ADVERTISEMENT

ಗ್ಯಾರಂಟಿ, ಅಭಿವೃದ್ಧಿಯಿಂದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲುವು: ಸತೀಶ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2024, 11:43 IST
Last Updated 23 ನವೆಂಬರ್ 2024, 11:43 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ರಾಜ್ಯದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳಿಂದಾಗಿ ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇವೆ. ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟದ ಸಹೋದ್ಯೋಗಿಗಳು, ಕಾಂಗ್ರೆಸ್‌ನ ಮುಖಂಡರು ಹಾಗೂ ಕಾರ್ಯಕರ್ತರು ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ಗೆಲುವಿಗೆ ಶ್ರಮಿಸಿದರು. ಹಾಗಾಗಿ ಕಳೆದ ನಾಲ್ಕು ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದ ಕ್ಷೇತ್ರವನ್ನು ನಮ್ಮ ತೆಕ್ಕೆಗೆ ಪಡೆದೆವು’ ಎಂದು ಹೇಳಿದರು.

‘ಪ್ರತಿ ಚುನಾವಣೆಯಲ್ಲಿ ಧಾರ್ಮಿಕ ಭಾವನೆ ಇಟ್ಟುಕೊಂಡು ಬಿಜೆಪಿಯವರು ಗೆಲ್ಲುತ್ತಿದ್ದರು. ಈ ಬಾರಿ ಅದಕ್ಕೆ ಅವಕಾಶ ನೀಡಲಿಲ್ಲ. ಈ ಹಿಂದೆ ಅಹಿಂದ ಮತದಾರರು ಬಿಜೆಪಿ ಜತೆ ಹೋಗುತ್ತಿದ್ದರು. ಈ ಬಾರಿ ನಾವು ಮಾಡಿದ ತಂತ್ರಗಾರಿಕೆಯಿಂದ ಶೇ 70ರಷ್ಟು ಅಹಿಂದ ಮತಗಳು ಕಾಂಗ್ರೆಸ್‌ನತ್ತ ವಾಲಿದವು. ಹಾಗಾಗಿ ಅಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು’ ಎಂದು ತಿಳಿಸಿದರು.

ADVERTISEMENT

‘ಮಾಜಿ ಮುಖ್ಯಮಂತ್ರಿ ಹಾಗೂ ಪ್ರಬಲ ರಾಜಕಾರಣಿ ಬಸವರಾಜ ಬೊಮ್ಮಾಯಿ ಪುತ್ರನ ವಿರುದ್ಧ ಕಾಂಗ್ರೆಸ್‌ನವರು ಹೇಗೆ ಚುನಾವಣೆ ಎದುರಿಸುತ್ತಾರೆ ಎಂದು ಇಡೀ ರಾಜ್ಯದ ಜನರು ನೋಡುತ್ತಿದ್ದರು. ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಿದೆವು. ಗೆಲುವಿಗಾಗಿ ಕೆಲವು ತಂತ್ರ ಹೆಣೆದೆವು. ಹಾಗಾಗಿ ಗೆಲುವು ದಕ್ಕಿತು’ ಎಂದರು.

‘ಮುಡಾ ನಿವೇಶನ ಹಂಚಿಕೆ ಹಗರಣ ಮತ್ತು ರೈತರಿಗೆ ವಕ್ಫ್ ಮಂಡಳಿ ನೋಟಿಸ್‌ ಕೊಟ್ಟ ವಿಷಯವನ್ನು ಬಿಜೆಪಿ ಕೈಗೆತ್ತಿಕೊಂಡಿತ್ತು. ಆದರೆ, ಹಾವೇರಿ ಜಿಲ್ಲೆಯಲ್ಲಿ ಜಾರಿಯಾದ 650 ನೋಟಿಸ್‌ಗಳಲ್ಲಿ ಸುಮಾರು 500 ಮುಸ್ಲಿಮರ ಒಡೆತನದ ಜಮೀನುಗಳಿವೆ. ಹಾಗಾಗಿ ವಕ್ಫ್‌ ಮಂಡಳಿ ವಿಚಾರವಾಗಿ ವಿವಾದ ಸೃಷ್ಟಿಸಲು ಬಿಜೆಪಿಯವರಿಗೆ ಅವಕಾಶ ನೀಡಲಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.