ADVERTISEMENT

ಬೈಲಹೊಂಗಲ | ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 15:49 IST
Last Updated 6 ಜೂನ್ 2024, 15:49 IST
ಬೈಲಹೊಂಗಲದಲ್ಲಿ ಗುರುವಾರ ಸುರಿದ ಮಳೆಗೆ ಹೊಸೂರು ರಸ್ತೆಯಲ್ಲಿ ನೀರು ಸಂಗ್ರಹಗೊಂಡಿತು – ಪ್ರಜಾವಾಣಿ ಚಿತ್ರ
ಬೈಲಹೊಂಗಲದಲ್ಲಿ ಗುರುವಾರ ಸುರಿದ ಮಳೆಗೆ ಹೊಸೂರು ರಸ್ತೆಯಲ್ಲಿ ನೀರು ಸಂಗ್ರಹಗೊಂಡಿತು – ಪ್ರಜಾವಾಣಿ ಚಿತ್ರ   

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುರುವಾರ ಧಾರಾಕಾರ ಮಳೆ ಸುರಿಯಿತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಬಿರುಸಿನ ಮಳೆ ಬಿದ್ದು, ಪಟ್ಟಣದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು.

ಹೊಸೂರ ರಸ್ತೆಯ ವಿಜಯ ಸೋಸಿಯಲ್ ಕ್ಲಬ್, ಪೊಲೀಸ್ ಠಾಣೆ, ಬಸ್ ನಿಲ್ದಾಣ ಮುಖ್ಯ ರಸ್ತೆಗಳು ಮಳೆ ನೀರಿನಿಂದಾಗಿ ಕೆರೆಯಂತೆ ಕಂಡವು. ಕಾರ್‌, ಬೈಕ್‌ ಸವಾರರು ಸಂಚಾರಕ್ಕೆ ಪರದಾಡುವಂತಾಯಿತು.

ಈಟಿ ಬಸವೇಶ್ವರ ದೇವಸ್ಥಾನ ಹತ್ತಿರದ ಎಂ.ಜೆ. ಹೌಸಿಂಗ್ ಕಾಲೊನಿಯಲ್ಲು ಬಿರುಗಾಳಿ– ಮಳೆ ಬಂದಿತು. ಇಲ್ಲಿ ಡಾಂಬರ್‌ ಅಥವಾ ಸಿಮೆಂಟ್‌ ರಸ್ತೆಗಳು ಇಲ್ಲದ ಕಾರಣ ಇಡೀ ಕಾಲೊನಿ ಕೆಸರುಮಯವಾಯಿತು.

ADVERTISEMENT

ಇಂಚಲ ಕ್ರಾಸ್‌ನಲ್ಲಿ ಗಟಾರುಗಳು ತುಂಬಿ ಹರಿದಿದ್ದರಿಂದ ತಾಲ್ಲೂಕು ಕೇಂದ್ರ ಬಸ್ ನಿಲ್ದಾಣ, ರಾಯಣ್ಣ ವೃತ್ತದ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ನೀರು ತುಂಬಿ ಹರಿಯಿತು. ಬಜಾರ ರಸ್ತೆಯ ಗಣಾಚಾರಿ ಮಳಿಗೆ ಹಿಂಬದಿಯ ಗಟಾರಗಳು ತುಂಬಿ ತ್ಯಾಜ್ಯ ಸಮೇತ ಮುಖ್ಯ ರಸ್ತೆ ಮೇಲೆ ಹರಿಯಿತು. ಇದರಿಂದಾಗಿ ಬಜಾರ ರಸ್ತೆ ಕೆಲಕಾಲ ದುರ್ವಾಸನೆಯಿಂದ ಕೂಡಿತ್ತು.

ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ, ಸಿಬ್ಬಂದಿ ಸ್ಥಳಕ್ಕೆ ತೆರಳಿ ಗಟಾರುಗಳ ದುರಸ್ತಿಗೆ ತುರ್ತು ಕ್ರಮ ವಹಿಸಿದರು. ಗಟಾರುಗಳಲ್ಲಿನ ತ್ಯಾಜ್ಯ ತೆರುವುಗೊಳಿಸಿ ಮಳೆ ನೀರು ಹರಿದುಹೋಗಲು ಅನುವು ಮಾಡಿಕೊಟ್ಟರು. ಈ ವೇಳೆ ಬಜಾರ ರಸ್ತೆಯಲ್ಲಿ ತಾಸುಗಳವರೆಗೆ ಸಂಚಾರ ಸ್ಥಗಿತಗೊಂಡಿತು.

ಪುರಸಭೆಯ ವಿವಿಧ ವಾರ್ಡ್‌ಗಳಲ್ಲಿ ಭೇಟಿ ನೀಡಿದ ಅಧಿಕಾರಿಗಳು, ಮಳೆ ನೀರು ನುಗ್ಗಿದ ಮನೆಗಳನ್ನು ಪರಿಶೀಲಿಸಿದರು. ಸಾರ್ವಜನಿಕರಿಗೆ ಮಳೆ ನೀರಿನಿಂದ ತೊಂದರೆ ಆಗದ ರೀತಿಯಲ್ಲಿ ಎಚ್ವರಿಕೆ ಕ್ರಮವಹಿಸಲಾಗಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸೂರ, ಚಿಕ್ಕೊಪ್ಪ, ದುಂಡನಕೊಪ್ಪ, ಕಾರಿಮನಿ, ಆನಿಗೋಳ, ವಕ್ಕುಂದ, ಅಮಟೂರ, ಬೇವಿನಕೊಪ್ಪ, ಸುತ್ತಮುತ್ತಲಿನ ಗ್ರಾಮಗಳಲ್ಲೂ ಮಳೆ ಸುರಿಯಿತು. ಅಲ್ಲಲ್ಲಿ ಸಣ್ಣ ಮರಗಳು ಕೂಡ ಧರೆಗುರುಳಿದವು.

ಬೈಲಹೊಂಗಲದಲ್ಲಿ ಗುರುವಾರ ಸುರಿದ ಭಾರಿ ಮಳೆಗೆ ಪೊಲೀಸ್ ಠಾಣೆ ಸಂಪರ್ಕ ರಸ್ತೆಯಲ್ಲಿ ಮಳೆ ನೀರು ತುಂಬಿ‌ ಹರಿಯಿತು – ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.