ADVERTISEMENT

ಗ್ರಾಮಾಯಣ: ಸಾಣಿಕೊಪ್ಪದಲ್ಲಿ ಹೆಜ್ಜೆ–ಹೆಜ್ಜೆಗೂ ಸಮಸ್ಯೆ

ಎಲ್ಲೆಂದರಲ್ಲಿ ಕಸದ ರಾಶಿ, ಮಳೆಗಾಲದಲ್ಲಿ ಕೆಸರುಮಯವಾಗಿ ಮಾರ್ಪಡುವ ರಸ್ತೆಗಳು

ರವಿ ಎಂ.ಹುಲಕುಂದ
Published 29 ಮೇ 2024, 4:37 IST
Last Updated 29 ಮೇ 2024, 4:37 IST
ಸಾಣಿಕೊಪ್ಪದಲ್ಲಿ ಪ್ರಮುಖ ಬೀದಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಬದಿ ಗಿಡಗಂಟಿ ಬೆಳೆದಿರುವುದು
ಸಾಣಿಕೊಪ್ಪದಲ್ಲಿ ಪ್ರಮುಖ ಬೀದಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಬದಿ ಗಿಡಗಂಟಿ ಬೆಳೆದಿರುವುದು   

ಬೈಲಹೊಂಗಲ: ರಸ್ತೆಬದಿ ಬಿದ್ದಿರುವ ಕಸದ ರಾಶಿ. ತ್ಯಾಜ್ಯ ಪದಾರ್ಥಗಳಿಂದ ತುಂಬಿ ತುಳುಕುವ ಚರಂಡಿಗಳು. ರಸ್ತೆಯಲ್ಲೇ ಹರಿಯುವ ಕೊಳಚೆ ನೀರು.
ಹಿರೇಬಾಗೇವಾಡಿ–ಸವದತ್ತಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಸಾಣಿಕೊಪ್ಪದಲ್ಲಿ ಒಂದು ಸುತ್ತು ಹಾಕಿಬಂದರೆ, ಇಂಥ ದೃಶ್ಯ ಕಣ್ಣಿಗೆ ಬೀಳುತ್ತವೆ.
ಚಿವಟಗುಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟಿರುವ ಈ ಗ್ರಾಮದಲ್ಲಿ 400 ಮನೆಗಳಿವೆ. 2,200 ಜನಸಂಖ್ಯೆ ಇದೆ. ರಾಜ್ಯ ಹೆದ್ದಾರಿ ಹಾಯ್ದು ಹೋಗಿದ್ದರೂ, ಈ ಊರು ಅಭಿವೃದ್ಧಿಗೆ ತನ್ನನ್ನು ತೆರೆದುಕೊಂಡಿಲ್ಲ. ಕನಿಷ್ಠ ಮೂಲಸೌಲಭ್ಯಕ್ಕಾಗಿ ಗ್ರಾಮಸ್ಥರ ಪರದಾಟ ತಪ್ಪಿಲ್ಲ.

ಶುಚಿತ್ವಕ್ಕೆ ಸಿಗದ ಆದ್ಯತೆ: ‘ನಮ್ಮೂರಿನಲ್ಲಿ ಕೃಷಿ ಕುಟುಂಬ ಹೆಚ್ಚಿವೆ. ಮುಖ್ಯರಸ್ತೆ ಬದಿ ಜಾನುವಾರುಗಳಿಗೆ ಬಣವೆಗಳ ರಾಶಿ ಮಾಡಲಾಗುತ್ತಿದೆ. ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ ಸಾಂಕ್ರಾಮಿಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ. ಆದರೆ, ಗ್ರಾಮ ಪಂಚಾಯ್ತಿಯವರು ಶುಚಿತ್ವಕ್ಕೆ ಆದ್ಯತೆ ನೀಡುತ್ತಿಲ್ಲ’ ಎಂದು ಗ್ರಾಮಸ್ಥರಾದ ಸಂದೀಪ ಮಾಯಕ್ಕನವರ, ಉದಯ ಚಿಕ್ಕಮಠ ಬೇಸರಿಸಿದರು.
‘ಮಳೆಯಾದರೆ ಗ್ರಾಮದಲ್ಲಿನ ರಸ್ತೆ ಕೆಸರುಮಯವಾಗಿ ಮಾರ್ಪಡುತ್ತಿವೆ. ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ. ರಸ್ತೆಯಲ್ಲಿ ಸಂಗ್ರಹವಾಗುತ್ತಿರುವ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕೆಂದು ಗ್ರಾ.ಪಂಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂಬುದು ಅವರ ಆರೋಪ.

