ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನಗುಡ್ಡದಲ್ಲಿ ನಡೆಯುವ ಜಾತ್ರೆಯಲ್ಲಿ ಯಲ್ಲಮ್ಮ ದೇವಸ್ಥಾನದಿಂದ ಪಶ್ಚಿಮ ದಿಕ್ಕಿಗೆ ಕಣ್ಣು ಹಾಯಿಸಿದರೆ ವೈವಿಧ್ಯಮಯ ಬಣ್ಣ ಬಣ್ಣದ ಬಳೆಗಳ ಮಾರಾಟ ಕಂಡುಬರುತ್ತದೆ. ಹಿಂದೆ ‘ಬಳೆಕಟ್ಟೆ’ ಎಂದು ಕರೆಯಲಾಗುತ್ತಿದ್ದ ಸ್ಥಳವೀಗ ‘ಬಳೆಪೇಟೆ’ ಆಗಿದೆ. ನೂರಾರು ಕುಟುಂಬಗಳು ದಶಕಗಳಿಂದ ಬಳೆ ಮಾರಾಟ ಮಾಡುತ್ತ ಬಂದಿವೆ. ಈಗೀಗ ಮಾರುಕಟ್ಟೆಯಲ್ಲಿ ಜಾಗ ಸಾಲದ್ದಕ್ಕೆ ಗುಡ್ಡದ ಪರಿಸರದಲ್ಲಿ ಎಲ್ಲೆಂದರಲ್ಲಿ ಬಳೆಗಳ ಮಾರಾಟ ನಡೆಯುತ್ತದೆ. ಹುಣ್ಣಿಮೆ ಸಮೀಪಿಸುತ್ತಲೇ ಎಲ್ಲ ಅಂಗಡಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತದೆ. ಬಳೆಗಳನ್ನು ಒಪ್ಪ–ಓರಣವಾಗಿ ಜೋಡಿಸಲಾಗುತ್ತದೆ. ದೇವಸ್ಥಾನದ ಪಶ್ಚಿಮ ಮತ್ತು ಉತ್ತರದಿಕ್ಕಿನಲ್ಲಿರುವ ವ್ಯಾಪಾರಿಗಳು ವರ್ಷವಿಡೀ ಬಳೆ ಮಾರುತ್ತಾರೆ. ಉಳಿದವರು ಜಾತ್ರೆಗೆ ಮಾತ್ರ ಬಂದು ವ್ಯಾಪಾರ ಮಾಡಿ ಮರಳುತ್ತಾರೆ.
ಈ ಜಾತ್ರೆಯಲ್ಲಿ ಬಳೆಗಳದ್ದೇ ವಿಶೇಷ. ಇದಕ್ಕೆ ಧಾರ್ಮಿಕ, ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಕಾರಣಗಳಿವೆ. ಇಲ್ಲಿ ವರ್ಷದ ಹನ್ನೆರಡು ಹುಣ್ಣಿಮೆಗಳಲ್ಲೂ ಜಾತ್ರೆ ನಡೆಯುತ್ತದೆ. ಅದರಲ್ಲಿ ಹೊಸ್ತಿಲ ಹುಣ್ಣಿಮೆ ಹೊರತುಪಡಿಸಿ, 11 ಹುಣ್ಣಿಮೆಗಳಲ್ಲಿ ಬಳೆ ಮಾರಾಟವಾಗುತ್ತದೆ. ಹೊಸ್ತಿಲ ಹುಣ್ಣಿಮೆ ದಿನ ದೇವಿ ವಿಧವೆ ಆಗುತ್ತಾಳೆ. ಭಾರತ ಹುಣ್ಣಿಮೆಗೆ ಮತ್ತೆ ಮುತ್ತೈದೆ ಆಗುತ್ತಾಳೆ. ಇದೇ ಕಾರಣಕ್ಕೆ ಮಹಿಳೆಯರು ತಾವೂ ನಿತ್ಯ ಮುತ್ತೈದೆ ಆಗಬೇಕೆಂಬ ಬಯಕೆಯಿಂದ ಇಲ್ಲಿ ಬಳೆ ಖರೀದಿಗೆ ಮುಂದಾಗುತ್ತಾರೆ.
