ADVERTISEMENT

ಚನ್ನಮ್ಮನ ಕಿತ್ತೂರು | ಉತ್ತಮ ಮಳೆ: ಭರಪೂರ ಭತ್ತದ ಇಳುವರಿ

ಪ್ರದೀಪ ಮೇಲಿನಮನಿ
Published 18 ನವೆಂಬರ್ 2024, 5:59 IST
Last Updated 18 ನವೆಂಬರ್ 2024, 5:59 IST
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವಗಾಂವ ಬಳಿಯ ಹೊಲದಲ್ಲಿ ಹೊಡೆ ಹಿರಿದು ನಿಂತಿರುವ ಭತ್ತ ಪೈರು
ಚನ್ನಮ್ಮನ ಕಿತ್ತೂರು ತಾಲ್ಲೂಕಿನ ದೇವಗಾಂವ ಬಳಿಯ ಹೊಲದಲ್ಲಿ ಹೊಡೆ ಹಿರಿದು ನಿಂತಿರುವ ಭತ್ತ ಪೈರು   

ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ಸುರಿದ ಉತ್ತಮ ಮುಂಗಾರು ಮಳೆಯಿಂದಾಗಿ ಭತ್ತದ ಪೈರು ಚೆನ್ನಾಗಿ ಬಂದಿದ್ದು, ಹೆಚ್ಚಿನ ಇಳುವರಿ ತೆಗೆಯುವ ನಿರೀಕ್ಷೆಯನ್ನು ಅನ್ನದಾತ ಹೊಂದಿದ್ದಾನೆ.

ಈಗಾಗಲೇ ಹಲವು ಕಡೆಗಳಲ್ಲಿ ಭತ್ತ ಕೊಯ್ಯುವ, ಕಟ್ಟುವ ಮತ್ತು ಬಣಿವೆ ಒಟ್ಟುವ ಕೆಲಸಗಳು ಸಮರೋಪಾದಿಯಲ್ಲಿ ಸಾಗಿವೆ. ನೆತ್ತಿಯ ಮೇಲೆ ಮಳೆ ಮೋಡಗಳು ಓಡಾಡುತ್ತಿರುವುದು ರೈತರಲ್ಲಿ ಆತಂಕವನ್ನೂ ಮೂಡಿಸುತ್ತಿವೆ.

‘ಮುಂಗಾರು ಮಳೆ ನಂಬಿ ಭತ್ತ ಬಿತ್ತಿದ್ದೇವು. ಭತ್ತದ ಪೈರಿಗೆ ಅನುಕೂಲವಾಗುವಂತೆ ಹೆಚ್ಚು ಮಳೆ ಸುರಿಯಿತು. ಭತ್ತದ ಹೊಡೆಗಳು ಉತ್ತಮವಾಗಿ ಅರಳಿವೆ. ಗಟ್ಟಿಯಾಗಿ ಕಾಳುಗಟ್ಟಿ ನಳನಳಿಸುತ್ತಿವೆ. ಹೆಚ್ಚಿನ ಇಳುವರಿ ನಿರೀಕ್ಷೆ ಹೊಂದಿದ್ದೇವೆ’ ಎನ್ನುತ್ತಾರೆ ಭತ್ತದ ಕೃಷಿಕರು.

ADVERTISEMENT

2500 ಹೆಕ್ಟೇರ್ ಪ್ರದೇಶ: ‘ತಾಲ್ಲೂಕಿನಲ್ಲಿ ಸುಮಾರು 2500 ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತದ ಬೆಳೆ ಬೆಳೆದಿದ್ದಾರೆ. ಪಶ್ಚಿಮ ಭಾಗದಲ್ಲಿ ಹೆಚ್ಚಾಗಿ ನಾಟಿ ಮಾಡಿದ್ದಾರೆ. ಬೈಲೂರು, ತಿಗಡೊಳ್ಳಿ, ಅಂಬಡಗಟ್ಟಿ, ದೇವಗಾಂವ, ಮತ್ತು ದೇವರಶೀಗಿಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಹೆಚ್ಚಿನ ಭತ್ತದ ಬೆಳೆ ಕಾಣಸಿಗುತ್ತದೆ’ ಎಂದು ರೈತ ಸಂಪರ್ಕ ಕೇಂದ್ರ ಅಧಿಕಾರಿ ಮಂಜುನಾಥ ಕೆಂಚರಾಹುತ್ ತಿಳಿಸಿದರು.

