ADVERTISEMENT

ಚನ್ನಮ್ಮನ ಕಿತ್ತೂರು ಉತ್ಸವ| ಸಂಗೀತಕ್ಕಿದೆ ಸಮರ ನಿರೋಧಕ ಶಕ್ತಿ: ಹಂಸಲೇಖ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 17:30 IST
Last Updated 25 ಅಕ್ಟೋಬರ್ 2023, 17:30 IST
<div class="paragraphs"><p>ಚನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ಕಿತ್ತೂರು ಉತ್ಸವದ ಸಮಾರೋಪ ಭಾಷಣ ಮಾಡಿದ ಚಲನಚಿತ್ರ ನಟ ರಮೇಶ್‌ ಅರವಿಂದ್‌ ಅವರನ್ನು ಹಂಸಲೇಖ ಹಾಗೂ ಶಾಸಕ ಬಾಬಾಸಾಹೇಬ ಪಾಟೀಲ ಸನ್ಮಾನಿಸಿದರು</p></div>

ಚನ್ನಮ್ಮನ ಕಿತ್ತೂರಿನಲ್ಲಿ ಬುಧವಾರ ಕಿತ್ತೂರು ಉತ್ಸವದ ಸಮಾರೋಪ ಭಾಷಣ ಮಾಡಿದ ಚಲನಚಿತ್ರ ನಟ ರಮೇಶ್‌ ಅರವಿಂದ್‌ ಅವರನ್ನು ಹಂಸಲೇಖ ಹಾಗೂ ಶಾಸಕ ಬಾಬಾಸಾಹೇಬ ಪಾಟೀಲ ಸನ್ಮಾನಿಸಿದರು

   

ರಾಣಿ ಚನ್ನಮ್ಮ ವೇದಿಕೆ (ಚನ್ನಮ್ಮನ ಕಿತ್ತೂರು): ‘ಕೇವಲ ಏಳು ಅನ್ವಸ್ತ್ರಗಳನ್ನು ಬಳಸಿದರೆ ಇಡೀ ಭೂಮಿ ನಾಶ ಮಾಡಬಹುದು. ಆದರೆ, ವಿಶ್ವದಲ್ಲಿ ಈಗ ಸಾವಿರಕ್ಕೂ ಹೆಚ್ಚು ಅನ್ವಸ್ತ್ರಗಳಿವೆ. ಇಂಥ ಯುದ್ಧಭೀತಿಯಿಂದ ಪ್ರಪಂಚವನ್ನು ರಕ್ಷಣೆ ಮಾಡಲು ಸಂಗೀತಕ್ಕೆ ಮೊರೆ ಹೋಗಬೇಕು’ ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದ ಮೂರು ದಿನಗಳ ಕಿತ್ತೂರು ಚನ್ನಮ್ಮನ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಂಗೀತ ರೋಗನಿರೋಧಕ ಎಂದು ಸಿದ್ಧವಾಗಿದೆ. ಹಾಗೆಯೇ ಸಂಗೀತ ಸಮರ ನಿರೋಧಕ ಕೂಡ ಆಗಿದೆ’ ಎಂದರು.

ADVERTISEMENT

‘ಈಟಿ, ಭರ್ಚಿ, ಖಡ್ಗಗಳಿಂದ ಯುದ್ಧ ಮಾಡುವ ಕಾಲ ಈಗ ಇಲ್ಲ. ಬಾಂಬಗಳಿಂದ ಗೆಲುವು ಸಾಧಿವುಸುದೂ ಆಗುತ್ತಿಲ್ಲ. ಹೀಗಾಗಿ, ಕುಳಿತಲ್ಲಿಂದಲೇ ಅನ್ವಸ್ತ್ರ ಹಾಕುವಂಥ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂಥ ಸಂದಿಗ್ಧ ಸನ್ನಿವೇಶದಂದ ಭೂಮಿಯನ್ನು ರಕ್ಷಿಸಲು ಸಂಗೀತವನ್ನೇ ಪ್ರತ್ಯಸ್ತ್ರ ಮಾಡಿಕೊಳ್ಳಬೇಕಾಗಿದೆ’ ಎಂದರು.

ಇದಕ್ಕೂ ಮುನ್ನ ಸಮಾರೋಪ ಭಾಷಣ ಮಾಡಿದ ಚಲನಚಿತ್ರ ನಟ ರಮೇಶ ಅರವಿಂದ್‌, ‘ಯುದ್ಧಗಳನ್ನು ಗೆಲ್ಲುವುದು ಯುದ್ಧಭೂಮಿಯಲ್ಲಿ ಅಲ್ಲ, ನಮ್ಮ ಮಿದುಳಿನಲ್ಲಿ. ನಮ್ಮ ಆಲೋಚನೆಗಳು, ಛಲ, ನಿರ್ಧಾರಗಳೇ ನಮಗೆ ಗೆಲುವು ತಂದುಕೊಡುತ್ತವೆ. ರಾಣಿ ಚನ್ನಮ್ಮ ಕೂಡ ಇಂಥದ್ದೇ ಛಲದಿಂದ ಯುದ್ಧ ಗೆದ್ದವರು’ ಎಂದರು.

‘ಬಾಂಬ್‌, ರಾಕೆಟ್‌ ದಾಳಿಯಿಂದ ರಕ್ಷಣೆಗೆ ಇಸ್ರೇಲ್‌ನಲ್ಲಿ ಕಬ್ಬಿಣದ ಗುಮ್ಮಟ ನಿರ್ಮಾಣ ಮಾಡಿದ್ದಾರೆ. ಇದಕ್ಕೂ 200 ವರ್ಷಗಳ ಮುಂಚೆಯೇ ಕಿತ್ತೂರಿನಲ್ಲಿ ಕಬ್ಬಿಣದ ರಕ್ಷಣಾ ಗುಮ್ಮಟವಾಗಿ ನಿಂತವರು ರಾಣಿ ಚನ್ನಮ್ಮ. ದುರ್ಗೆಯಲ್ಲಿ ಇರುವ ಸಂಹಾರ ಗುಣಗಳು ಚನ್ನಮ್ಮನಲ್ಲಿ ಇದ್ದವು. ಈ ನೆಲದ ಪ್ರತಿಯೊಬ್ಬ ಮಹಿಳೆ– ಪುರುಷ ಕೂಡ ಚನ್ನಮ್ಮನ ಛಲ ಬೆಳೆಸಿಕೊಳ್ಳಬೇಕು’ ಎಂದು ಅವರು ಕರೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ‘ಚನ್ನಮ್ಮನ ಇತಿಹಾಸವನ್ನು ರಾಷ್ಟ್ರದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಧಿಕೃತವಾಗಿ ಘೋಷಣೆ ಮಾಡಬೇಕು. ಈ ನಿಟ್ಟಿನಲ್ಲಿ ಸಚಿವರು, ಶಾಸಕರು ಒತ್ತಡ ತರಬೇಕು. ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕು’ ಎಂದೂ ಅವರು ಆಗ್ರಹಿಸಿದರು.

ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ, ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕಾದರವಳ್ಳಿಯ ಪಾಲಾಕ್ಷ ಶಿವಯೋಗೀಶ್ವರ ಸ್ವಾಮೀಜಿ, ಶಾಸಕ ಬಾಬಾಸಾಹೇಬ್‌ ಪಾಟೀಲ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ, ರಾಣಿ ಚನ್ನಮ್ಮ ವಂಶಜರಾದ ಸುರೇಖಾ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.