ಬೆಳಗಾವಿ: ಜಿಲ್ಲೆಯಿಂದ ಗೋವಾ ರಾಜ್ಯಕ್ಕೆ ಹೋಗುವ ವಾಣಿಜ್ಯ ಸರಕು ಸಾಗಣೆ ವಾಹನಗಳ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಅಲ್ಲಿನ ಸರ್ಕಾರ ಸಡಿಲಗೊಳಿಸಿದೆ. ಪ್ರತಿ ರಾತ್ರಿ 10ರಿಂದ ನಸುಕಿನ 5 ಗಂಟೆಯ ಮಧ್ಯದಲ್ಲಿ ವಾಹನಗಳು ಸಂಚರಿಸಲು ಅವಕಾಶ ನೀಡಿದೆ.
ಯಂತ್ರೋಕರಣ, ಸಿಮೆಂಟ್, ವಾಹನಗಳ ಬಿಡಿಭಾಗ, ಕಟ್ಟಡ ಸಾಮಗ್ರಿಗಳನ್ನು ಸಾಗಿಸಲು ಜಿಲ್ಲೆಯಿಂದ ಹೋಗುತ್ತಿದ್ದ ವಾಹನಗಳ ಮೇಲೆ ಗೋವಾ ಸರ್ಕಾರ ನಾಲ್ಕು ದಿನಗಳಿಂದ ನಿರ್ಬಂಧ ಹೇರಿತ್ತು. ಇದರಿಂದಾಗಿ ಭಾರಿ ವಾಹನಗಳು ಗೋವಾ ಗಡಿಯ ಚೇರಿ ಚೆಕ್‌ಪೋಸ್ಟ್‌ನಿಂದ ಮರಳುವ ಸ್ಥಿತಿ ಬಂದಿತ್ತು. ಈ ಬಗ್ಗೆ ಜಿಲ್ಲೆಯ ಲಾರಿ ಚಾಲಕರು ಹಾಗೂ ಮಾಲೀಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ಗೋವಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ವಾಹನಗಳ ಪ್ರವೇಶಕ್ಕೆ ಅನುಕೂಲ ಕಲ್ಪಿಸಿದ್ದಾರೆ.
ಬೆಳಗಾವಿಯಿಂದ ಪ್ರತಿದಿನ ತರಕಾರಿ ಸಾಗಿಸುವ ವಾಹನಗಳಿಗೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ ಎಂದು ಗೋವಾ ಸರ್ಕಾರ ಸ್ಪಷ್ಟಪಡಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.