ಭಾರತ ಹುಣ್ಣಿಮೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಳೆಗಳ ವ್ಯಾಪಾರ ನಡೆಯುತ್ತದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಗುಜರಾತ್ ಸೇರಿದಂತೆ ದೇಶದ ನಾನಾ ಭಾಗಗಳಿಂದ ಮಹಿಳೆಯರು ಇಲ್ಲಿಗೆ ಬರುತ್ತಾರೆ. ತಮ್ಮಿಷ್ಟದ ಬಳೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ. ಭಾರತ ಹುಣ್ಣಿಮೆಯಲ್ಲಿ ದೇವಿಗೆ ಬಳೆ, ಕಂಕಣ, ಮಡಿ, ಕುಂಕುಮ–ಭಂಡಾರದಂಥ ಮಂಗಳಕರ ವಸ್ತುಗಳನ್ನು ನೀಡಿದರೆ ತಮಗೆ ಭಾಗ್ಯ ಪ್ರಾಪ್ತವಾಗುತ್ತದೆ ಎಂಬುದು ನಂಬಿಕೆ.
‘ಬಳೆಗಳೆಂದರೆ ಹೆಣ್ಣುಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಯಲ್ಲಮ್ಮನಗುಡ್ಡದಲ್ಲಿ ಬಳೆ ಖರೀದಿಸಿ ತೊಟ್ಟರೆ ಮಂಗಳವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಪ್ರತಿ ವರ್ಷ ಇಲ್ಲಿ ಖರೀದಿಸಿದ ಹಸಿರು ಗಾಜಿನ ಬಳೆಗಳನ್ನೇ ತೊಟ್ಟುಕೊಳ್ಳುತ್ತೇನೆ’ ಎಂದು ದಾವಣಗೆರೆಯ ಮಂಜುಳಾ ಷಣ್ಮುಖ ಹೇಳಿದರೆ, ‘ಹೊಸ್ತಿಲ ಹುಣವ್ಯಾಗ ಅಮ್ಮ(ಯಲ್ಲಮ್ಮ) ವಿಧವೆ ಆಗೋದಕ್ಕ, ಕೈಯ್ಯಾಗಿನ ಹಳೇ ಬಳಿ ಎಲ್ಲಾ ತಗೀತೇವ್ರಿ. ಭಾರತ ಹುಣವ್ಯಾಗ ಮತ್ತ ಹೊಸ ಬಳಿ ಹಾಕೊಂಡು ಖುಷಿಪಡ್ತೇವ್ರಿ’ ಎನ್ನುತ್ತಾರೆ ಗದುಗಿನ ಜೋಗಪ್ಪ ತಿಪ್ಪಣ್ಣ.
‘ಒಂದೆರಡ ವರ್ಷ ಅಲ್ರಿ, ಅರವತ್ತ ವರ್ಷದಿಂದ ಇಲ್ಲೇ ಬಳಿ ಮಾರಾಕತ್ತೇವ್ರಿ. ಈ ಹುಣವ್ಯಾಗ ಹದಿನೈದ ದಿನಾ ಹಗಲ–ರಾತ್ರಿ ಅನ್ನದ, ನಾಲ್ಕೈದ ಮಂದಿ ಬಳಿ ಇಡಿಸ್ತೇವ್ರಿ. ಈ ಟೈಮದಾಗ್ ಏನಿಲ್ಲ ಅಂದ್ರು, ಇಪತ್ತೈದ ಸಾವಿರ ಡಜನ್(3 ಲಕ್ಷ) ಬಳಿ ಅಂತೂ ಪಕ್ಕಾ ಮಾರ್ತೇವ್ರಿ’ ಎಂದು ವ್ಯಾಪಾರಿ ಇರ್ಷಾದ್ ನೇಸರಗಿ ಹೇಳಿದರು. ಅವರೊಂದಿಗೆ ಇನ್ನಷ್ಟು ಮಾತನಾಡುವುದಿತ್ತು. ಆದರೆ, ಅವರು ಬಳೆ ತೋರಿಸುವುದು, ಚೌಕಾಶಿಗೆ ಇಳಿದವರೊಂದಿಗೆ ಮಾತನಾಡುವುದು, ಬಳೆ ತೊಡಿಸುವುದರಲ್ಲೇ ಮುಳುಗಿ ಹೋಗಿದ್ದರು. ಅದೇ ಸಾಲಿನಲ್ಲಿದ್ದ ಮತ್ತೊಂದು ಅಂಗಡಿಯಲ್ಲಿ ಚಹಾ ಕುಡಿಯಲೂ ಪುರುಸೊತ್ತು ಇಲ್ಲದ ಸಂತೋಷ ಬಡಿಗೇರ, ‘ನಮ್ಮನ್ಯಾಗ ಸಣ್ಣಾವರಿದಂದ ದೊಡ್ಡಾವರ ಮಟಾ ಎಲ್ಲಾರೂ ಗುಡ್ಡಕ್ಕ ಬಂದ ಬಳಿ ಮಾರಾತೇವ್ರಿ. ಇಲ್ಲಿ ದುಡಿಯೋ ರೊಕ್ಕದಾಗ ಬಾಳ್ವೆ ನಡಸಾತೇವ್ರಿ’ ಎಂದು ಚಹಾವನ್ನು ಗುಟುಕಿಸಿದರು.