‘ಜಯಾ, ಅಭಿಲಾಷಾ, ಅಮನ್, ಇಂದ್ರಾಣಿ, ತೆಲಂಗಾಣ ಸೋನಾ ತಳಿಗಳನ್ನು ಹೆಚ್ಚು ರೈತರು ಬೆಳೆದಿದ್ದಾರೆ. ಮಧುಮೇಹ ರೋಗಿಗಳು ಸೇವಿಸಲು ಈ ಸೋನಾ ಒಳ್ಳೆಯದು ಎಂಬ ಅಭಿಪ್ರಾಯವಿದೆ’ ಎಂದು ಹೇಳಿದರು.

‘ಉತ್ತಮ ಮಳೆಯಿಂದಾಗಿ ಫಸಲು ಒಳ್ಳೆಯದಿದೆ. ಎಕರೆಗೆ ಸುಮಾರು 25 ಕ್ಷಿಂಟಲ್ ಇಳುವರಿ ನಿರೀಕ್ಷೆಯಿದೆ. ರೈತರು ಹೆಚ್ಚು ಖುಷಿ ಪಡಲು ಕಾರಣವಾಗಿದೆ’ ಎಂದರು.

‘ಈಗಾಗಲೇ ಭತ್ತ ಕೊಯ್ಲು ಮಾಡುವ ಹಂಗಾಮು ಭರದಿಂದ ಸಾಗಿದೆ. ಎರಡು ದಿನಗಳಿಂದ ಮಳೆ ಮೋಡಗಳು ಸಂಚಾರ ನಡೆಸಿವೆ. ಕೆಲವೆಡೆ ದಟ್ಟ ಮೋಡಗಳು ನಿಂತಲ್ಲೇ ನಿಲ್ಲುತ್ತಿವೆ. ಗುರುವಾರ ಸಂಜೆ ತಾಲ್ಲೂಕಿನ ಕೆಲ ಊರುಗಳಲ್ಲಿ ಮಳೆ ಸುರಿಯಿತು. ಇದು ಕೊಯ್ಲು ಮಾಡುವ ರೈತರಲ್ಲಿ ಆತಂಕ ಮೂಡಿಸಿದೆ’ ಎಂದು ರೈತ ನಿಂಗಪ್ಪ ಅವರಾದಿ ಹೇಳಿದರು.

‘ಸುಗ್ಗಿಯಲ್ಲಿ ಆಗಮಿಸಿರುವ ಅಕಾಲಿಕ ಮಳೆಯಿಂದಾಗಿ ಅನುಕೂಲಕ್ಕಿಂತ ಹೆಚ್ಚಿನ ನಷ್ಟವೇ ಆಗುತ್ತದೆ’ ಎಂದರು.

ಮಲೆನಾಡು ಪ್ರದೇಶ ಎಂದು ಕರೆಯಿಸಿಕೊಂಡಿರುವ ಪಶ್ಚಿಮ ಭಾಗದ ಕೆಲವು ಹಳ್ಳಿಗಳಲ್ಲಿ ಭತ್ತದ ಪೈರು ಕಣ್ಣಿಗೆ ಹಬ್ಬ ಉಂಟು ಮಾಡುತ್ತಿದೆ. ಮಳೆ ಹೊರಹು ಕೊಟ್ಟರೆ 15 ದಿನಗಳಲ್ಲಿ ಭತ್ತದ ಸುಗ್ಗಿ ಮುಗಿಯುತ್ತದೆ
ನಿಜಗುಣಿ ಮಲಶೆಟ್ಟಿ ತಿಗಡೊಳ್ಳಿ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.