ಹಲವೆಡೆ ತಿಪ್ಪೆಗುಂಡಿ: ಇಲ್ಲಿನ ಬಸ್ ತಂಗುದಾಣದಿಂದ ಹಾಲಿನ ಡೇರಿಯವರೆಗೆ ಹೋಗಲು ಮುಖ್ಯರಸ್ತೆ ಇಲ್ಲ. ಹೆದ್ದಾರಿ ಪಕ್ಕದಲ್ಲೇ ಶಾಲೆ ಇದೆ. ಆದರೆ, ಅಲ್ಲಿಗೆ ಹೋಗಿ ಬರಲು ವಿದ್ಯಾರ್ಥಿಗಳಿಗೆ ಪಾದಚಾರಿ ಮಾರ್ಗ ನಿರ್ಮಿಸಿಲ್ಲ. ಸೊಳ್ಳೆಗಳ ಕಾಟವೂ ಮಿತಿಮೀರಿದೆ. ಗ್ರಾಮದ ಹಲವೆಡೆ ತಿಪ್ಪೆಗುಂಡಿಗಳಿವೆ. ಮಳೆಯಾದರೆ ಸಾಕು. ಅವುಗಳೆಲ್ಲ ಕೊಳೆತು ದುರ್ವಾಸನೆ ಬೀರುತ್ತಿರುವ ಕಾರಣ, ಹೆದ್ದಾರಿಯಲ್ಲಿ ಸಾಗುವವರು ಮೂಗಿಗೆ ಕರವಸ್ತ್ರ ಕಟ್ಟಿಕೊಂಡು ಸಂಚರಿಸುವಂತಾಗಿದೆ.

‘ಊರಲ್ಲಿ ಈ ಹಿಂದೆ ಸರಿಯಾಗಿ ಕಸ ವಿಲೇವಾರಿ ಮಾಡಲಾಗುತ್ತಿತ್ತು. ಈಗ ಈ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ’ ಎಂಬುದು ಗ್ರಾಮಸ್ಥರ ಆರೋಪ.

ADVERTISEMENT

ಗ್ರಾಮದಲ್ಲಿನ ಜಲಕುಂಭಕ್ಕೆ ಪೂರ್ಣಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಶಿಥಿಲಗೊಂಡ ಕುಡಿಯುವ ನೀರಿನ ಟ್ಯಾಂಕ್‌ ಸೋರುತ್ತಿದೆ. ಕುಡಿಯುವ ನೀರಿನ ಬವಣೆ ಜನರನ್ನು ಹೈರಾಣಾಗಿಸಿದೆ.

ಸಾಣಿಕೊಪ್ಪ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ ಶಿಥಿಲಗೊಂಡಿರುವುದು

‌ಮುಖ್ಯರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ ₹5 ಲಕ್ಷ ಶಾಸಕರ ಅನುದಾನದಲ್ಲಿ ₹5 ಲಕ್ಷ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರ ಅನುದಾನ ಬರಲಿದ್ದು ಕಾಮಗಾರಿ ಆರಂಭಿಸಲಾಗುವುದು

–ಗೋಪಾಲ ಹುಬ್ಬಳ್ಳಿಕರ ಪಿಡಿಒ

ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ಅಗತ್ಯವಿದೆ. ಆದರೆ ಈವರೆಗೂ ಅನುದಾನ ಬಾರದ್ದರಿಂದ ಅಭಿವೃದ್ಧಿಗೆ ಹಿನ್ನಡಯಾಗಿದೆ. ಗ್ರಾಮಸ್ಥರ ದೂರುಗಳಿಗೆ ಉತ್ತರಿಸಲು ಕಷ್ಟವಾಗುತ್ತಿದೆ

– ನಾಗಪ್ಪ ಸಂಗೊಳ್ಳಿ, ಗ್ರಾ.ಪಂ ಸದಸ್ಯ

ಹೆದ್ದಾರಿ ಪಕ್ಕದಲ್ಲಿದ್ದರೂ ನಮ್ಮೂರು ಅಭಿವೃದ್ಧಿ ಹೊಂದದಿರುವುದಕ್ಕೆ ಬೇಸರವಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಅಭಿವೃದ್ಧಿಗೆ ಕ್ರಮ ವಹಿಸಬೇಕು

–ವಿನೋದ ಮುತ್ನಾಳ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.