ಎಲ್ಲಿಂದ ಬರುತ್ತವೆ ಬಳೆಗಳು?
ಉತ್ತರಪ್ರದೇಶದ ಫಿರೋಜಾಬಾದ್‌ನ ಕಾರ್ಖಾನೆಯಲ್ಲಿ ಗಾಜಿನ ಬಳೆಗಳು ತಯಾರಾಗುತ್ತವೆ. ಅಲ್ಲಿಂದ ಸವದತ್ತಿ, ಬೈಲಹೊಂಗಲ, ಬಾಗಲಕೋಟೆ ಜಿಲ್ಲೆಯ ಜಮಖಂಡಿಗೆ ಬರುವ ಬಳೆಗಳನ್ನು ಸಗಟು ವ್ಯಾಪಾರಿಗಳ ಬಳಿ ಯಲ್ಲಮ್ಮನಗುಡ್ಡದ ವ್ಯಾಪಾರಿಗಳು ಖರೀದಿಸುತ್ತಾರೆ. ಇದಲ್ಲದೆ, ಸವದತ್ತಿ, ಮುರಗೋಡ, ನೇಸರಗಿ ಮತ್ತು ಚನ್ನಮ್ಮನ ಕಿತ್ತೂರಿನಲ್ಲಿ ಕೈಯಿಂದ ತಯಾರಿಸುವ ಬಳೆಗೆ ಹೆಚ್ಚಿನ ಬೇಡಿಕೆಯಿದೆ. ‘ನಾವು ಬಳೆಚೂರುಗಳನ್ನೆಲ್ಲ ಕರಗಿಸಿ ಆಣ ಮಾಡುತ್ತೇವೆ. ನಂತರ ವೃತ್ತಾಕಾರದ ಕಬ್ಬಿಣದ ಸಲಾಕೆ ಮೂಲಕ ವಿವಿಧ ಅಳತೆಯ ಬಳೆ ತಯಾರಿಸುತ್ತೇವೆ. ಯಾವುದೇ ತುಣುಕು ಹೊಂದಿರದ ಈ ಅಖಂಡ ಬಳೆಗಳನ್ನು ಪೂಜೆ, ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಭಕ್ತರು ಹೆಚ್ಚಾಗಿ ಇಷ್ಟಪಡುತ್ತಾರೆ’ ಎಂದು ಕಿತ್ತೂರಿನ ರಾಜು ಉಗರಖೋಡ ಹೇಳುತ್ತಾರೆ.
ಗುಡ್ಡದಲ್ಲಿ ಒಂದು ಚುಕ್ಕೆ, ಎರಡು ಚುಕ್ಕೆ, ಮೂರು ಚುಕ್ಕೆ ಸೇರಿದಂತೆ ವಿವಿಧ ಹೆಸರಿನಿಂದ ಕರೆಯುವ ನಾನಾ ಬಣ್ಣಗಳ ಬಳೆ ಮಾರಾಟವಾಗುತ್ತವೆ. ಆದರೆ, ಶೇಕಡ 80 ರಷ್ಟು ಹಸಿರು ಬಣ್ಣದ ಬಳೆಗಳೇ ಮಾರಾಟವಾಗುವುದು.
