ADVERTISEMENT

ಬೆಳಗಾವಿ: ಗ್ರಾಮ ಪಂಚಾಯ್ತಿ ಉಪಚುನಾವಣೆಯಲ್ಲಿ ಆಕಾಂಕ್ಷಿಗಳ ನಿರಾಸಕ್ತಿ

ಶ್ರೀಕಾಂತ ಕಲ್ಲಮ್ಮನವರ
Published 11 ಫೆಬ್ರುವರಿ 2020, 19:30 IST
Last Updated 11 ಫೆಬ್ರುವರಿ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ವಿವಿಧ ಕಾರಣಗಳಿಂದಾಗಿ ಖಾಲಿಯಾಗಿದ್ದ ಜಿಲ್ಲೆಯ 33 ಗ್ರಾಮ ಪಂಚಾಯ್ತಿ ಸ್ಥಾನಗಳಿಗೆ ಈ ಸಲ ತುರುಸಿನ ಸ್ಪರ್ಧೆ ಕಂಡುಬರಲಿಲ್ಲ. ಯಾವುದೇ ಅಬ್ಬರವಿಲ್ಲದೇ, ಮುಗಿದುಹೋಗಿದೆ. ಬಹುತೇಕ ಪಂಚಾಯ್ತಿಗಳಲ್ಲಂತೂ ಚುನಾವಣೆ ಇದೆಯೋ, ಇಲ್ಲವೋ ಎನ್ನುವಷ್ಟರ ಮಟ್ಟಿಗೆ ‘ಸಪ್ಪೆ’ಯಾಗಿತ್ತು. ಕೇವಲ 2 ಸ್ಥಾನಗಳಿಗೆ ಮಾತ್ರ ಮತದಾನ ನಡೆದಿರುವುದೇ ಇದಕ್ಕೆ ಸಾಕ್ಷಿ.

ಈಗಿನ ಪಂಚಾಯ್ತಿಯ ಆಡಳಿತವು ಏಪ್ರಿಲ್‌–ಮೇ ತಿಂಗಳಿನಲ್ಲಿ ಕೊನೆಗೊಳ್ಳಲಿದ್ದು, ಕೇವಲ 3–4 ತಿಂಗಳು ಮಾತ್ರ ಅಧಿಕಾರ ಇರುತ್ತದೆ. ಇಷ್ಟು ಕಡಿಮೆ ಸಮಯಕ್ಕಾಗಿ ಏಕೆ ಚುನಾವಣೆ ಮಾಡಬೇಕು. ಏಪ್ರಿಲ್‌– ಮೇ ತಿಂಗಳಿನಲ್ಲಿ ಪೂರ್ಣಾವಧಿಗೆ ನಡೆಯಲಿರುವ ಸಾಮಾನ್ಯ ಚುನಾವಣೆಗೆ ಸ್ಪರ್ಧಿಸುವುದು ಲೇಸು ಎಂದುಕೊಂಡು ಬಹಳಷ್ಟು ಜನರು ದೂರವೇ ಉಳಿದಿದ್ದಾರೆ. ತಮ್ಮ ಕ್ಷೇತ್ರವನ್ನು ಬೇರೆ ಪಂಚಾಯ್ತಿಗೆ ಬದಲಾಯಿಸಬೇಕೆಂದು ಒತ್ತಾಯಿಸಿ, ಕೆಲವು ಕ್ಷೇತ್ರದವರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಇವೆಲ್ಲ ಕಾರಣಗಳಿಂದಾಗಿ ಈ ಸಲದ ಉಪಚುನಾವಣೆ ಕಳೆಗುಂದಿದೆ.

ಜಿಲ್ಲೆಯ ಬೆಳಗಾವಿ ತಾಲ್ಲೂಕಿನ 6, ಹುಕ್ಕೇರಿ ತಾಲ್ಲೂಕಿನ 1, ಖಾನಾಪುರ ತಾಲ್ಲೂಕಿನ 3, ಚಿಕ್ಕೋಡಿ ತಾಲ್ಲೂಕಿನ 3, ಅಥಣಿ ತಾಲ್ಲೂಕಿನ 4, ರಾಯಬಾಗ ತಾಲ್ಲೂಕಿನ 4, ರಾಮದುರ್ಗ ತಾಲ್ಲೂಕಿನ 2, ಸವದತ್ತಿ ತಾಲ್ಲೂಕಿನ 2, ಗೋಕಾಕ ತಾಲ್ಲೂಕಿನ 2, ಮೂಡಲಗಿ ತಾಲ್ಲೂಕಿನ 1, ಬೈಲಹೊಂಗಲ ತಾಲ್ಲೂಕಿನ 1, ಕಿತ್ತೂರು ತಾಲ್ಲೂಕಿನ 3 ಗ್ರಾಮ ಪಂಚಾಯ್ತಿಗಳ ಸ್ಥಾನಕ್ಕೆ ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು.

