ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರು, 2ನೇ ಬಾರಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.
‘17 ವರ್ಷದ ವ್ಯಕ್ತಿಯ ದೇಹದಲ್ಲಿ ಮಹಾರಾಷ್ಟ್ರದ 52 ವರ್ಷ ವಯಸ್ಸಿನ ವ್ಯಕ್ತಿಯ ಹೃದಯ ಮರುಜೋಡಿಸಲಾಗಿದೆ. ಇಲ್ಲಿ ಮೊದಲ ಬಾರಿಗೆ 2018ರ ಫೆಬ್ರುವರಿಯಲ್ಲಿ ಹೃದಯ ಮರು ಜೋಡಣೆ ನಡೆದಿತ್ತು. ಬಳಿಕ ಮತ್ತೊಂದು ಯಶಸ್ವಿಯಾಗಿದೆ. ಆರ್ಥಿಕ ಹಾಗೂ ಸಾಮಾಜಿಕ ಹಿಂದುಳಿದಿದ್ದ ವ್ಯಕ್ತಿಯು ಮರು ಜೀವ ಪಡೆದಿದ್ದಾರೆ’ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ವಿ. ಜಾಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
‘ವ್ಯಕ್ತಿಯು ಡಯಲೇಟೆಡ್ ಕಾರ್ಡಿಯೋಮಪತಿ ಎಂಬ ಹೃದಯ ಕಾಯಿಲೆಗೆ ಒಳಗಾಗಿದ್ದರು. ಇದರಿಂದ ಹೃದಯ ಅಶಕ್ತವಾಗಿ ರಕ್ತ ಪಂಪ್ ಮಾಡುತ್ತಿರಲಿಲ್ಲ. ಪರಿಣಾಮ, ಉಸಿರಾಟದ ತೊಂದರೆಯಾಗಿ ಕೃತಕ ಆಮ್ಲಜನಕದ ಸಹಾಯ ಪಡೆಯುತ್ತಿದ್ದರು. ಕೆಲ ಅಡಿಗಳಷ್ಟು ನಡೆದರೂ ಕಾಲುಗಳಲ್ಲಿ ಭಾವು ಆಗುತ್ತಿತ್ತು. ಫೆ.8ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು’.
ನೋಂದಾಯಿಸಲಾಗಿತ್ತು:
‘ಹೃದಯ ತಜ್ಞ ಡಾ.ವೀರೇಶ ಮಾನ್ವಿ, ಮುಖ್ಯಶಸ್ತ್ರಚಿಕಿತ್ಸಕ ಡಾ.ರಿಚರ್ಡ್ ಸಾಲ್ಡಾನಾ ತಂಡವು ಸಮಗ್ರವಾಗಿ ತಪಾಸಿಸಿದಾಗ ಹೃದಯ ನಿಷ್ಕ್ರಿಯ ಆಗಿರುವುದು ದೃಢವಾಗಿತ್ತು. ಮರು ಜೋಡಣೆಯೊಂದೆ ಪರಿಹಾರವೆಂಬ ನಿರ್ಧಾರಕ್ಕೆ ಬಂದ ಅವರು, ರಾಜ್ಯ ಸರ್ಕಾರದ ಅಂಗಾಂಗ ಕಸಿ ಪ್ರಾಧಿಕಾರದ ‘ಜೀವನ ಸಾರ್ಥಕತೆ ಕಾರ್ಯಕ್ರಮ’ದಲ್ಲಿ ರೋಗಿಯ ಹೆಸರು ನೋಂದಾಯಿಸಿದ್ದರು’ ಎಂದು ಮಾಹಿತಿ ನೀಡಿದರು.
‘ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ 52 ವರ್ಷದ ವ್ಯಕ್ತಿಯು ತೀವ್ರ ನಿಗಾ ಘಟಕದಲ್ಲಿದ್ದರು. ರಕ್ತ ಹೆಪ್ಪುಗಟ್ಟಿದ್ದರಿಂದ ಮಿದುಳು ನಿಷ್ಕ್ರಿಯೊಂಡಿತ್ತು. ಅವರ ಕುಟುಂಬದವರೊಂದಿಗೆ ಆಪ್ತಸಮಾಲೋಚನೆ ನಡೆಸಿದ ಪರಿಣಾಮ, ಹೃದಯ ದಾನಕ್ಕೆ ಸಮ್ಮತಿಸಿದರು. ‘ಜೀವನ ಸಾರ್ಥಕತೆ ಕಾರ್ಯಕ್ರಮ’ದವರು ಹೃದಯ ಕಸಿಗೆ ಸಮ್ಮತಿ ನೀಡಿದ್ದರು. ಫೆ.26ರಂದು ದಾನಿಯ ಹೃದಯ ತೆಗೆದು 17 ವರ್ಷದ ವ್ಯಕ್ತಿಗೆ ಕಸಿ ಮಾಡಲಾಯಿತು. ಅತ್ಯಾಧುನಿಕ ‘ಆರ್ಥೋಟಾಪಿಕ್’ ತಂತ್ರಜ್ಞಾನ ಬಳಸಿ ಹೃದಯ ಜೋಡಿಸಲಾಗಿದೆ. ಪಡೆದವರು ಆರೋಗ್ಯವಾಗಿದ್ದಾರೆ’ ಎಂದು ವಿವರಿಸಿದರು.
