ಬೆಳಗಾವಿ: ವಿಧಾನಸಭಾಧ್ಯಕ್ಷ ರಮೇಶಕುಮಾರ್ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರಿಂದ ಗೋಕಾಕ ವಿಧಾನಸಭಾ ಕ್ಷೇತ್ರಕ್ಕೆ ಉಪ– ಚುನಾವಣೆ ನಡೆಯಲೇಬೇಕಾಗಿದೆ. ನಿಯಮಗಳ ಪ್ರಕಾರ, ಆರು ತಿಂಗಳೊಳಗೆ ಮತ್ತೊಮ್ಮೆ ಚುನಾವಣೆ ಮಾಡಿ, ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ನಿಂದ ಯಾರ‍್ಯಾರು ಕಣಕ್ಕಿಳಿಯಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.
1980ರ ದಶಕದಿಂದಲೂ ರಮೇಶ ಅವರು ಕಾಂಗ್ರೆಸ್‌ನಲ್ಲಿಯೇ ಇದ್ದರು. 1985ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯ ಕಣಕ್ಕಿಳಿದಿದ್ದರು. ಆಗ ಜನತಾ ಪಕ್ಷದ ಎಂ.ಎಲ್. ಮುತ್ತೆಣ್ಣವರ ವಿರುದ್ಧ ಸೋಲು ಅನುಭವಿಸಿದರು. ನಂತರ ಚುನಾವಣಾ ರಾಜಕೀಯದಿಂದ ದೂರವಾಗಿ, ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡರು. 1999ರಲ್ಲಿ ಪುನಃ ಚುನಾವಣಾ ಕಣಕ್ಕಿಳಿದು, ಜಯಗಳಿಸಿದರು. ನಂತರ ನಡೆದ ಎಲ್ಲ ಐದೂ ಚುನಾವಣೆಗಳಲ್ಲಿ ನಿರಂತರವಾಗಿ ಜಯ ದಾಖಲಿಸುತ್ತ ನಡೆದರು. ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಸಂಪುಟದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ಕಳೆದ ವರ್ಷ ಪಕ್ಷದಲ್ಲಿ ನಡೆದ ಆಂತರಿಕ ಬೆಳವಣಿಗೆಯಿಂದ ಬೇಸತ್ತು. ಪಕ್ಷದಿಂದ ದೂರವಾದರು. ಬಿಜೆಪಿಗೆ ಹತ್ತಿರವಾದರು. ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ವಿಧಾನಸಭಾಧ್ಯಕ್ಷರು ಅನರ್ಹಗೊಳಿಸಿ ತೀರ್ಪು ನೀಡಿದ್ದಾರೆ. ಹಾಲಿ 15ನೇ ವಿಧಾನಸಭೆಗೆ ಮರಳಿ ಆಯ್ಕೆಯಾಗಿ ಬರಬಾರದು. ಉಪಚುನಾವಣೆಯಲ್ಲೂ ಸ್ಪರ್ಧಿಸಬಾರದೆಂದು ತೀರ್ಪು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪ–ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ರಮೇಶ ಅವರು ಕಳೆದುಕೊಂಡಿದ್ದಾರೆ. ಅವರೀಗ ಬಿಜೆಪಿಯಿಂದ ಯಾರನ್ನು ಕಣಕ್ಕಿಳಿಸುತ್ತಾರೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.
