ಬೆಳಗಾವಿ: ‘ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳು ಕೃಷಿ, ಜಾನುವಾರು ಸಾಕಣೆಗೆ ಉತ್ಸಾಹ ತೋರುತ್ತಿಲ್ಲ. ಇದರ ಪರಿಣಾಮ ದೇಶದಲ್ಲಿ ಜನಸಂಖ್ಯೆ ಅನುಪಾತಕ್ಕೆ ಹೋಲಿಸಿದರೆ ಜಾನುವಾರು ಸಾಕಾಣಿಕೆ ಪ್ರಮಾಣ 1/3ಕ್ಕೆ ಕುಸಿದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಕಳವಳ ವ್ಯಕ್ತಪಡಿಸಿದರು.
ಸಮೀಪದ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ನಡಲಾದ ಸಂಚಾರ ಪಶು ಚಿಕಿತ್ಸಾ ಘಟಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ರೈತರು ರಾಸಾಯನಿಕ ಗೊಬ್ಬರಗಳ ಮೊರೆ ಹೋಗುತ್ತಿರುವುದರಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಭೂಮಿಯಲ್ಲಿ ಬೆಳೆದು ನಾವೆಲ್ಲ ಸೇವಿಸುತ್ತಿರುವ ಆಹಾರ ವಿಷಪೂರಿತವಾಗಿದೆ. ಪರಿಣಾಮವಾಗಿ ಕ್ಯಾನ್ಸರ್‌ನಂತಹ ರೋಗಗಳು ಬರುತ್ತಿವೆ. ಹೀಗಾಗಿ ದನ, ಎಮ್ಮೆ, ಕರು, ಹಸು, ಕುರಿಗಳನ್ನು ಸಾಕುವ ಮೂಲಕ ಸಾವಯವ ಗೊಬ್ಬರವನ್ನು ಬಳಸಿ ಭೂಮಿ ಫಲವತ್ತತೆ ಹೆಚ್ಚಿಸುವ ಜೊತೆಗೆ ಗುಣಮಟ್ಟದ ಬೆಳೆ ಬೆಳೆಯಬಹುದು ಎಂದು ಮನವಿ ಮಾಡಿದರು.
ಕೇಂದ್ರ ರಾಜ್ಯ ಸರ್ಕಾರಗಳು ಜಂಟಿಯಾಗಿ ರಾಜ್ಯದ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸುಮಾರು ₹44 ಕೋಟಿ ವೆಚ್ಚದಲ್ಲಿ ಸಂಚಾರ ಪಶು ಚಿಕಿತ್ಸಾ ಘಟಕಗಳನ್ನು ನೀಡಲಾಗಿದೆ. ಮುಂದಿನ ಹಂತದಲ್ಲಿ ಸಾವಯವ ಕೃಷಿ ಪದ್ಧತಿ, ಜಾನುವಾರು ಸಾಕಾಣಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಿವೆ ಎಂದು ತಿಳಿಸಿದರು.
ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಮಾತನಾಡಿ, ಪ್ರತಿ ಜಿಲ್ಲೆಯಲ್ಲೂ ಒಂದೊಂದು ಗೋ ಶಾಲೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಬದಲು ಗೋಶಾಲೆಗೆ ಕಳುಹಿಸಿ ಎಂದು ರೈತರಲ್ಲಿ ಮನವಿ ಮಾಡಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಾನು 20 ಸಾವಿರ ಗೋವುಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಿದ್ದೇನೆ. ಗೋ ಹತ್ಯೆ ನಿಷೇಧ ಕಾಯ್ದೆ ಉಲ್ಲಂಘಿಸಿದವರ ವಿರುದ್ಧ 900 ಪ್ರಕರಣಗಳನ್ನು ದಾಖಲಿಸಿ ಕ್ರಮಕ್ಕೂ ಮುಂದಾಗಿದ್ದೇನೆ ಎಂದು ತಿಳಿಸಿದರು.
ಜನರಿಗೆ ತೊಂದರೆಯಾದರೆ 108ಕ್ಕೆ ಮಾಡಿ ಜಾನುವಾರುಗಳಿಗೆ ತೊಂದರೆಯಾದರೆ 1962ಕ್ಕೆ ಕರೆ ಮಾಡಿ. ಪಶು ಚಿಕಿತ್ಸೆ ಸಲುವಾಗಿ ಈಗಾಗಲೇ ರಾಜ್ಯಕ್ಕೆ 275 ಸಂಚಾರ ಚಿಕಿತ್ಸಾ ಘಟಕಗಳು ಮಂಜೂರಾಗಿವೆ. ಜನರ ಜೊತೆಗೆ ಜಾನುವಾರುಗಳ ರಕ್ಷಣೆಗೆ ಕೂಡ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಭು ಚವ್ಹಾಣ ಅವರು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಪ್ರತಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ರೈತರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಪಶು ಸಂರಕ್ಷಣೆಗಾಗಿ ಈಗಾಗಲೇ ಲೋಕಾರ್ಪಣೆಗೊಂಡಿರುವ ಸಂಚಾರ ಚಿಕಿತ್ಸಾ ಘಟಕಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಪಶು ಸಾಕಾಣಿಕೆಗೆ, ಚಿಕಿತ್ಸೆ, ಆಸ್ಪತ್ರೆ, ಲಾಭ, ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಇಲಾಖೆ ಮಾಡಿರುವ ಸಾಧನೆ ಬಗ್ಗೆ 8 ನಿಮಿಷಗಳ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಇಲಾಖೆಯ ವಿವಿಧ ಯೋಜನೆಗಳ ಅಡಿ 18 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಸೌಲಭ್ಯಗಳ ಚೆಕ್ ವಿತರಣೆ ಮಾಡಲಾಯಿತು.
ವೇದಿಕೆ ಮೇಲೆ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಸಚಿವ ಪ್ರಭು ಚವ್ಹಾಣ ಅವರು ಸೇರಿದಂತೆ ಇಲಾಖೆಯ ಅಧಿಕಾರಿ ಸಿಬ್ಬಂದಿಯನ್ನು ಗೌರವಿಸಲಾಯಿತು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ, ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ದುರ್ಯೋಧನ ಐಹೊಳೆ, ಮಹಾದೇವಪ್ಪ ಯಾದವಾಡ, ಮಹಾಂತೇಶ ಕೌಜಲಗಿ, ಮಹಾಂತೇಶ ದೊಡ್ಡಗೌಡ್ರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ, ಪೊಲೀಸ್ ಕಮಿಷನರ್ ಡಾ.ಎಂ.ಬಿ. ಬೋರಲಿಂಗಯ್ಯ, ಪೊಲೀಸ್ ವರಿಷ್ಠಾಧಿಕಾರಿ ಸಂಜಯ ಪಾಟೀಲ, ಪಶುಪಾಲನಾ ಹಾಗೂ ಪಶುವೈದ್ಯಕೀಯ ಇಲಾಖೆಯ ನಿರ್ದೇಶಕ ಡಾ.ಎಂ.ಎಸ್.ಪಾಳೇಗಾರ್, ಇಲಾಖೆ ಆಯುಕ್ತ ಎಚ್. ಜಿ. ಬಸವರಾಜೇಂದ್ರ, ಉಪ ನಿರ್ದೇಶಕ ಡಾ.ರಾಜೀವ್ ಕೂಲೇರ ಸೇರಿದಂತೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.