ಬೆಳಗಾವಿ: ಬಿಜೆಪಿ ಸರ್ಕಾರ ಅಧಿಕಾರಕ್ಕೇರಲು ಪ್ರಮುಖ ಕಾರಣಕರ್ತರಾದ ರಮೇಶ ಜಾರಕಿಹೊಳಿ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿರುವ ಗೋಕಾಕ ವಿಧಾನಸಭಾ ಕ್ಷೇತ್ರಕ್ಕೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಶೇ 73.08ರಷ್ಟು ಮತದಾನ ಆಗಿದೆ. ಕಳೆದ ವರ್ಷ ನಡೆದಿದ್ದ ಚುನಾವಣೆಗೆ ಹೋಲಿಸಿದರೆ ಶೇ 1.31ರಷ್ಟು ಹೆಚ್ಚಿನ ಜನರು ಮತ ಚಲಾಯಿಸಿದರು. ಕಣದಲ್ಲಿದ್ದ 11 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಕೆಲವು ಕಡೆ, ಇವಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ಹೊರತುಪಡಿಸಿದರೆ, ಶಾಂತಿಯುತ ಮತದಾನ ನಡೆಯಿತು.
ಕಳೆದ 5 ಚುನಾವಣೆಗಳಲ್ಲಿ ಸತತವಾಗಿ ಕಾಂಗ್ರೆಸ್‌ನಿಂದ ಜಯಗಳಿಸಿದ್ದ ರಮೇಶ ಅವರು, ಬಿಜೆಪಿಯಿಂದ ಕಣಕ್ಕಿಳಿದಿರುವುದು ಹಾಗೂ ಅವರ ವಿರುದ್ಧ ಸಹೋದರ ಲಖನ್ ಕಾಂಗ್ರೆಸ್‌ನಿಂದ ತೊಡೆ ತಟ್ಟಿದ್ದರಿಂದ ಚುನಾವಣಾ ಕಣವು ರಂಗೇರಿತ್ತು. ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಅಶೋಕ ಪೂಜಾರಿ ಪರವಾದ ಅನುಕಂಪದ ಅಲೆಯಿಂದಾಗಿ ಸಂಚಲನ ಮೂಡಿಸಿತ್ತು. ಮೂರೂ ಪಕ್ಷದ ಮುಖಂಡರು, ಕಾರ್ಯಕರ್ತರು ಬಿರುಸಿನ ಪ್ರಚಾರ ನಡೆಸಿದ್ದರಿಂದ ಮತದಾನದ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಕ್ಷೇತ್ರದಲ್ಲಿ 2,44,313 ಒಟ್ಟು ಮತದಾರರ ಪೈಕಿ 1,78,554 (ಶೇ 73.08) ಜನರು ಮತ ಚಲಾಯಿಸಿದ್ದಾರೆ. ಕಳೆದ ವರ್ಷ 1,73,980 (ಶೇ 71.77) ಮತಚಲಾವಣೆಯಾಗಿದ್ದವು. ನಿಧಾನಗತಿಯಿಂದ ಆರಂಭಗೊಂಡ ಮತದಾನ ಪ್ರಕ್ರಿಯೆಯು ಮಧ್ಯಾಹ್ನದ ವೇಳೆಗೆ ಚುರುಕುಗೊಂಡಿತು.
ಬೆಳಿಗ್ಗೆ 7ಗಂಟೆಗೆ ಮತದಾನ ಆರಂಭವಾಯಿತು. ಎರಡು ತಾಸುಗಳ ಅವಧಿಯಲ್ಲಿ ಕೇವಲ ಶೇ 6.11ರಷ್ಟು ಮತದಾನವಾಗಿತ್ತು. 11 ಗಂಟೆಯ ವೇಳೆಗೆ ಶೇ 20.45 ಮತದಾನ ನಡೆದಿತ್ತು. ಬೆಳಗಿನ ಜಾವ ಚಳಿಯಿಂದಾಗಿ ಅತ್ಯಂತ ಕಡಿಮೆಯಾಗಿತ್ತು.
