ಬೈಲಹೊಂಗಲ: ಬ್ರಿಟಿಷರ ಆಡಳಿತಾವಧಿಯಲ್ಲಿ ತಾಲ್ಲೂಕು ಕೇಂದ್ರವಾಗಿದ್ದ, ಈಗಿನ ಬೈಲಹೊಂಗಲ ತಾಲ್ಲೂಕಿನ ಸಂಪಗಾಂವ ಗ್ರಾಮ ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿದೆ.
ಹಿರೇಬಾಗೇವಾಡಿ– ಸವದತ್ತಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಗ್ರಾಮ ಸುಮಾರು 12 ಸಾವಿರ ಜನಸಂಖ್ಯೆ ಹೊಂದಿದೆ. ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ 23 ಸದಸ್ಯರಿದ್ದಾರೆ. ತಾಲ್ಲೂಕಿನಲ್ಲಿ ದೊಡ್ಡ ಗ್ರಾಮವಾಗಿಯೂ ಗುರುತಿಸಿಕೊಂಡಿದೆ. ಆದರೆ, ಸೌಕರ್ಯಗಳ ವಿಚಾರದಲ್ಲಿ ಹಿಂದೆ ಬಿದ್ದಿದೆ.
‘ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಸ್ಥಾಪಿಸಿದ್ದ ಸರ್ಕಾರಿ ಶಾಲೆಯು ಶಿಥಿಲಗೊಂಡಿದ್ದು, ಅದಕ್ಕೆ ಬೀಗ ಜಡಿಯ
ಲಾಗಿದೆ. ಅದನ್ನು ಅಭಿವೃದ್ಧಿಪಡಿಸಬೇಕು. ಪ್ರಾಚ್ಯ ವಸ್ತು ಇಲಾಖೆಗೆ ಸೇರಿದ ಬೃಹತ್ ಮಸೀದಿಯೊಂದು ಇಲ್ಲಿದ್ದು, ಅದನ್ನು ಜೀರ್ಣೋದ್ಧಾರಗೊಳಿಸಬೇಕು’ ಎಂಬ ಒತ್ತಾಯ ಕೇಳಿಬರುತ್ತಿದೆ.
ಬೇರೆ ಊರಿಗೆ ಸ್ಥಳಾಂತರ: ಗ್ರಾಮಕ್ಕೆ ಹಲವು ಬಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾಗಿದೆ. ಆದರೆ, ಸರ್ಕಾರಿ ಜಾಗ ಇಲ್ಲದ್ದರಿಂದ ಬೇರೆ ಗ್ರಾಮಗಳಿಗೆ ಅದು ಸ್ಥಳಾಂತರಗೊಂಡಿದೆ. ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಗ್ರಾಮಸ್ಥರು ನೇಗಿನಹಾಳ, ನಾಗನೂರ, ಬೈಲಹೊಂಗಲ ಅಥವಾ ಬೆಳಗಾವಿಗೆ ತೆರಳುವ ಅನಿವಾರ್ಯ ಸೃಷ್ಟಿಯಾಗಿದೆ. ಇಲ್ಲಿ ಹೆರಿಗೆ ಆಸ್ಪತ್ರೆಯಿದೆ. ಆದರೆ, ಸಿಬ್ಬಂದಿ ಕೊರತೆಯಿಂದಾಗಿ ಅಲ್ಲಿಯೂ ತ್ವರಿತವಾಗಿ ಆರೋಗ್ಯ ಸೇವೆ ಸಿಗುತ್ತಿಲ್ಲ ಎನ್ನುವ ಆರೋಪವಿದೆ.
ಸಂಪಗಾಂವದ ಕೆಳಗಿನ ಬಸ್ ನಿಲ್ದಾಣದ ಬಳಿ ತೆರೆದ ಬಾವಿಯಿದೆ. ಅದಕ್ಕೆ ಸುರಕ್ಷತೆ ಗೋಡೆ ಇಲ್ಲ. ನೀರು ಕಲುಷಿತಗೊಂಡಿದೆ. ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸುವ ಟ್ಯಾಂಕ್‌ಗಳನ್ನು ನಿಯಮಿತವಾಗಿ ಶುಚಿಗೊಳಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ. ನಿರ್ವಹಣೆ ಕಾಣದ ಚರಂಡಿಗಳಿಂದ ಕೊಳಚೆ ನೀರು ರಸ್ತೆಮೇಲೆ ಹರಿಯುತ್ತಿದ್ದು, ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ.
ಜಲಜೀವನ ಮಿಷನ್ ಯೋಜನೆ ಕಾಮಗಾರಿಗಳಿಗಾಗಿ ವಿವಿಧ ರಸ್ತೆಗಳನ್ನು ಅಗೆದು ಬಿಟ್ಟಿದ್ದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಇಲ್ಲಿರುವ ಬಸ್ ತಂಗುದಾಣ ಹಾಳಾಗಿದೆ. ಇದರ ಮುಂದಿರುವ ಸಾರ್ವಜನಿಕ ಶೌಚಗೃಹ ಅವ್ಯವಸ್ಥೆಯ ಆಗರವಾಗಿವೆ.
ಬ್ರಿಟಿಷರು ಸಂಪಗಾಂವ ಗ್ರಾಮವನ್ನು ತಮ್ಮ ಆಡಳಿತ ಕೇಂದ್ರವಾಗಿರಿಸಿದ್ದರು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗ್ರಾಮದ ಸಮಗ್ರ ಅಭಿವೃದ್ಧಿಗೆ ಮನಸ್ಸು ಮಾಡುತ್ತಿಲ್ಲ-ಮಂಜುನಾಥ ಉಳವಿ ಮುಖಂಡ
ಗ್ರಾಮದ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸಲಾಗಿದೆ. ತೆರೆದ ಬಾವಿಗೆ ಸುರಕ್ಷಾ ಗೋಡೆ ಕಟ್ಟಲಾಗುವುದು. ಶಿಥಿಲಾವಸ್ಥೆಯಲ್ಲಿರುವ ಶಾಲೆ ಅಭಿವೃದ್ಧಿಪಡಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಪತ್ರ ಬರೆಯಲಾಗಿದೆಜ್ಯೋತಿ ಉಪ್ಪಿನ ಪಿಡಿಒ
ಬೇಕಿದೆ ಮತ್ತೊಂದು ಹೈಸ್ಕೂಲ್
ಗ್ರಾಮದಲ್ಲಿ ಸರ್ಕಾರಿ ಖಾಸಗಿ ಸೇರಿದಂತೆ ಐದು ಪ್ರಾಥಮಿಕ ಶಾಲೆ ತಲಾ ಒಂದು ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಇದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮತ್ತೊಂದು ಸರ್ಕಾರಿ ಪ್ರೌಢಶಾಲೆ ನಿರ್ಮಿಸಬೇಕೆನ್ನುವ ಬೇಡಿಕೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.