ಬೆಳಗಾವಿ: ‘ಠೇವಣಿದಾರರ ಹಿತರಕ್ಷಣೆಗಾಗಿ, ಜಿಲ್ಲೆಯ ಗೋಕಾಕ ನಗರದ ಮಹಾಲಕ್ಷ್ಮಿ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕಿನಲ್ಲಿ ಆಗಿರುವ ₹74.89 ಕೋಟಿ ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಆಸ್ತಿಯನ್ನು ಜಪ್ತಿ ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಂಚನೆ ಮತ್ತು ಹಣಕಾಸಿನ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಆಸ್ತಿಗಳನ್ನು ಜಪ್ತಿ ಮಾಡಲು ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 107ರಡಿ ಅವಕಾಶವಿದೆ. ಅದರ ಪ್ರಕಾರ ಕ್ರಮ ವಹಿಸಲಾಗುವುದು’ ಎಂದರು.
‘2021ರಲ್ಲಿ ಈ ಬ್ಯಾಂಕ್‌ನಲ್ಲಿ ವಂಚನೆ ಆರಂಭವಾಗಿದ್ದು, 14 ಮಂದಿ ವಿರುದ್ಧ ದೂರು ದಾಖಲಾಗಿದೆ. ಇದರಲ್ಲಿ 1ರಿಂದ 5ನೇ ಆರೋಪಿಗಳು ಸಿಬ್ಬಂದಿಯೇ ಇದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ನಡೆಸಿದ ಲೆಕ್ಕ ಪರಿಶೋಧನೆ ಸಮಯದಲ್ಲೂ ಪ್ರಕರಣ ಬೆಳಕಿಗೆ ಬಾರದಂತೆ ಅವರು ನೋಡಿಕೊಂಡಿದ್ದಾರೆ. ಲೆಕ್ಕ ಪರಿಶೋಧನೆಗೆ ಬಂದವರಿಗೆ ಬೇರೆ ದಾಖಲೆಗಳನ್ನೇ ತೋರಿಸಿದ್ದಾರೆ’ ಎಂದು ಹೇಳಿದರು.
‘ವ್ಯವಸ್ಥಾಪಕ ಸಿದ್ದಪ್ಪ ಪವಾರ, ಸಿಬ್ಬಂದಿಗಳಾದ ಸಾಗರ ಸಬಕಾಳೆ, ವಿಶ್ವನಾಥ ಬಾಗಡೆ, ಸಂಭಾಜಿ ಘೋರ್ಪಡೆ, ದಯಾನಂದ ಉಪ್ಪಿನ, ಸಂಜನಾ ಸಬಕಾಳೆ, ಮಾಲವ್ವ ಸಬಕಾಳೆ, ಗೌರವ್ವ ಹವಾಲ್ದಾರ, ಚಂದ್ರವ್ವ ಹವಾಲ್ದಾರ, ಮಾಯವ್ವ ಜಾಧವ, ಪರಸಪ್ಪ ಮಾಲೋಜಿ, ರಾಧಾ ಮಾಲೋಜಿ, ಸಂದೀಪ ಮರಾಠೆ, ಕಿರಣ ಸುಪಲಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ತಲೆಮರಿಸಿಕೊಂಡಿರುವ ಅವರ ಬಂಧನಕ್ಕಾಗಿ ಏಳು ತಂಡಗಳನ್ನು ರಚಿಸಲಾಗಿದೆ’ ಎಂದು ಹೇಳಿದರು.