ನಂತರ ಮಧ್ಯಾಹ್ನ 1 ಗಂಟೆಗೆ 91,298 (ಶೇ 37.37), 3 ಗಂಟೆಗೆ 1,30,220 (ಶೇ 53.30) ಹಾಗೂ 5 ಗಂಟೆಗೆ 1,62,810 (ಶೇ 66.64) ಹಾಗೂ 6 ಗಂಟೆ ವೇಳೆಗೆ 1,78,554 (ಶೇ 73.08) ಜನರು ತಮ್ಮ ಹಕ್ಕು ಚಲಾಯಿಸಿದ್ದರು.
ಮತ ಚಲಾಯಿಸಿದ ಅಭ್ಯರ್ಥಿಗಳು:ಬಿಜೆಪಿಯ ಅಭ್ಯರ್ಥಿ ರಮೇಶ ಜಾರಕಿಹೊಳಿ ಇಲ್ಲಿನ ಫಾಲ್ಸ್ ರಸ್ತೆಯಲ್ಲಿರುವ ನ್ಯೂ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಲಖನ್ ಅವರು ಮಧ್ಯಾಹ್ನದ ನಂತರ ಹೊಸಪೇಟ ಗಲ್ಲಿಯ ಕನ್ನಡ ಗಂಡು ಮಕ್ಕಳ ಶಾಲೆ ನಂ.3 ಮತಗಟ್ಟೆಯಲ್ಲಿ ಮತಚಲಾಯಿಸಿದರು. ಇದೇ ಮತಗಟ್ಟೆಯಲ್ಲಿ ಶಾಸಕ ಬಾಲಚಂದ್ರ ಕೂಡ ಮತ ಚಲಾಯಿಸಿದರು. ಶಾಸಕ ಸತೀಶ ಅವರು ಜಿಆರ್‌ಬಿಸಿ ಕಾಲೊನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.
ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರು ತಮ್ಮ ಪತ್ನಿ ಸಮೇತರಾಗಿ ಬಂದು ಮತಚಲಾಯಿಸಿದರು.
ವಿವಿಧ ಪಕ್ಷದ ಕಾರ್ಯಕರ್ತರು ಮತಗಟ್ಟೆ ಬಳಿ ಮತದಾರರನ್ನು ಕರೆದುಕೊಂಡು ಬರುವುದು, ವಾಪಸ್ ಅವರನ್ನು ಕಳುಹಿಸಿಕೊಡುವುದು ಕಂಡುಬಂದಿತು. ಮತಚೀಟಿ ನೀಡುವುದರಲ್ಲಿ ನಿರತರಾಗಿದ್ದರು. ಮತಗಟ್ಟೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಮತಗಟ್ಟೆಗಳಲ್ಲಿ ಕುಡಿಯಲು ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಲಾಗಿತ್ತು.
ಕೊಣ್ಣೂರಿನ ಮತಗಟ್ಟೆಯಲ್ಲಿ ಕೆಲಕಾಲ ಇವಿಎಂನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ನಂತರ ಸರಿಪಡಿಸಿ, ಮತ್ತೆ ಪ್ರಾರಂಭಿಸಲಾಯಿತು.
ಮಕ್ಕಳ ನೆರವು:ಮತ ಚಲಾಯಿಸಲು ಆಗಮಿಸಿದ್ದ ವಯೋವೃದ್ಧರನ್ನು ಗಾಲಿ ಕುರ್ಚಿಯ ಮೇಲೆ ಕರೆದುಕೊಂಡು ಹೋಗಲು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೆಡೆಟ್‌ಗಳು ಸಹಾಯ ಮಾಡಿದರು. ಕೆಲವು ಶಾಲೆಗಳಲ್ಲಿ ಆಯಾ ವಿದ್ಯಾರ್ಥಿಗಳೇ ನೆರವು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.