ಗೋಕಾಕ: ಮಳೆಗಾಲ ಬಂದರೆ ಸಾಕು ಗೋಕಾಕ ಜಲಪಾತ ಮತ್ತು ಗೊಡಚಿನಮಲ್ಕಿ ಜಲಪಾತ ವೀಕ್ಷಿಸಲು ಪ್ರವಾಸಿಗರ ದಂಡೇ ಹರಿದು ಬರುತ್ತದೆ. ನಿರೀಕ್ಷೆಗಳ ಮೂಟೆ ಹೊತ್ತು ಬರುವ ಪ್ರವಾಸಿಗರಿಗೆ ಮಾತ್ರ ಇಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೇ ಪರದಾಡಬೇಕಾಗುವ ದಯನೀಯ ಸ್ಥಿತಿ ಇನ್ನೂಇದೆ.
ಗೋಕಾಕ ಜಲಪಾತದಿಂದ 7 ಕಿ.ಮೀ ದೂರದಲ್ಲಿದೆ ಗೊಡಚಿನಮಲ್ಕಿ ಫಾಲ್ಸ್. ಗೋಕಾಕ ಫಾಲ್ಸ್ ನೋಡಲು ಬರುವ ಎಲ್ಲರೂ ಗೊಡಚಿನಮಲ್ಕಿಗೆ ಭೇಟಿ ನೀಡಿಯೇ ಹೋಗುತ್ತಾರೆ. ದೇಶದ ಸುಪ್ರಸಿದ್ಧ ಜಲಪಾತಗಳ ಸಾಲಿಗೆ ಸೇರುವ ಎಲ್ಲ ನೈಸರ್ಗಿಕ ಅರ್ಹತೆಗಳು ಈ ಎರಡೂ ಜಲಪಾತಗಳಿಗೆ ಇದೆ. ಆದರೆ, ಸರ್ಕಾರದ ನಿರ್ಲಕ್ಷ್ಯದಿಂದ ಪ್ರವಾಸಿಗರು ಪರದಾಡುವುದು ತಪ್ಪಿಲ್ಲ.
ಇತ್ತ ಸಾಲು ಸಾಲು ರಜೆಗಳು ಬರುತ್ತಿವೆ. ಇದರಿಂದ ಜಲಾಶಯ ನೋಡಲು ಬರುವವರ ಸಂಖ್ಯೆಯೂ ಏರಿಕೆಯಾಗಿದೆ. ಜನರು ಕುಟುಂಬ ಸಮೇತರಾಗಿ, ಯುವಜನರು ದಂಡೋಪ ದಂಡವಾಗಿ ಬರುತ್ತಿದ್ದಾರೆ. ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಮಾತ್ರ ಇದು ಕಾಣಿಸುತ್ತಲೇ ಇಲ್ಲ.
ಜಲಾಶಯದ ಬಳಿ ಹೋಗಬೇಡಿ ಎಂದು ಎಚ್ಚರಿಕೆ ನೀಡಿ ಪ್ರವಾಸಿಗರನ್ನು ದೂರ ಇಡುತ್ತಾರೆ ಹೊರತು; ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಪ್ರಕೃತಿಯ ಸೊಬಗನ್ನು ಜನರಿಗೆ ಉಣಬಡಿಸಲು ಮುಂದಾಗಿಲ್ಲ.
‘ಈ ಜಲಪಾತಗಳು ಪಿಕ್ನಿಕ್ ಪಾಯಿಂಟ್ ಆಗಿರುವುದರಿಂದ ನೀರು, ಆಹಾರದ ವ್ಯವಸ್ಥೆ ಬೇಕಾಗಿದೆ. ಗೊಡಚಿನಮಲ್ಕಿ ಜಲಪಾತಕ್ಕೆ ತೆರಳಲು ಸೂಕ್ತ ಸಂಪರ್ಕ ರಸ್ತೆ ಇಲ್ಲ. ಚಿಕ್ಕ ವಯಸ್ಸಿನವರಂತೆ ನಾವು ಗಡಿಬಿಡಿ ಮಾಡಿ ನಡೆಯಲೂ ಆಗುವುದಿಲ್ಲ. ಒಂದು ವೇಳೆ ಅವಸರ ಮಾಡಿದರೆ ಗುಂಡಿಗಳಲ್ಲಿ ಜಾರಿಬಿದ್ದು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಬೇಕಾಗುತ್ತದೆ’ ಎಂದು ಇಲ್ಲಿಗೆ ಆಗಮಿಸಿದ್ದ ಹುಬ್ಬಳ್ಳಿ ಮೂಲದ ರತ್ನಾಬಾಯಿ ಕೋಸಂದಳ ಬೇಸರ ವ್ಯಕ್ತಪಡಿಸಿದರು.