ಆರು ತಾಸು ಶಸ್ತ್ರಚಿಕಿತ್ಸೆ
‘ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಡಾ.ರಿಚರ್ಡ್ ಸಾಲ್ಡಾನಾ, ಡಾ.ಮೋಹನ ಗಾನ, ಡಾ.ಪ್ರವೀಣ ತಂಬ್ರಳ್ಳಿಮಠ, ಡಾ.ಕಿರಣ ಕುರಕುರೆ. ಡಾ.ರವಿ ಘಟ್ನಟ್ಟಿ, ಡಾ.ಡಿ.ಎಸ್. ದರ್ಶನ್, ಡಾ.ಅಭಿಷೇಕ, ಅರವಳಿಕೆ ತಜ್ಞರಾದ ಡಾ.ಆನಂದ ವಾಗರಾಳಿ, ಡಾ.ಶರಣಗೌಡ ಪಾಟೀಲ, ಡಾ.ಅಭಿಷೇಕ ಶಿತೋಳೆ, ಡಾ.ಜಬ್ಬಾರ ಮೋಮಿನ, ಡಾ.ಚೇತನಾ, ಡಾ. ಪೃಥ್ವಿ, ಪರ್ಫ್ಯೂಷನ್ ತಂಡ ಆನಂದ ಘೋರ್ಪಡೆ, ಅವಿನಾಶ, ಸುನೀಲ, ನಿಯಾಜ್ ಹಾಗೂ ಮರಿಯಾ ಸಹಾಯ ಮಾಡಿದರು. ಆರು ತಾಸು ಶಸ್ತ್ರಚಿಕಿತ್ಸೆ ನಡೆಸಲಾಯಿತು’ ಎಂದು ತಿಳಿಸಿದರು.
‘ಹೃದಯ ಕಸಿ ನೆರವೇರಿಸಿ 21 ದಿನವಾಗಿದ್ದು, ವ್ಯಕ್ತಿಯು ಆರೋಗ್ಯವಾಗಿದ್ದಾರೆ. ನಡೆದಾಡುತ್ತಿದ್ದಾರೆ. ಹೃದಯವು ಸಹಜವಾಗಿ ಕಾರ್ಯಚಟುವಟಿಕೆ ನಡೆಸುತ್ತಿದೆ. ನಿಸ್ವಾರ್ಥದಿಂದ ಹೃದಯ ನೀಡಿದ ಕುಟುಂಬದ ಕಾರ್ಯ ಶ್ಲಾಘನೀಯವಾದುದು. ಶಸ್ತ್ರಚಿಕಿತ್ಸೆಯನ್ನು ಆರೋಗ್ಯ ಕರ್ನಾಟಕ–ಆಯುಷ್ಮಾನ್ ಭಾರತ ಯೋಜನೆಯಲ್ಲಿ ಸಂಪೂರ್ಣ ಉಚಿತವಾಗಿ ನೆರವೇರಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ಹಿಂದೆ ಊಟ ಮಾಡಲಾಗುತ್ತಿರಲಿಲ್ಲ. ಈಗ ಸೇವಿಸುತ್ತಿದ್ದೇನೆ. ನಡೆದಾಡುತ್ತಿದ್ದೇನೆ. ಚೆನ್ನಾಗಿದ್ದೇನೆ’ ಎಂದು ಹೃದಯ ಮರುಜೋಡಣೆ ಮಾಡಿಸಿಕೊಂಡ ವ್ಯಕ್ತಿ ಪ್ರತಿಕ್ರಿಯಿಸಿದರು.
ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ನಿರ್ದೇಶಕ ವಿ.ಎಸ್. ಸಾಧುನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.