ್ದೇವೆ. ನೀರಾವರಿ ಇಲಾಖೆ ಅಧಿಕಾರಿಗಳು ನೆರವಿಗೆ ಬರಬೇಕು. ಒಂದು ಜೆಸಿಬಿ ಒದಗಿಸಿದರೆ ಕೆಲಸ ವೇಗವಾಗಿ ಸಾಗಲಿದೆ’ ಎಂದು ಮಂಟೂರು ಗ್ರಾಮ ಪಂಚಾಯಿತಿ ಸದಸ್ಯೆ ಮಲ್ಲವ್ವ ಭೀಮ‍ಪ್ಪ ಮೇಟಿ ಆಗ್ರಹಿಸಿದ್ದಾರೆ.

ರಾಯಬಾಗ ತಾಲ್ಲೂಕಿನ ದಂಡಾಪುರ ಗ್ರಾಮದ ಹದ್ದಿಯ ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ಹೂಳು ತೆಗೆಯುವ ಕಾಮಗಾರಿ ಸೋಮವಾರವೂ ಮುಂದುವರಿಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.