‘ಸಿಬ್ಬಂದಿ ಸಿದ್ದಪ್ಪ ಪವಾರ ತನ್ನ ಸ್ನೇಹಿತರು ಹಾಗೂ ಸಂಬಂಧಿಕರ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ₹6.87 ಕೋಟಿ ಠೇವಣಿ ಇರಿಸಿದ್ದ. ಅದನ್ನೇ ಆಧಾರವಾಗಿ ಇಟ್ಟುಕೊಂಡು, ಎಲ್ಲ ಆರೋಪಿಗಳು ಬ್ಯಾಂಕ್‌ನಲ್ಲಿ ದೊಡ್ಡ ಪ್ರಮಾಣದ ಸಾಲ ಪಡೆದು, ಅದೇ ಹಣದಲ್ಲಿ ಗೋಕಾಕ, ಚಿಕ್ಕೋಡಿ, ಹುಬ್ಬಳ್ಳಿ ಮತ್ತಿತರ ಕಡೆ ಆಸ್ತಿ ಖರೀದಿಸಿದ್ದಾರೆ’ ಎಂದರು.
‘ಬ್ಯಾಂಕಿನ ಇತರೆ ಸಿಬ್ಬಂದಿ ಮತ್ತು ಠೇವಣಿದಾರರ ಸಹಕಾರದಿಂದ ನಾವು ಆರೋಪಿಗಳ ಒಟ್ಟು 112 ಆಸ್ತಿ ಗುರುತಿಸಿದ್ದೇವೆ. ಆ ಆಸ್ತಿಯ ಸರ್ಕಾರಿ ಮೌಲ್ಯ ₹13.80 ಕೋಟಿ, ಮಾರುಕಟ್ಟೆ ಮೌಲ್ಯ ₹50 ಕೋಟಿ ಇದೆ. ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 107ರಡಿ ಆ ಆಸ್ತಿಗಳನ್ನು ಜಪ್ತಿ ಮಾಡುತ್ತೇವೆ. ಇಂಥ ಪ್ರಕರಣಗಳಲ್ಲಿ ತನಿಖಾಧಿಕಾರಿಯು ಪೊಲೀಸ್ ಅಧೀಕ್ಷಕರ ಅನುಮತಿಯೊಂದಿಗೆ, ಆರೋಪಿಗಳ ಆಸ್ತಿ ಜಪ್ತಿಗೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬಹುದು’ ಎಂದು ಹೇಳಿದರು.
‘ನಾವು ಠೇವಣಿದಾರರು, ಬ್ಯಾಂಕ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದೇವೆ. ವಂಚನೆ ಪ್ರಕರಣ ಹೊರತುಪಡಿಸಿ, ಬ್ಯಾಂಕಿನವರು ತಮ್ಮ ಗ್ರಾಹಕರಿಗೆ ₹45 ಕೋಟಿ ಸಾಲ ನೀಡಿದ್ದಾರೆ. ಆರ್‌ಬಿಐ ಬಳಿ ₹32 ಕೋಟಿ ಸುರಕ್ಷಿತವಾಗಿದೆ. ಎಲ್ಲ ಠೇವಣಿಗಳಿಗೆ ₹5 ಲಕ್ಷ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಸಾಲದ ವಸೂಲಾತಿ ಮಾಡುವ ಜತೆಗೆ, ಆರ್‌ಬಿಐ ಬಳಿಯ ಹಣ ಬಳಸಿಕೊಂಡು ಠೇವಣಿದಾರರಿಗೆ ಹಣ ಮರುಪಾವತಿಸುವುದಾಗಿ ಬ್ಯಾಂಕ್ ಆಡಳಿತ ಮಂಡಳಿ ಭರವಸೆ ನೀಡಿದೆ’ ಎಂದರು.
‘ಮಾರ್ಗಸೂಚಿ ಪ್ರಕಾರ, ₹10 ಕೋಟಿಗೂ ಅಧಿಕ ಮೊತ್ತದ ವಂಚನೆ ಪ್ರಕರಣಗಳನ್ನು ತನಿಖೆಗಾಗಿ ಸಿಐಡಿಗೆ ಹಸ್ತಾಂತರಿಸುವಂತೆ ಕೇಂದ್ರ ಕಚೇರಿಗೆ ಪತ್ರ ಬರೆದಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.