ಸವದತ್ತಿ: ಪ್ರತಿವರ್ಷ ಅಂದಾಜು 1.25 ಕೋಟಿ ಭಕ್ತರು ಭೇಟಿ ನೀಡುವ ಯಲ್ಲಮ್ಮ ದೇವಸ್ಥಾನವನ್ನು ಅಂತರರಾಷ್ಟ್ರೀಯ ಮಟ್ಟದ ಪ್ರಸಿದ್ಧಿ ತಾಣವಾಗಿಸಲು ಸರ್ಕಾರ ಬದ್ಧವಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ತಾಲೂಕಿನ ಯಲ್ಲಮ್ಮ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದ ಅವರು, ಈಗಾಗಲೇ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಮತ್ತು ವಿಧಾನ ಸಭೆಯಲ್ಲಿ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ವಿಧೇಯಕ ಮಂಡಿಸಿ ಅನುಮೋದನೆ ಪಡೆಯಲಾಗಿದೆ. ಭಕ್ತರಿಗೆ ಮೂಲಸೌಕರ್ಯ ಸೇರಿ ಎಲ್ಲ ಕೊರತೆಗಳನ್ನು ನೀಗಿಸಲು ಕ್ರಮ ವಹಿಸಿ ಪ್ರೇಕ್ಷಣಿಯ ಮತ್ತು ಆಕರ್ಷಿಣೀಯ ತಾಣವನ್ನಾಗಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ರೈಲ್ವೆ ಸಂಪರ್ಕಕ್ಕೆ ಪ್ರಸ್ತಾವನೆ: ದೇಶದಾದ್ಯಂತ ಆಗಮಿಸುವ ಭಕ್ತರಿಗೆ ರೈಲು ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿದ್ದು, ಶೀಘ್ರದಲ್ಲಿಯೇ ಕೇಂದ್ರ ರೈಲ್ವೆ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿ ಒತ್ತಾಯಿಸಲಾಗುವುದು. ಧಾರವಾಡದಿಂದ ಯಲ್ಲಮ್ಮ ಕ್ಷೇತ್ರದ ಮೂಲಕ ಗೋಕಾಕ್ ಅಥವಾ ಸೂಕ್ತ ಪ್ರದೇಶಕ್ಕೆ ಮಾರ್ಗದ ಚಿಂತನೆ ನಡೆಸಲಾಗಿದೆ ಎಂದರು.
ಜಾನುವಾರುಗಳಿಗೆ ದಾಸೋಹ: ಜಾತ್ರಾ ದಿನಗಳಲ್ಲಿ ವಿಶೇಷವಾಗಿ ಚಕ್ಕಡಿ, ಕುದುರೆ ಬಂಡಿ, ಕಾಲ್ನಡಿಗೆ ಮೂಲಕ ಬರುವ ಸಂಪ್ರದಾಯವಿದೆ. ಜಾನುವಾರುಗಳಿಗಾಗಿ ದಾಸೋಹ ವ್ಯವಸ್ಥೆ ಕಲ್ಪಿಸುವವ ಬಗ್ಗೆಯೂ ಚರ್ಚೆ ನಡೆದಿದೆ. ದೇಶದ ಬಹುತೇಕ ದೇಗುಲಗಳಲ್ಲಿ ಅನ್ನದಾಸೋಹ ಯಥೇಚ್ಛವಾಗಿದೆ. ಆದರೆ ಜಾನುವಾರುಗಳಿಗೆ ಮೇವು ಹಾಗೂ ನೀರಿನ ಸೌಲಭ್ಯ ನೀಡಿ, ರೈತರಿಗೆ ಸ್ಪಂದಿಸಲಾಗುವುದು ಎಂದು ಸಚಿವರು ತಿಳಿಸಿದರು.
ದೇವಸ್ಥಾನ ಹಾಗೂ ಕೆಲ ಸಂಘಟನೆಗಳಿಂದ ಸಚಿವರನ್ನು ಸನ್ಮಾನಿಸಲಾಯಿತು.
ಶಾಸಕ ವಿಶ್ವಾಸ್ ವೈದ್ಯ, ಮಾಜಿ ಶಾಸಕ ಆರ್.ವಿ. ಪಾಟೀಲ, ಎಸಿ ಪ್ರಭಾವತಿ, ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ, ಎಸ್‍ಪಿಬಿ ಮಹೇಶ, ಪಿಐ ಧರ್ಮಾಕರ ಧರ್ಮಟ್ಟಿ, ಬಸವರಾಜ ಕಬ್ಬೂರ, ಬಸವರಾಜ ಆಯಟ್ಟಿ, ಮಲ್ಲು ಜಕಾತಿ, ನಿಂಗನಗೌಡ ಹರಳಕಟ್ಟಿ, ಸಿದ್ದನಗೌಡ ಗೂಡ್ರಾಶಿ, ರಾಮನಗೌಡ ತಿಪರಾಶಿ, ಅಭಿಷೇಕ ತಿಪರಾಶಿ, ಎಸ್.ವಿ ತುಪ್ಪದ, ರಾಜೇಶ ಅಂಗಡಿ, ನಿಂಗಪ್ಪ ಸಿದ್ದಕ್ಕನವರ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.