ADVERTISEMENT

ಘಟಪ್ರಭೆಯಲ್ಲಿ ಹೆಚ್ಚಿದ ನೀರಿನ ಪ್ರಮಾಣ: ದೇವಸ್ಥಾನ, ಮಠ ಜಲಾವೃತ; ಆತಂಕ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 13:14 IST
Last Updated 26 ಜುಲೈ 2024, 13:14 IST
<div class="paragraphs"><p>ಮೂಡಲಗಿ ತಾಲ್ಲೂಕಿನ ಮಸಗುಪ್ಪಿಯ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಘಟಪ್ರಭಾ ನದಿ ನೀರು ನುಗ್ಗಿದ್ದು, ಶುಕ್ರವಾರ ಜಲಾವೃತಗೊಂಡಿತು</p></div>

ಮೂಡಲಗಿ ತಾಲ್ಲೂಕಿನ ಮಸಗುಪ್ಪಿಯ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಘಟಪ್ರಭಾ ನದಿ ನೀರು ನುಗ್ಗಿದ್ದು, ಶುಕ್ರವಾರ ಜಲಾವೃತಗೊಂಡಿತು

   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶುಕ್ರವಾರ ಕೂಡ ಧಾರಾಕಾರ ಮಳೆ ಮುಂದುವರಿಯಿತು. ಇಲ್ಲಿನ ಖಡೇಬಜಾರ್‌ ಮಾರುಕಟ್ಟೆಗೆ ಹೊಂದಿಕೊಂಡ ತೆಂಗಿನಕೇರಿ ಗಲ್ಲಿಯಲ್ಲಿ ನೆಲ ಮಾಳಿಗೆಯ ಮಳಿಗೆಗಳಿಗೆ ಅಪಾರ ಪ್ರಮಾಣ ನೀರು ನುಗ್ಗಿತು. ನಾಲ್ಕು ಅಂಗಡಿಗಳ ವ್ಯಾಪಾರಸ್ಥರು ಪರದಾಡುವಂತಾಯಿತು.

ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಕೃಷ್ಣಾ ನದಿಯಲ್ಲಿ 2.16 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕೊಯ್ನಾದಲ್ಲಿ 19.8 ಸೆಂ.ಮೀ., 16.8 ಸೆಂ.ಮೀ., ಕಾಳಮ್ಮವಾಡಿಯಲ್ಲಿ 15 ಸೆಂ.ಮೀ., ಮಹಾಬಳೇಶ್ವರದಲ್ಲಿ 26.7 ಸೆಂ.ಮೀ., ನವಜಾದಲ್ಲಿ 17.2 ಸೆಂ.ಮೀ., ರಾಧಾನಗರಿಯಲ್ಲಿ 23.4 ಸೆಂ.ಮೀ., ಸಾಂಗಲಿಯಲ್ಲಿ 2.6 ಸೆಂ.ಮೀ., ಕೊಲ್ಹಾಪುರದಲ್ಲಿ 10.4 ಸೆಂ.ಮೀನಷ್ಟು ಮಳೆಯಾಗಿದೆ. ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ ಚಿಕ್ಕೋಡಿಯಲ್ಲಿ 5.2 ಸೆಂ.ಮೀ. ಮಳೆ ಬಿದ್ದಿದೆ.

ADVERTISEMENT

105.25 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಕೊಯ್ನಾ ಜಲಾಶಯ ಶುಕ್ರವಾರ 81.20 ಟಿಎಂಸಿ ಅಡಿ ತುಂಬಿದೆ. ಆರು ಗೇಟ್‌ಗಳ ಮೂಲಕ 40 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ರಾಧಾನಗರಿ ಜಲಾಶಯದಿಂದ 10 ಸಾವಿರ ಕ್ಯುಸೆಕ್, ವಾರಣಾ ಜಲಾಶಯದಿಂದ 16 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಘಟಪ್ರಭಾ ನದಿಯಲ್ಲೂ ನೀರಿನ ಪ್ರಮಾಣ ಏರಿದ್ದು ಮೂಡಲಗಿ ತಾಲ್ಲೂಕಿನ ಮಸಗುಪ್ಪಿಯ ಮಹಾಲಕ್ಷ್ಮಿ ದೇವಸ್ಥಾನವು ಶುಕ್ರವಾರ ಜಲಾವೃತಗೊಂಡಿದೆ. ಶುಕ್ರವಾರ ದೇವಿ ವಾರವಾಗಿದ್ದರಿಂದ ಭಕ್ತರು ದೂರ ನಿಂತೇ ಕೈಮುಗಿದರು. ಇದೇ ಗ್ರಾಮದ ಹೊರವಲಯದಲ್ಲಿರುವ ಎಸ್‌ಸಿ ಕಾಲೊನಿಯಲ್ಲಿ ಸಹ ನದಿ ನೀರು ಹೊಕ್ಕಿದ್ದು ಅನೇಕ ಮನೆಗಳು ನೀರಿನಲ್ಲಿ ನಿಂತಿವೆ. ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾಳಜಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.

ಸುಣಧೋಳಿ ಮಠದಲ್ಲಿ ಸಹ ನದಿಯ ನೀರು ಹೊಕ್ಕಿದ್ದು, ಜಲಾವೃತವಾಗಿದೆ. ಮಠಾಧೀಶರು ಮಠದ ಎತ್ತರ ಸ್ಥಳದಲ್ಲಿರುವ ಕೊಠಡಿಯಲ್ಲಿ ಆಶ್ರಯ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.