ಬೆಳಗಾವಿ: ತಮ್ಮ 44ನೇ ವಯಸ್ಸಿನಲ್ಲಿ ಆರೋಗ್ಯದ ಅನುಕೂಲಕ್ಕಾಗಿ ಸೈಕಲ್ ರೈಡಿಂಗ್ ತರಬೇತಿ ಆರಂಭಿಸಿದ ನಗರದ ಸಂಜಯಕುಮಾರ ಅವರು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾ ಪೂರ್ಣಾವಧಿ ರೈಡರ್ ಆಗಿ ಗುರುತಿಸಿಕೊಂಡಿದ್ದಾರೆ.
ಇಲ್ಲಿನ ಅಜಂ ನಗರದ ನಿವಾಸಿಯಾದ ಅವರು, ಅನೇಕ ವರ್ಷಗಳಿಂದ ಸ್ಟೇಷನರಿ ಅಂಗಡಿಯನ್ನು ನಡೆಸುತ್ತಿದ್ದರು. ಗ್ರಾಹಕರಿಗೆ ಸಾಮಗ್ರಿಗಳನ್ನು ಕೊಡುವುದಕ್ಕಾಗಿ ಬೆಳಿಗ್ಗೆಯಿಂದ ಸಂಜೆಯವರೆಗೂ ಹೆಚ್ಚು ಹೊತ್ತು ನಿಂತೇ ಇರಬೇಕಾಗಿತ್ತು. ಇದರಿಂದ ಕಾಲು ನೋವು ಹಾಗೂ ಮೈ–ಕೈ ನೋವು ಅವರನ್ನು ಕಾಡುತ್ತಿತ್ತು. ನಿವಾರಣೆಗಾಗಿ ಬಾಡಿ ಮಸಾಜ್ ಮಾಡಿಕೊಳ್ಳಲು ತೆರಳಿದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ಸೈಕ್ಲಿಂಗ್ ಮಾಡುವಂತೆ ಸಲಹೆ ನೀಡಿದ್ದರು. ಇದು ಅವರಿಗೆ ಸೈಕ್ಲಿಸ್ಟ್ ಆಗಿ ಹೊರಹೊಮ್ಮಲು ಕಾರಣವಾಯಿತು ಎಂದು ನೆನೆಯುತ್ತಾರೆ ಅವರು.
ಸ್ಪೋರ್ಟ್ಸ್ ಸೈಕಲ್ ಖರೀದಿಸಲು ಹಣ ಇಲ್ಲದೇ ಇರುವುದರಿಂದ ಅವರು ಅನೇಕ ದಿನಗಳ ಕಾಲ ಖರೀದಿ ಮಾಡಿರಲಿಲ್ಲ. ತಮ್ಮ ಸಂಬಂಧಿಯೊಬ್ಬರಿಗೆ ಈ ವಿಷಯ ತಿಳಿಸಿದಾಗ ಅವರು ಸೈಕಲ್ ಕೊಡಿಸಿದರು. 2018ರಲ್ಲಿ ಸಂಜಯ ಅವರು ನಗರದ ‘ಬೆಳಗಾವಿ ಪೆಡರಲ್ಸ್ ಕ್ಲಬ್’ಗೆ ತರಬೇತಿಗಾಗಿ ಸೇರಿದರು. ಅಲ್ಲಿನ ಕೋಚ್ ಇಜಾಜ್ ಇನಾಮದಾರ ಅವರ ಸಲಹೆ ಮೇರೆಗೆ ಬಹುಬೇಗನೆ ಸೈಕ್ಲಿಂಗ್‌ನಲ್ಲಿ ನಿಷ್ಣಾತರಾದರು.