ಗೊಡಚಿನಮಲ್ಕಿ ಗ್ರಾಮದಿಂದ ಜಲಪಾತ ವೀಕ್ಷಿಸಲು ಸುಮಾರು 3 ಕಿ.ಮೀ. ದೂರ ನಡೆದೇ ಕ್ರಮಿಸಬೇಕು. ನಡೆದು ಹೋಗಲೂ ಸಹ ಮಾರ್ಗ ಸುರಕ್ಷಿತವಾಗಿಲ್ಲ. ಹೀಗಾಗಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ಅಲ್ಲಿಗೆ ಕರೆದೊಯ್ಯುವುದು ಗೋಳಿನ ಸಂಗತಿಯಾಗಿ ಪರಿಣಮಿಸಿದೆ.
ಸರ್ಕಾರ ಮುತುವರ್ಜಿ ವಹಿಸಿ ಪ್ರವಾಸಿಗರ ಅನುಕೂಲಕ್ಕಾಗಿ ಹೊಟೇಲ್, ಶೌಚಾಲಯ, ವಾಹನ ನಿಲುಗಡೆ ವ್ಯವಸ್ಥೆ, ಮಳೆಯಿಂದ ಆಶ್ರಯ ಪಡೆಯಲು ಅಲ್ಲಲ್ಲಿ ತಂಗುದಾಣಗಳನ್ನು ನಿರ್ಮಿಸಬೇಕಾದ ಅಗತ್ಯವಿದೆ ಎಂಬುದು ಅವರ ಆಗ್ರಹ.
ರಜೆ ದಿನಗಳಂದು ಬೆರಳೆಣಿಕೆಯಷ್ಟು ಪೊಲೀಸ್ ಸಿಬ್ಬಂದಿಯನ್ನು ಸೇವೆಗೆ ನಿಯುಕ್ತಿಗೊಳಿಸಿದರೆ ಸಾಕೇ? ಎಂದು ಪ್ರಶ್ನಿಸುತ್ತಾರೆ ಬೆಳಗಾವಿಯ ಟಿಳಕವಾಡಿ ನಿವಾಸಿ ರಾಮಚಂದ್ರ ಜಾಧವ.
ಪ್ರವಾಸಿಗರು ಪ್ರತಿ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಖಾಸಗಿ ವಾಹನಗಳ ಮೂಲಕ ತಂಡೋಪ ತಂಡವಾಗಿ ಬರುತ್ತಾರೆ. ಆದರೂ ಪ್ರವಾಸೋದ್ಯಮ ಬೆಳವಣಿಗೆ ದೃಷ್ಟಿಯಿಂದ ಪ್ರವಾಸಿಪ್ರಿಯ ಅನುಕೂಲಗಳನ್ನು ಕಲ್ಪಿಸದಿರುವುದು ವಿಪರ್ಯಾಸ ಎನ್ನುವುದು ಅವರ ಬೇಸರ.
Highlights - ಮಳೆಗಾಲದಲ್ಲಿ ಮುಗಿಬೀಳುವ ಪ್ರವಾಸಿಗರು 3 ಕಿ.ಮೀ ನಡೆದೇ ಹೋಗಬೇಕಾದ ಅನಿವಾರ್ಯ ಪ್ರವಾಸಿಪ್ರಿಯರಿಗೆ ನಿರಾಶೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.