ಬೆಳಗಾವಿ: ‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಬೇಷರತ್ತಾಗಿ ಈಡೇರಿಸುವ ಬದಲು, ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿರುವ ರಾಜ್ಯ ಸರ್ಕಾರದ ನಡೆಯನ್ನು ಎಐಡಿವೈಒ ವಿರೋಧಿಸುತ್ತದೆ’ ಎಂದು ಜಿಲ್ಲಾ ಸಂಚಾಲಕ ರಾಜು ಗಾಣಗಿ ತಿಳಿಸಿದ್ದಾರೆ.
ಈ ಬಗ್ಗೆ ಭಾನುವಾರ ಪ್ರಕಟಣೆ ನೀಡಿರುವ ಅವರು, ‘ಸುದೀರ್ಘ ಹೋರಾಟಕ್ಕೆ ಮನ್ನಣೆ ನೀಡುವ ಹೆಸರಿನಲ್ಲಿ ಸರ್ಕಾರವು ಒಡೆದು ಆಳುವ ನೀತಿ ಅನುಸರಿಸಿದೆ’ ಎಂದು ದೂರಿದ್ದಾರೆ.
‘ಸಾವಿರಾರು ಅತಿಥಿ ಉಪನ್ಯಾಸಕರು ಸೇವಾ ಅಭದ್ರತೆ, ವೇತನ ತಾರತಮ್ಯ ಖಂಡಿಸಿ ಬಹು ಕಾಲದಿಂದ ಹೋರಾಡುತ್ತಿದ್ದಾರೆ. ತಿಂಗಳಿನಿಂದ ಅನಿರ್ದಿಷ್ಟಾವಧಿ ತರಗತಿ ಬಹಿಷ್ಕಾರ ಮಾಡಿದ್ದಾರೆ. ಹೀಗಾಗಿ ಒತ್ತಡಕ್ಕೆ ಸಿಲುಕಿದ್ದ ಸರ್ಕಾರ ಗೌರವಧನ ಹೆಚ್ಚಿಸುವುದಾಗಿ ಘೋಷಿಸಿದೆ. ಕಾರ್ಯಭಾರವನ್ನು 15 ಗಂಟೆಗಳಿಗೆ ಹೆಚ್ಚಿಸಿ ಅದಕ್ಕೆ ಅನುಗುಣವಾಗಿ ಗೌರವಧನ ಹೆಚ್ಚಿಸಿದಂತಾಗಿದೆಯಷ್ಟೆ. ಇದರಿಂದ ವೇತನ ತಾರತಮ್ಯ ನಿವಾರಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿದಂತೆ ಆಗುವುದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.
‘ಕಾರ್ಯಭಾರ ಹೆಚ್ಚಿಸುವುದರಿಂದ ಈಗ ಕಾರ್ಯನಿರ್ವಹಿಸುತ್ತಿರುವ ಅರ್ಧ ಮಂದಿಗೆ ಮಾತ್ರ ಕೆಲಸ ಸಿಗಲಿದೆ. ಅವರ ಬಗ್ಗೆ ಸರ್ಕಾರ ಚಕಾರ ಎತ್ತಿಲ್ಲ. ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಇರುವವರು ಮತ್ತು ಇಲ್ಲದವರು ಎಂದು ವಿಂಗಡಿಸಿ ಅವರಿಗೆ ನೀಡುವ ಗೌರವಧಲ್ಲೂ ತಾರತಮ್ಯ ಮಾಡಲಾಗಿದೆ. ವರ್ಷಪೂರ್ತಿ ಕೆಲಸ ಕೊಡುವ ಯಾವುದೇ ಭರವಸೆ ನೀಡಿಲ್ಲ’ ಎಂದು ಕಿಡಿಕಾರಿದ್ದಾರೆ.
‘ಸೇವೆ ಕಾಯಂ ಆಗದ ಹೊರತು ಗೌರವಧನವನ್ನು ಎಷ್ಟೇ ಏರಿಕೆ ಮಾಡಿದರೂ ಅತಿಥಿ ಉಪನ್ಯಾಸಕರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಅತಿಥಿ ಉಪನ್ಯಾಸಕರು ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಹೋರಾಟ ಮುಂದುವರಿಸಬೇಕು. ಅದನ್ನು ಎಐಡಿವೈಒ ಬೆಂಬಲಿಸುತ್ತದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.