ADVERTISEMENT

ಚಿಕ್ಕೋಡಿ | ಉಕ್ಕಿದ ನದಿ: ಹೈರಾಣಾದ ಜನ

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 4:39 IST
Last Updated 24 ಜುಲೈ 2024, 4:39 IST
ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಪಟ್ಟಣದ ಹೊರ ವಲಯದಲ್ಲಿರುವ ತೋಟದ ವಸತಿ ಪ್ರದೇಶದಿಂದ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಜನರು
ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಪಟ್ಟಣದ ಹೊರ ವಲಯದಲ್ಲಿರುವ ತೋಟದ ವಸತಿ ಪ್ರದೇಶದಿಂದ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಜನರು   

ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶ ಹಾಗೂ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಚಿಕ್ಕೋಡಿ ಉಪ ವಿಭಾಗದಲ್ಲಿ ಕೃಷ್ಣಾ ಹಾಗೂ ಉಪ ನದಿಗಳು ಬೋರ್ಗರೆಯುತ್ತಿವೆ. ಕೃಷ್ಣಾ ನದಿ ನೀರಿನ ಹರಿವು ಮಂಗಳವಾರ 1.50 ಲಕ್ಷ ಕ್ಯುಸೆಕ್ ಹೆಚ್ಚಿದೆ.

ಹೀಗಾಗಿ ಕೃಷ್ಣಾ, ದೂಧಗಂಗಾ, ವೇದಗಂಗಾ ನದಿ ತನ್ನ ಪಾತ್ರ ಬಿಟ್ಟು ಹರಿಯುತ್ತಿವೆ. ಹೀಗಾಗಿ ತೋಟ ಪಟ್ಟಿಯ ವಸತಿ ಪ್ರದೇಶದ ಜನರು ತೋಟದ ವಸತಿಯಿಂದ ಸುರಕ್ಷಿತ ಪ್ರದೇಶಕ್ಕೆ ಸಾಮಾನು ಸರಂಜಾಮು ಹಾಗೂ ಜಾನುವಾರುಗಳೊಂದಿಗೆ ತೆರಳುತ್ತಿದ್ದಾರೆ.

ಚಿಕ್ಕೋಡಿ ತಾಲ್ಲೂಕಿನ ಕೃಷ್ಣಾ ನದಿ ತೀರದ ಕಲ್ಲೋಳ, ಯಡೂರು, ಇಂಗಳಿ, ಮಾಂಜರಿ, ಚಂದೂರ, ಯಡೂರವಾಡಿ ಹಾಗೂ ದೂಧಗಂಗಾ ನದಿ ತೀರದಲ್ಲಿಯ ಜನವಾಡ, ಮಲಿಕವಾಡ, ಯಕ್ಸಂಬಾ, ಸದಲಗಾ ಮುಂತಾದ ಗ್ರಾಮ ಹಾಗೂ ಪಟ್ಟಣ ಪ್ರದೇಶ ವ್ಯಾಪ್ತಿಯ ತೋಟಪಟ್ಟಿಯಲ್ಲಿ ವಾಸವಾಗಿರುವ ಜನರು ಇದೀಗ ತಮ್ಮ ತಮ್ಮ ಮನೆಗಳತ್ತ ಮರಳುತ್ತಿದ್ದಾರೆ. ತೋಟದ ವಸತಿ ಪ್ರದೇಶಗಳಲ್ಲಿ ಇದ್ದುಕೊಂಡು ಎಮ್ಮೆ, ಹಸು ಸಾಕಿಕೊಂಡು ಹೈನುಗಾರಿಕೆ ಹಾಗೂ ಕೃಷಿ ಮಾಡುತ್ತಿದ್ದ ಹತ್ತಾರು ವಸತಿ ಪ್ರದೇಶಗಳ ಜನರು ಇದೀಗ ವಿಧಿ ಇಲ್ಲದೇ ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ.

ADVERTISEMENT

‘ಮಳೆಗಾಲ ಬಂದರೆ ಸಾಕು ಪ್ರವಾಹ ಯಾವಾಗ ಬರುತ್ತೊ ಅಂತಾ ನಡುಕ ಹುಟ್ಟುತ್ತದೆ. ಸಾಮಾನು ಸರಂಜಾಮುಗಳನ್ನು ಬೇರೆಡೆ ಸಾಗಿಸುವುದು ಸವಾಲೇ ಸರಿ. ಕ್ಷಣ ಕ್ಷಣಕ್ಕೂ ಪಂಪಸೆಟ್ ಸ್ಥಳಾಂತರ ಮಾಡುವುದು ಮತ್ತೊಂದು ಸವಾಲು’ ಎಂದರು ಕಲ್ಲೋಳದ ಕೃಷ್ಣಾ ನದಿ ತೀರದ ನಿವಾಸಿ ಮಲ್ಲಪ್ಪ ಶೇಡಬಾಳೆ.

‘ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಹಲವು ಕಡೆಗೆ ಬೋಟ್ ವ್ಯವಸ್ಥೆ ಮಾಡಲಾಗಿದೆ. ಸಂತ್ರಸ್ತರಿಗೆ ಕಾಳಜಿ ಕೇಂದ್ರ ಗುರುತಿಸಲಾಗಿದೆ. ನದಿ ತೀರಕ್ಕೆ ಯಾರೂ ಇಳಿಯದಂತೆ ಸೂಚನೆ ನೀಡಿದ್ದು, ಹಲವು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಉಪ ವಿಭಾಗಾಧಿಕಾರಿ ಸುಭಾಷ ಸಂಪಗಾವಿ ತಿಳಿಸಿದರು.

ಚಿಕ್ಕೋಡಿ ತಾಲ್ಲೂಕಿನ ಜನವಾಡ ಗ್ರಾಮದ ಬಳಿಯಲ್ಲಿ ದೂಧಗಂಗಾ ನದಿಯಿಂದ ಹೊಲ ಗದ್ದೆಗಳು ಜಲಾವೃತವಾಗಿದ್ದು ಸುರಕ್ಷಿತ ಸ್ಥಳಕ್ಕೆ ತೆರಳಲು ಹರ ಸಾಹಸ ಪಡುತ್ತಿರುವ ತೋಟದ ವಸತಿ ಪ್ರದೇಶದ ನಿವಾಸಿಗಳು
ಚಿಕ್ಕೋಡಿ ಪಟ್ಟಣದ ಸದಲಗಾ ಪಟ್ಟಣದ ಹೊರವಲಯದಲ್ಲಿ ಹೊಲ ಗದ್ದೆಗಳಿಗೆ ದೂಧಗಂಗಾ ನದಿ ನೀರು ನುಗ್ಗಿ ಬೆಳೆ ಜಲಾವೃತಗೊಂಡಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.