ADVERTISEMENT

ಇವುಗಳ ಪೈಕಿ 22 ಸ್ಥಾನಗಳಲ್ಲಿ ಅವಿರೋಧ ಆಯ್ಕೆಗಳು ನಡೆದವು. 9 ಸ್ಥಾನಗಳಿಗೆ ನಾಮಪತ್ರವೇ ಸಲ್ಲಿಕೆಯಾಗಿರಲಿಲ್ಲ. ಕೇವಲ 2 ಸ್ಥಾನಗಳಲ್ಲಿ ಮಾತ್ರ ಚುನಾವಣೆ ನಡೆಯಿತು. ಸವದತ್ತಿ ತಾಲ್ಲೂಕಿನ ತೆಗ್ಗಿಹಾಳ ಕ್ಷೇತ್ರ, ರಾಯಬಾಗ ತಾಲ್ಲೂಕಿನ ಪರಮಾನಂದವಾಡಿ ಕ್ಷೇತ್ರದಲ್ಲಿ ಮಾತ್ರ ಚುನಾವಣೆ ನಡೆದು, ಅಭ್ಯರ್ಥಿಗಳೂ ಆಯ್ಕೆಯಾದರು.

ಒಮ್ಮತಕ್ಕೆ ಒಲವು:ಆಡಳಿತದ ಅವಧಿ ಕಡಿಮೆ ಇರುವುದರಿಂದ ಚುನಾವಣೆ ನಡೆಸಲು ಹಲವರು ಹಿಂದೇಟು ಹಾಕಿದರು. ಇದೇ ಸಂದರ್ಭದಲ್ಲಿ ಗ್ರಾಮಗಳ ಮುಖ್ಯಸ್ಥರು ಮಧ್ಯೆ ಪ್ರವೇಶಿಸಿ, ಆಕಾಂಕ್ಷಿಗಳ ಜೊತೆ ಚರ್ಚಿಸಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು. ಮುಂದೆ ನಡೆಯಲಿರುವ ಸಾಮಾನ್ಯ ಚುನಾವಣೆಯಲ್ಲಿ ಮುಕ್ತವಾಗಿ ಸ್ಪರ್ಧಿಸಿ, ಆದರೆ, ಈಗ ಕಡಿಮೆ ಅವಧಿ ಇರುವುದರಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೈ ಸುಟ್ಟುಕೊಳ್ಳುವುದು ಬೇಡವೆಂದು ಹಿತವಚನ ನೀಡಿದರು. ಇದರ ಫಲವಾಗಿ 22 ಸ್ಥಾನಗಳಲ್ಲಿ ಅವಿರೋಧ ಆಯ್ಕೆಗಳು ನಡೆದವು. ಚುನಾವಣಾ ವೆಚ್ಚಕ್ಕೆ ತಗಲುತ್ತಿದ್ದ ಹಣ ಹಾಗೂ ಶ್ರಮ ಉಳಿದಂತಾಯಿತು.

ನಾಮಪತ್ರ ಸಲ್ಲಿಕೆಯಾಗಿಲ್ಲ:ತಮ್ಮ ಕ್ಷೇತ್ರವನ್ನು ಪ್ರತ್ಯೇಕ ಪಂಚಾಯ್ತಿ ರಚಿಸಬೇಕೆಂದು ಒತ್ತಾಯಿಸಿ ರಾಯಬಾಗ ತಾಲ್ಲೂಕಿನ ಅಳಗವಾಡಿ ಗ್ರಾಮ ಪಂಚಾಯ್ತಿಯ ಬಸ್ತವಾಡದ 8 ಕ್ಷೇತ್ರಗಳು, ಕಿತ್ತೂರು ತಾಲ್ಲೂಕಿನ ದಾಸ್ತಿಕೊಪ್ಪದ ವೀರಾಪೂರದ 4 ಕ್ಷೇತ್ರಗಳು, ಅಮರಾಪೂರದ 2 ಕ್ಷೇತ್ರಗಳ ಸ್ಥಾನಗಳಿಗೆ ಜನರು ನಾಮಪತ್ರ ಸಲ್ಲಿಸಿಲ್ಲ. 2015ರ ಸಾಮಾನ್ಯ ಚುನಾವಣೆಯಲ್ಲೂ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಅಂದಿನಿಂದ ಈ ಕ್ಷೇತ್ರಗಳಿಗೆ ಜನಪ್ರತಿನಿಧಿಗಳೇ ಇಲ್ಲದಂತಾಗಿದೆ.

ಇನ್ನುಳಿದಂತೆ, ಬೆಳಗಾವಿ ತಾಲ್ಲೂಕಿನ ಹೊಸವಂಟಮೂರಿ, ಚಿಕ್ಕೋಡಿಯ ನವಲಿಹಾಳ, ಕಮತೇನಟ್ಟಿ, ರಾಯಬಾಗದ ಬೆಂಡವಾಡ ಹಾಗೂ ಗೋಕಾಕದ ಅಂಕಲಗಿ ಕ್ಷೇತ್ರಕ್ಕೂ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.

*
‘ಕಡಿಮೆ ಅಧಿಕಾರಾವಧಿ ಇರುವುದರಿಂದ ಹೆಚ್ಚಿನ ಪಂಚಾಯ್ತಿಗಳಲ್ಲಿ ಚುನಾವಣಾಕಾಂಕ್ಷಿಗಳು ಆಸಕ್ತಿ ತೋರಿಲ್ಲ’
–ವಿಜಯಶ್ರೀ ನಾಗನೂರೆ, ಉಪತಹಶೀಲ್ದಾರ್‌, ಚುನಾವಣಾ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.