ಬೆಳಗಾವಿ: ‘ಬೆಳಿಗ್ಗೆ 10ಕ್ಕೆ ನಮ್ಮೂರಿನಿಂದ ಹೊರಟು ಕಾಲೇಜಿಗೆ ಬರುತ್ತೇವೆ. ಪಿಯು ವಿದ್ಯಾರ್ಥಿಗಳು ತರಗತಿಯಿಂದ ಹೊರಬರಲು ಕಾಯುತ್ತೇವೆ. ಸಂಜೆ 5.50ಕ್ಕೆ ತರಗತಿ ಮುಗಿದ ಬಳಿಕ ನಿಲ್ದಾಣಕ್ಕೆ ಹೋಗಿ, ಬಸ್‌ಗಾಗಿ ಮತ್ತೆ ಕಾಯುತ್ತೇವೆ. ನಮಗೆ ಕಲಿಕೆಗಿಂತ ‘ಕಾಯುವ’ ಶಿಕ್ಷೆಯೇ ಹೆಚ್ಚಾಗಿದೆ’.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದು ಹೀಗೆ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುವ ಈ ಕಾಲೇಜಿನಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ.
2013–14ನೇ ಸಾಲಿನಲ್ಲಿ ಪದವಿ ಕಾಲೇಜು ಮಂಜೂರಾಗಿದೆ. ಆದರೆ, 10 ವರ್ಷಗಳಾದರೂ ಕಾಲೇಜಿಗೆ ನಿವೇಶನ ಸಿಕ್ಕಿಲ್ಲ. ಕಟ್ಟಡ ಕಟ್ಟಲು ಆಗಿಲ್ಲ. ಅದಕ್ಕೆ ಸರ್ಕಾರಿ ಸರ್ದಾರ್ಸ್ ಪಿಯು ಕಾಲೇಜಿನ ಕಟ್ಟಡದಲ್ಲೇ ತಾತ್ಕಾಲಿಕವಾಗಿ ನಡೆಯುತ್ತಿದೆ. ಬೆಳಿಗ್ಗೆ ಪಿಯು ತರಗತಿ ನಡೆದರೆ, ನಂತರ ಪದವಿ ತರಗತಿ ಜರುಗುತ್ತವೆ.
ಜಿಲ್ಲೆಯ ವಿವಿಧೆಡೆಯಿಂದ 684 ವಿದ್ಯಾರ್ಥಿನಿಯರು ಬಿ.ಎ ಮತ್ತು ಬಿ.ಕಾಂ ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಸೌಲಭ್ಯ ಕೊರತೆ ಮತ್ತು ಇನ್ನಿತರ ಸಮಸ್ಯೆಗಳಿಂದ ಅವರು ಶಿಕ್ಷಣ ಪೂರ್ಣಗೊಳಿಸುತ್ತಿಲ್ಲ.
‘ಹುಕ್ಕೇರಿ ತಾಲ್ಲೂಕಿನ ಹತ್ತರಗಿಯಿಂದ ಬರುವ ನಾನು ಮನೆಗೆ ಮರಳುವಷ್ಟರಲ್ಲಿ ರಾತ್ರಿಯಾಗುತ್ತದೆ. ಸುರಕ್ಷತೆ ಪ್ರಶ್ನೆ ಕಾಡುತ್ತದೆ. ನಮ್ಮ ಕಾಲೇಜು ಸ್ವಂತ ಕಟ್ಟಡ ಹೊಂದಿ ಬೆಳಗಿನ ಅವಧಿಯಲ್ಲಿ ತರಗತಿ ನಡೆದರೆ ಅನುಕೂಲವಾಗುತ್ತದೆ’ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದರು.
ಯಾವ ಪರೀಕ್ಷೆಯಿದ್ದರೂ ರಜೆ
‘ಪಿಯು ವಾರ್ಷಿಕ ಪರೀಕ್ಷೆ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಇದೇ ಕಾಲೇಜಿನಲ್ಲಿ ನಡೆಯುತ್ತವೆ. ಪರೀಕ್ಷೆ ಸಿದ್ಧತೆಗೆ ಹಿಂದಿನ ದಿನವೇ ಕೊಠಡಿ ತೆಗೆದುಕೊಳ್ಳಲಾಗುತ್ತದೆ. ಇಲ್ಲಿ ಯಾವ ಪರೀಕ್ಷೆ ನಡೆದರೂ ಪದವಿ ವಿದ್ಯಾರ್ಥಿನಿಯರಿಗೆ ರಜೆ ಕೊಡಲಾಗುತ್ತದೆ’ ಎಂದು ಕಾಲೇಜಿನ ಉಪನ್ಯಾಸಕರೊಬ್ಬರು ತಿಳಿಸಿದರು.
‘ಪಿಯು ಮತ್ತು ಪದವಿ ಪರೀಕ್ಷೆಗಳು ಏಕಕಾಲಕ್ಕೆ ನಡೆದರಂತೂ ಕೊಠಡಿಗಳ ಕೊರತೆ ತಲೆದೋರುತ್ತದೆ. ನಾಲ್ಕು ಸಂದರ್ಭಗಳಲ್ಲಿ ಪದವಿ ಪರೀಕ್ಷೆಗಳನ್ನು ಬೇರೆ ಕಾಲೇಜಿನಲ್ಲಿ ನಡೆಸಿದ್ದೇವೆ. ವಿಶೇಷ ತರಗತಿ ಕೈಗೊಳ್ಳಬೇಕು ಎಂಬ ಉದ್ದೇಶವಿದೆ. ಆದರೆ, ಸ್ಥಳ ಮತ್ತು ಸಮಯದ ಅಭಾವ ಕಾರಣ ಇದು ಸಾಧ್ಯವಾಗುತ್ತಿಲ್ಲ’ ಎಂದರು.
ಕಾಲೇಜಿಗೆ ಸ್ವಂತ ನಿವೇಶನ ಕೊಡುವಂತೆ ಮಹಾನಗರ ಪಾಲಿಕೆ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಕೋರಿದ್ದೇವೆ. ಎಲ್ಲರ ಹಿತದೃಷ್ಟಿಯಿಂದ ಕಾಲೇಜಿಗೆ ತುರ್ತಾಗಿ ನಿವೇಶನ ಕಟ್ಟಡದ ಅಗತ್ಯವಿದೆ –ರಮೇಶ ಮಾಂಗಳೇಕರ, ಪ್ರಾಚಾರ್ಯ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬೆಳಗಾವಿ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ನಿವೇಶನ ಮಂಜೂರುಗೊಳಿಸುವ ಬಗ್ಗೆ ಆಡಳಿತಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು –ಅಶೋಕ ದುಡಗುಂಟಿ, ಆಯುಕ್ತ, ಮಹಾನಗರ ಪಾಲಿಕೆ ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.