ಗೋಕಾಕ: ರುದ್ರ ರಮಣೀಯವಾಗಿ ಧುಮ್ಮುಕ್ಕುತ್ತಿರುವ ಗೋಕಾಕ ಜಲಪಾತ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಬರುತ್ತಿದೆ. ಕೆಲವು ಯುವಕ, ಯುವತಿಯರು ಅಪಾಯವನ್ನೂ ಲೆಕ್ಕಿಸದೆ ಸೆಲ್ಫಿ, ಫೋಟೊಗಾಗಿ ಜಲಪಾತದ ಅಂಚಿಗೆಮೈಯೊಡ್ಡುತ್ತಿದ್ದಾರೆ.
180 ಅಡಿ ಎತ್ತರದಿಂದ ನೀರು ಭೋರ್ಗರೆಯುತ್ತಿದೆ. ಅದರೊಂದಿಗೆ ರಭಸದ ಗಾಳಿಯೂ ಇದೆ. ಅಂಥದರಲ್ಲೂ ಜಲಪಾತದ ಮೇಲಿನಿಂದ ತುತ್ತತುದಿಗೆ ತೆರಳಿ ಫೋಟೊಗೆ ಪೋಸ್ ನೀಡುವುದು ನಿರಂತರವಾಗಿ ನಡೆದಿದೆ. ಮತ್ತೆ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜಲಪಾತದ ಇಳಿಜಾರಿಗೆ ಹೋಗಿ ನಿಲ್ಲುತ್ತಿದ್ದಾರೆ.
ಕಳೆದ ಒಂದು ವಾರದಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶ ಮತ್ತು ಜಿಲ್ಲೆಯಲ್ಲಿ ನಿರಂತರ ಮಳೆ ಬೀಳುತ್ತಿದೆ. ಇದರಿಂದ ಅಪಾರ ಪ್ರಮಾಣದ ನೀರು ಜಲಪಾತಕ್ಕೆ ಹರಿದುಬರುತ್ತಿದೆ.
ಕೆಲವರಂತೂ ಜಲಪಾತದ ಮೇಲಿನ ಬಂಡೆಗಳ ಕಂದಕಗಳ ಮಧ್ಯೆ ನಿಂತು ಫೋಟೊ ತೆಗೆಸಿಕೊಳ್ಳುವ ಸಾಹಸ ಮಾಡುವುದು ಸಾಮಾನ್ಯವಾಗಿದೆ.
ಆದರೂ ಈವರೆಗೆ ಸ್ಥಳದಲ್ಲಿ ಭದ್ರತೆಗೆ ಸಿಬ್ಬಂದಿ ನಿಯೋಜಿಸಿಲ್ಲ. ಅಪಾಯಕಾರಿ ಹೆಜ್ಜೆ ಇಡುವವರ ಮೇಲೆ ನಿಯಂತ್ರಣ ಇಲ್ಲ.
ಕಳೆದ ಅಕ್ಟೋಬರಿನಲ್ಲಿ ಇದೇ ರೀತಿ ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕ ಜಲಪಾತದ ಬೃಹತ್ ಬಂಡೆಗಳ ಮಧ್ಯದ ಕಂದಕಕ್ಕೆ ಬಿದ್ದಿದ್ದ. ಆತನನ್ನು ರಕ್ಷಿಸಲು ತಾಲ್ಲೂಕು ಆಡಳಿತ ಹರಸಾಹಸ ಮಾಡಬೇಕಾಗಿ ಬಂದಿತ್ತು.
ಎರಡು ವರ್ಷಗಳ ಹಿಂದೆ ಕೂಡ ಇಬ್ಬರು ಪ್ರವಾಸಿಗರು ಪ್ರಾಣ ಕಳೆದುಕೊಂಡರು.
ಪ್ರತಿ ವರ್ಷ ಒಂದಲ್ಲ ಒಂದು ಅವಘಡ ಸಂಭವಿಸುವುದು ಇಲ್ಲಿ ಸಾಮಾನ್ಯವಾಗಿದೆ.
ಎಚ್ಚರಿಸಿದ 'ಪ್ರಜಾವಾಣಿ':
"ಜಲಪಾತಗಳ ಸುತ್ತ: ಅಪಾಯದ ಹುತ್ತ" ಕುರಿತು ಪ್ರಜಾವಾಣಿ'ಯಲ್ಲಿ ವರದಿ ನೀಡಲಾಗಿತ್ತು. ಆದರೂ ಪ್ರವಾಸೋದ್ಯಮ ಇಲಾಖೆ, ಪೊಲೀಸರು, ತಾಲ್ಲೂಕು ಆಡಳಿತದ ಅಧಿಕಾರಿಗಳಲ್ಲಿ ಯಾರೊಬ್ಬರೂ ಎಚ್ಚೆತ್ತುಕೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.