ಬಳೆ ಮಾರುವವರ ಪೈಕಿ ಹೆಚ್ಚಿನವರು ಬೆಳಗಾವಿ, ವಿಜಯಪುರ ಜಿಲ್ಲೆಯವರು. ರಸ್ತೆಬದಿಯ ಸಣ್ಣ ಅಂಗಡಿಗಳೂ ಸೇರಿ ಇಲ್ಲಿ 150 ಅಂಗಡಿಗಳಿವೆ. ಅಲ್ಲಿ ಮಹಿಳೆಯರಿಗೆ ಬಳೆ ತೊಡಿಸುವವರ ಸಂಖ್ಯೆ ಆಧರಿಸಿ, ವ್ಯಾಪಾರ–ವಹಿವಾಟು ನಡೆಯುತ್ತದೆ. ಕೆಲವರು ಭಾರತ ಹುಣ್ಣಿಮೆಯ ಅವಧಿಯಲ್ಲೇ ₹1 ಲಕ್ಷ ಗಳಿಸಿದರೆ, ಕೆಲವರು ₹3 ಲಕ್ಷದಿಂದ ₹4 ಲಕ್ಷದವರೆಗೆ ಸಂಪಾದಿಸುತ್ತಾರೆ.
₹3 ಕೋಟಿ ವಹಿವಾಟು
‘ಭಾರತ ಹುಣ್ಣಿಮೆ ಅವಧಿಯಲ್ಲಿ ₹3 ಕೋಟಿಗೂ ಅಧಿಕ ವಹಿವಾಟು ನಡೆಯುತ್ತದೆ. ಇದಲ್ಲದೆ, ಪ್ರತಿ ಮಂಗಳವಾರ, ಶುಕ್ರವಾರ, ಹುಣ್ಣಿಮೆ ದಿನಗಳು ಮತ್ತು ನವರಾತ್ರಿಯಲ್ಲಿ ಹೆಚ್ಚಾಗಿ ಬಳೆ ಮಾರಾಟ ಕಂಡುಬರುತ್ತದೆ’ ಎನ್ನುತ್ತಾರೆ ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ.
‘ನಾವ ಕರ್ನಾಟಕ, ಮಹಾರಾಷ್ಟ್ರದಾಗ ಆಗೋ ಭಾಳಷ್ಟ ಜಾತ್ರಿಗೂ ಹೋಗ್ತೇವ್ರಿ. ಆದ್ರ ಯಲ್ಲವ್ವನ ಗುಡ್ಡಕ್ಕ ಬಂದಾಗ, ತಪ್ಪಸಲ್ದ ಬಳಿ ಹಾಕಸ್ಕೊಂಡು ಹೋಗ್ತೇವ್ರಿ. ನಾವಷ್ಟ ಅಲ್ಲ; ಊರಾಗಿರೋ ಹೆಣ್ಮಕ್ಳಿಗೂ ಪ್ರಸಾದ ರೂಪದಾಗ ಬಳಿ ಕೊಡ್ತೇವ್ರಿ’ ಎನ್ನುತ್ತಾರೆ ಗದಗ ಜಿಲ್ಲೆಯ ಯಂಡಿಗೇರಿಯ ಗೌರವ್ವ ಭಜಂತ್ರಿ.
ಭಾರತ ನಂಬಿಕೆಗಳನ್ನೇ ಉಸಿರಾಡುವ ದೇಶ. ಇಲ್ಲಿ ಸಾವಿರಾರು ನಂಬಿಕೆಗಳಿವೆ. ಜನರ ಇಂಥ ನಂಬಿಕೆಗಳೇ ಅಸಂಖ್ಯಾತ ಕುಟುಂಬಗಳಿಗೆ ಕೈ ತುಂಬ ಕೆಲಸ, ಒಂದಿಷ್ಟು ಆದಾಯವನ್ನು ತಂದುಕೊಡುತ್ತವೆ.
