ADVERTISEMENT

ಬೆಳಗಾವಿ: ಹೆಸರುಕಾಳು ದರ ₹4,000ಕ್ಕೆ ಕುಸಿತ, ಚಿಂತೆಗೀಡಾದ ಜಿಲ್ಲೆಯ ಅನ್ನದಾತ

ಸಂತೋಷ ಈ.ಚಿನಗುಡಿ
Published 26 ಆಗಸ್ಟ್ 2024, 5:58 IST
Last Updated 26 ಆಗಸ್ಟ್ 2024, 5:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ 40 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದೆ. ಶೇ 80ರಷ್ಟು ರೈತರು ಈಗಾಗಲೇ ರಾಶಿ ಮಾಡಿದ್ದಾರೆ. ಲಕ್ಷಾಂತರ ಕ್ವಿಂಟಲ್‌ ಹೆಸರುಕಾಳು ಸಿದ್ಧಗೊಂಡಿದೆ. ಆದರೆ, ದರ ಕುಸಿತ ರೈತರನ್ನು ಚಿಂತೆಗೀಡು ಮಾಡಿದೆ. ಜಿಲ್ಲಾಡಳಿತ ಯಾವಾಗ ಖರೀದಿ ಕೇಂದ್ರ ತೆರೆಯುವುದೋ ಎಂದು ರೈತರು ಕಾದು ಕುಳಿತಿದ್ದಾರೆ.

ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆ ತುಂಬ ಹದವಾಗಿ ಬಿದ್ದಿದೆ. ಪರಿಣಾಮ ಪ್ರತಿ ವರ್ಷಕ್ಕಿಂತ ಈಗ ಹೆಸರು ಬೆಳೆ ಅತ್ಯಂತ ಫಲಪ್ರದವಾಗಿದೆ. ಕಳೆದ ವರ್ಷ ಭೀಕರ ಬರಗಾಲ ಎದುರಿಸಬೇಕಾಯಿತು. ಹೆಸರು ಬೆಳೆದ ಸಾವಿರಾರು ರೈತರು ಈಗಲಾದರೂ ಕಷ್ಟ ದೂರವಾಯಿತು ಎಂಬ ಖುಷಿಯಲ್ಲಿದ್ದಾರೆ. ಆದರೆ, ನಿರಂತರ ಕುಸಿತ ಕಂಡ ದರ ಅವರನ್ನು ಕಂಗಾಲು ಮಾಡಿದೆ.

‘ಮಾರುಕಟ್ಟೆಯಲ್ಲಿ ಹೆಸರು ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹4,000ರಿಂದ ಗರಿಷ್ಠ ₹ 6,500 ದರವಿದೆ. ಚಿಲ್ಲರೆ ಮಾರಾಟದಲ್ಲಿ ಈ ದರ ಇನ್ನೂ ಕಡಿಮೆಯಾಗಿದೆ. ಕಳೆದ ವರ್ಷ ಇದೇ ಸಮಯಕ್ಕೆ ₹8,580ರಿಂದ ₹10 ಸಾವಿರ ಇತ್ತು. ಈಗ ಅರ್ಧದಷ್ಟು ಕುಸಿದಿದೆ’ ಎಂಬ ಕೂಗು ರೈತರದ್ದು.

ADVERTISEMENT

‘ಈ ಬಾರಿ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ₹8,682 ದರ ನಿಗದಿಪಡಿಸಿದೆ. ಆದರೆ, ಖರೀದಿ ಕೇಂದ್ರ ಇನ್ನೂ ತೆರೆದಿಲ್ಲ. ರಾಜ್ಯ ಸರ್ಕಾರದಿಂದ ಸೂಚನೆ ಬಂದಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಕಬ್ಬಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಆದರೆ, ಇಲ್ಲಿಯೂ ಹೆಚ್ಚಿನ ಪ್ರಮಾಣದ ರೈತರು ಆರಂಭಿಕ ಬೆಳೆಯಾಗಿ ಹೆಸರು ಬಿತ್ತುತ್ತಾರೆ. ಜಿಲ್ಲಾಡಳಿತ ಇದನ್ನೂ ಗಮನಿಸಬೇಕು’ ಎಂಬುದು ಅವರು ಆಗ್ರಹ.

‘ಪ್ರತಿ ಎಕರೆಗೆ 4ರಿಂದ 5 ಕ್ವಿಂಟಲ್‌ ಹೆಸರು ಇಳುವರಿ ಬರುತ್ತದೆ. ಎಕರೆ ಬಿತ್ತನೆಗೆ ಒಟ್ಟಾರೆ ₹20 ಸಾವಿರ ಖರ್ಚಾಗುತ್ತದೆ. ಸದ್ಯ ದಲ್ಲಾಳಿಗಳ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ಗೆ ₹4,000 ಮಾರಾಟವಾಗುತ್ತಿದೆ. ರೈತರು ಬಿತ್ತಲು– ಬೆಳೆಯಲು ಹಾಕಿದ ಹಣ ಕೂಡ ಮರಳಿ ಬರುತ್ತಿಲ್ಲ’ ಎನ್ನುತ್ತಾರೆ ಅವರು.

ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮದ ರಸ್ತೆಯಲ್ಲಿ ಹೆಸರು ರಾಶಿಯಲ್ಲಿ ತೊಡಗಿದ ರೈತರು
ನಮ್ಮದು ಒಣಭೂಮಿ. ಪ್ರತಿ ಎಕರೆ ಹೆಸರು ಬೆಳೆಯಲು ₹20 ಸಾವಿರಕ್ಕೂ ಅಧಿಕ ವೆಚ್ಚವಾಗಿದೆ. ಉತ್ತಮ ದರ ಸಿಗದಿದ್ದರೆ ಎಲ್ಲವೂ ವ್ಯರ್ಥ
ದಾದಾಸಾಬ ಭಾವಾಖಾನ್ ರೈತ ಕರಿಕಟ್ಟಿ
ನಾಲ್ಕು ಎಕರೆಯಲ್ಲಿ ಹೆಸರು ಬೆಳೆದಿದ್ದೇನೆ. ಅತಿವೃಷ್ಟಿಯಿಂದ ಅರ್ಧದಷ್ಟು ಹಾನಿಯಾಗಿದೆ. ಈಗ ಬೆಲೆ ಕುಸಿತ ಮತ್ತಷ್ಟು ಕಂಗೆಡಿಸಿದೆ
ಬಸವರಾಜ ರೇವಣ್ಣವರ ರೈತ ಸುತಗಟ್ಟಿ
ಖರೀದಿ ಕೇಂದ್ರಕ್ಕೆ ಅನುಮತಿ ಕೋರಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಅನುಮತಿ ಸಿಕ್ಕ ತಕ್ಷಣ ಕೇಂದ್ರ ತೆರೆಯಲಾಗುವುದು
ಎಂ.ಡಿ.ಚಬನೂರ ಉಪನಿರ್ದೇಶಕ ಕೃಷಿ ಮಾರುಕಟ್ಟೆ
ಹೆಸರು ದರ ಕುಸಿತವಾಗಿದ್ದು ಗಮನಕ್ಕೆ ಬಂದಿದೆ. ಖರಿದಿ ಕೇಂದ್ರದ ಅವಶ್ಯಕತೆ ಕುರಿತು ಪತ್ರ ಬರೆಸಿದ್ದೇನೆ. ರೈತರ ಬೇಡಿಕೆ ಶೀಘ್ರ ಈಡೇರಲಿದೆ
ಮೊಹಮ್ಮದ್‌ ರೋಷನ್‌ ಜಿಲ್ಲಾಧಿಕಾರಿ
ರಾಶಿಗೆ ಬಿಡುವು ಕೊಟ್ಟ ಮಳೆ
ಕಳೆದೆರಡು ವಾರಗಳ ಹಿಂದೆ ನಿರಂತರವಾಗಿ ಸುರಿದ ಮಳೆಯಿಂದ ಹೆಸರು ಬೆಳೆ ಕೂಡ ಸಂಕಷ್ಟಕ್ಕೆ ಸಿಲುಕಿತು. ಅಪಾರ ಪ್ರಮಾಣದ ಸಸಿಗಳು ಕೊಳೆತವು. ಆದರೆ 15 ದಿನಗಳಿಂದ ಮಳೆರಾಯ ಬಿಡುವು ನೀಡಿದ್ದಾನೆ. ಇದೇ ಸಮಯ ಬಳಸಿಕೊಂಡು ರೈತರು ರಾಶಿ ಶುರು ಮಾಡಿದ್ದಾರೆ. ಜಿಲ್ಲೆಯ ಸವದತ್ತಿ ಬೈಲಹೊಂಗಲ ಗೋಕಾಕ ಚನ್ನಮ್ಮನ ಕಿತ್ತೂರು ಯರಗಟ್ಟಿ  ರಾಮದುರ್ಗ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬಿತ್ತಲಾಗಿದೆ. ಈ ತಾಲ್ಲೂಕಿನ ಡಾಂಬರು ರಸ್ತೆಗಳಲ್ಲಿ ರೈತರು ರಾಶಿ ಮಾಡುವುದು ಸಾಮಾನ್ಯವಾಗಿದೆ. ಚೀಲಗಳಲ್ಲಿ ತುಂಬಿ ಸಾಲಾಗಿ ಇಟ್ಟ ಫಸಲನ್ನು ಮಾರುಕಟ್ಟೆಗೆ ಕಳುಹಿಸುವ ಧೈರ್ಯ ಮಾತ್ರ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.