ಹಲವು ದಾಖಲೆ:ಸಂಜಯ ಅವರು 2018ರಲ್ಲಿ ಗೋವಾದಲ್ಲಿ ನಡೆದಪುರುಷರ 100 ಕಿ.ಮೀ. ಸೈಕ್ಲಿಂಗ್‌ನಲ್ಲಿ ಭಾಗವಹಿಸಿ, ಕೇವಲ 6 ಗಂಟೆಗಳಲ್ಲಿ ಮೊದಲನೇಯವರಾಗಿ ಗುರಿ ತಲುಪಿ ಸಾಧನೆಗೈದರು. ಗುರಿ ತಲುಪಲು 9 ಗಂಟೆ ಸಮಯಾವಕಾಶ ಇತ್ತು. ಆದರೆ, ಅವರು 3 ಗಂಟೆ ಮೊದಲೇ ತಲುಪಿ ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದರು. ಅದೇ ವರ್ಷ ಗೋವಾದಲ್ಲೇ ಏರ್ಪಡಿಸಿದ್ದ 200 ಕಿ.ಮೀ. ಸ್ಪರ್ಧೆಯಲ್ಲಿ ಕೇವಲ 9 ಗಂಟೆಗಳಲ್ಲಿ ಗುರಿ ತಲುಪಿ, ಪ್ರಥಮ ಸ್ಥಾನ ಗಳಿಸಿದರು. ಗುರಿ ತಲುಪಲು 13.30 ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕ್ರಮಿಸಿ ಸಾಧನೆ ತೋರಿದ್ದಾರೆ.
ಇತ್ತೀಚೆಗೆ ಪುಣೆಯಲ್ಲಿ ಬಿಆರ್‌ಎಂ ಸಂಸ್ಥೆಯಿಂದ ಏರ್ಪಡಿಸಿದ್ದ 600 ಕಿ.ಮೀ. ದೂರ ಕ್ರಮಿಸುವ ಸ್ಪರ್ಧೆಯಲ್ಲಿ ಕೇವಲ 28.5 ಗಂಟೆಗಳಲ್ಲಿ ಮೊದಲನೇಯವರಾಗಿ ಗುರಿ ತಲುಪಿದ್ದಾರೆ. 40 ಗಂಟೆಗಳ ಸಮಯಾವಕಾಶ ಇದ್ದರೂ 11.5 ಗಂಟೆಗೂ ಮೊದಲೇ ಗುರಿ ತಲುಪಿ ತಾವೊಬ್ಬ ಅತ್ಯುತ್ತಮ ರೈಡರ್ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಪ್ರತಿದಿನ ಅಭ್ಯಾಸ:ಬೆಳಿಗ್ಗೆ 4.30ಕ್ಕೆ ಎದ್ದು ಸೈಕ್ಲಿಂಗ್ ತರಬೇತಿ ಆರಂಭಿಸುವ ಅವರು 7.30ರವರೆಗೂ ಸೈಕ್ಲಿಂಗ್ ಮಾಡುತ್ತಾರೆ. ಪ್ರತಿದಿನ 50 ಕಿ.ಮೀ. ಕ್ರಮಿಸುತ್ತಾರೆ. ಯೋಗಾಸನ ಸೇರಿ ಇನ್ನಿತರೆ ವ್ಯಾಯಾಮಗಳಲ್ಲೂ ತೊಡಗಿಸಿಕೊಳ್ಳುತ್ತಾರೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಅಂಗಡಿಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುತ್ತಾರೆ.
‘ನನಗಿದ್ದ ಮಧುಮೇಹ ಸಮಸ್ಯೆ, ಮೈ–ಕೈ ನೋವು ಸೇರಿ ಇನ್ನಿತರ ದೈಹಿಕ ಸಮಸ್ಯೆಗಳು ಸೈಕ್ಲಿಂಗ್‌ನಿಂದಾಗಿ ವಾಸಿಯಾಗಿವೆ. ಮನಸ್ಸಿಗೆ ನೆಮ್ಮದಿಯೂ ದೊರೆತಿದೆ’ ಎಂದು ಸಂಜಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.