ಧಾರ್ಮಿಕ ಹಿನ್ನೆಲೆಯೂ ಇದೆ
‘‘ಕಾಶ್ಮೀರದ ಅರಸ ರೇಣುಕರಾಜನ ಪುತ್ರಿ ರೇಣುಕಾ ಯಲ್ಲಮ್ಮ ದೇವಿ. ಆಕೆ ಜಮದಗ್ನಿ ಮುನಿಯನ್ನು ವರಿಸುತ್ತಾಳೆ. ತಮ್ಮ ಬಳಿಯಿದ್ದ ಕಾಮುಧೇನುವನ್ನು ನೀಡಲು ಒಪ್ಪದಿದ್ದಾಗ, ಜಮದಗ್ನಿ ಮುನಿಯನ್ನು ಕಾರ್ತಿವೀರ್ಯಾರ್ಜುನ ಮಹಾರಾಜ ಸಂಹರಿಸುತ್ತಾನೆ. ಆಗ, ಗಂಡನನ್ನು ಕಳೆದುಕೊಂಡ ದೇವಿ ಮೂರು ಘಳಿಗೆ ವಿಧವೆಯಾಗುತ್ತಾಳೆ. ನಂತರ ದೇವಿಯು ಪುತ್ರ ಪರಶುರಾಮನನ್ನು ಕರೆದು, ‘ನನ್ನ ಗಂಡ ನನಗೆ ಬೇಕು. ಕೈಲಾಸದಿಂದ ಅಮೃತಕಳಶ ತರಬೇಕು’ ಎಂದು ಆದೇಶಿಸುತ್ತಾಳೆ. ಆತ ಕೈಲಾಸಕ್ಕೆ ಹೋಗಿ ಅಮೃತ ಕಳಸ ತಂದ ನಂತರ, ಜಮದಗ್ನಿ ಮುನಿ ಮರುಜನ್ಮ ಪಡೆಯುತ್ತಾರೆ. ದೇವಿ ಮುತ್ತೈದೆಯಾಗುತ್ತಾಳೆ. ಹೀಗಾಗಿ ಎಲ್ಲ ಮಹಿಳೆಯರೂ ಅದರ ಸಂಕೇತವಾಗಿರುವ ಬಳೆ ಧರಿಸುತ್ತಾರೆ. ತಮ್ಮ ಮನೆಗೆ ಕುಂಕುಮ– ಭಂಡಾರವನ್ನೂ ಒಯ್ಯುತ್ತಾರೆ’’ ಎನ್ನುತ್ತಾರೆ ದೇವಸ್ಥಾನದ ಅರ್ಚಕ ಏಕನಗೌಡ ಮುದ್ದನಗೌಡ್ರ.
ಧಾರ್ಮಿಕ ಹಿನ್ನೆಲೆಯೂ ಇದೆ
‘ಕಾಶ್ಮೀರದ ಅರಸ ರೇಣುಕರಾಜನ ಪುತ್ರಿ ರೇಣುಕಾ ಯಲ್ಲಮ್ಮ ದೇವಿ. ಆಕೆ ಜಮದಗ್ನಿ ಮುನಿಯನ್ನು ವರಿಸುತ್ತಾಳೆ. ತಮ್ಮ ಬಳಿಯಿದ್ದ ಕಾಮುಧೇನುವನ್ನು ನೀಡಲು ಒಪ್ಪದಿದ್ದಾಗ ಜಮದಗ್ನಿ ಮುನಿಯನ್ನು ಕಾರ್ತಿವೀರ್ಯಾರ್ಜುನ ಮಹಾರಾಜ ಸಂಹರಿಸುತ್ತಾನೆ. ಆಗ ಗಂಡನನ್ನು ಕಳೆದುಕೊಂಡ ದೇವಿ ಮೂರು ಘಳಿಗೆ ವಿಧವೆಯಾಗುತ್ತಾಳೆ. ನಂತರ ದೇವಿಯು ಪುತ್ರ ಪರಶುರಾಮನನ್ನು ಕರೆದು ‘ನನ್ನ ಗಂಡ ನನಗೆ ಬೇಕು. ಕೈಲಾಸದಿಂದ ಅಮೃತಕಳಶ ತರಬೇಕು’ ಎಂದು ಆದೇಶಿಸುತ್ತಾಳೆ. ಆಗ ಪರಶುರಾಮನು ಕೈಲಾಸಕ್ಕೆ ಹೋಗಿ ಅಮೃತ ಕಳಸ ತಂದ ನಂತರ ಜಮದಗ್ನಿ ಮುನಿ ಮರುಜನ್ಮ ಪಡೆಯುತ್ತಾರೆ. ದೇವಿ ಮುತ್ತೈದೆಯಾಗುತ್ತಾಳೆ. ಹೀಗಾಗಿ ಎಲ್ಲ ಮಹಿಳೆಯರೂ ಮುತ್ತೈದೆತನ ಸಂಕೇತವಾಗಿರುವ ಬಳೆ ಧರಿಸುತ್ತಾರೆ. ತಮ್ಮ ಮನೆಗೆ ಕುಂಕುಮ– ಭಂಡಾರವನ್ನೂ ಒಯ್ಯುತ್ತಾರೆ’ ಎಂದು ದೇವಸ್ಥಾನದ ಅರ್ಜಕ ಏಕನಗೌಡ ಮುದ್ದನಗೌಡ್ರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.