ಅಳಿಯನಿಗೋ, ಪುತ್ರನಿಗೋ:ರಮೇಶ ಅವರ ಎಲ್ಲ ವ್ಯವಹಾರಗಳನ್ನು ಅವರ ಪತ್ನಿಯ ಸಹೋದರ ಅಂಬಿರಾವ್ ಪಾಟೀಲ ನೋಡಿಕೊಳ್ಳುತ್ತಿದ್ದಾರೆ. ಇದಲ್ಲದೇ, ಕ್ಷೇತ್ರದಲ್ಲಿಯೂ ಹಿಡಿತ ಹೊಂದಿದ್ದಾರೆ. ಇವರಿಗೆ ಅವಕಾಶ ದೊರೆಯಬಹುದು. ಇಲ್ಲದಿದ್ದರೆ, ರಮೇಶ ಅವರ ಪುತ್ರ ಅಮರನಾಥ ಅವರಿಗೆ ದೊರೆಯಬಹುದು. ಅಮರನಾಥ ಅವರು ಇತ್ತೀಚೆಗಷ್ಟೇ ಕರ್ನಾಟಕ ಹಾಲು ಒಕ್ಕೂಟದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸ್ಥಳೀಯ ರಾಜಕಾರಣದಲ್ಲಿಯೂ ಸಕ್ರಿಯವಾಗಿದ್ದಾರೆ. ಇವೆಲ್ಲ ಕಾರಣಗಳಿಗಾಗಿ ಅವರಿಗೂ ಅವಕಾಶ ದೊರೆಯಬಹುದು ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್‌ನಿಂದ ಯಾರು?:ಶಾಸಕ ಸತೀಶ ಜಾರಕಿಹೊಳಿ ಅವರು ಈಗಾಗಲೇ ಕಾಂಗ್ರೆಸ್‌ನಿಂದ ಲಖನ್ ಜಾರಕಿಹೊಳಿ ಅವರನ್ನು ಕಣಕ್ಕಿಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ರಮೇಶ ಪಕ್ಷದ ಚಟುವಟಿಕೆಗಳಿಂದ ದೂರವಾದಾಗ, ಲಖನ್ ಅವರೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಇದರ ಜೊತೆಗೆ ಅವರ ಪರವಾಗಿ ಸತೀಶ ಕೂಡ ನಿಂತಿರುವುದರಿಂದ ಪಕ್ಷದ ಟಿಕೆಟ್ ಸಿಗಲು ಯಾವುದೇ ತೊಂದರೆಯಾಗಲಿಕ್ಕಿಲ್ಲ ಎನ್ನಲಾಗುತ್ತಿದೆ.
ಜೆಡಿಎಸ್ ನಿಲುವು ಸ್ಪಷ್ಟವಿಲ್ಲ:ಕಳೆದ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು, ಸ್ಪರ್ಧಿಸಿದ್ದವು. ಮೈತ್ರಿಯ ಭಾಗವಾಗಿ ಗೋಕಾಕ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿತ್ತು. ಜೆಡಿಎಸ್‌ನಿಂದ ಯಾರೂ ಕಣಕ್ಕಿಳಿದಿರಲಿಲ್ಲ. ಈಗ ಸಮ್ಮಿಶ್ರ ಸರ್ಕಾರ ಉರುಳಿ ಹೋಗಿರುವುದರಿಂದ ‘ಚುನಾವಣಾ ಮೈತ್ರಿ’ ಮುಂದುವರಿಯುತ್ತದೆಯೋ ಇಲ್ಲವೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
‘ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರು ಇದೇ ಬುಧವಾರ ಬೆಂಗಳೂರಿನಲ್ಲಿ ಪಕ್ಷದ ಎಲ್ಲ ಜಿಲಾಧ್ಯಕ್ಷರ ಸಭೆ ಕರೆದಿದ್ದಾರೆ. ಬಹುಶಃ ಸಭೆಯಲ್ಲಿ ಈ ಕುರಿತು ಚರ್ಚೆಯಾಗಬಹುದು. ಅಲ್ಲಿ ಏನು ತೀರ್ಮಾನವಾಗುತ್ತದೆಯೋ ಅದರಂತೆ ಪಾಲಿಸುತ್ತೇವೆ. ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಣಯವಾದರೆ, ಪಕ್ಷದಿಂದಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು’ ಎಂದು ಬೆಳಗಾವಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಶಂಕರ ಮಾಡಲಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.