ADVERTISEMENT

ಹೆಬ್ಬಾಳಕರ ನಮ್ಮವರು, ನಿರಾಣಿ ಮಲ್ಲಪ್ಪ ಶೆಟ್ಟಿಯಂಥವರು: ಆರ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2024, 12:49 IST
Last Updated 12 ಏಪ್ರಿಲ್ 2024, 12:49 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ಪಂಚಮಸಾಲಿ ಮೀಸಾಲಾತಿ ಹೋರಾಟದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕುಟುಂಬ ತೊಡಗಿಸಿಕೊಂಡಿದೆ. ಹಾಗಾಗಿ ಅವರನ್ನು ನಮ್ಮವರೇ ಎಂದು ಒಪ್ಪಿಕೊಂಡಿದ್ದೇವೆ’ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಆರ್‌.ಕೆ.ಪಾಟೀಲ ಹೇಳಿದರು.

‘ಲಕ್ಷ್ಮಿ ಹೆಬ್ಬಾಳಕರ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಲ್ಲ’ ಎಂಬ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿಕೆಗೆ, ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ಅವರು ಪ‍್ರತಿಕ್ರಿಯಿಸಿದರು.

‘ನೀವು ಅಧಿಕಾರದಲ್ಲಿದ್ದಾಗ ನಮ್ಮ ಹೋರಾಟ ವಿರೋಧಿಸಿದ್ದೀರಿ. ಅಧಿಕಾರಕ್ಕಾಗಿ ನಮ್ಮ ಸಮಾಜ ಒಡೆದ ಶ್ರೇಯಸ್ಸು ನಿಮಗೆ ಸಲ್ಲುತ್ತದೆ. ರಾಣಿ ಚನ್ನಮ್ಮನ ಆಸ್ಥಾನದಲ್ಲಿದ್ದ ಮಲ್ಲಪ್ಪ ಶೆಟ್ಟಿ ಕುತಂತ್ರಿ ಆಗಿದ್ದರು. ಸಮಾಜ ವಿರೋಧಿ ಕೆಲಸ ಮಾಡುತ್ತಿರುವ ನಿರಾಣಿಯವರೇ ನೀವು ಈಗಿನ ಮಲ್ಲಪ್ಪ ಶೆಟ್ಟಿ. ಏನೇನೋ ದಾಖಲೆ ಇವೆ ಎಂದು ಹೇಳಿ ಪಂಚಮಸಾಲಿ ಶ್ರೀಗಳಿಗೆ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದೀರಿ. ಶ್ರೀಗಳ ವಿರುದ್ಧ ಮಾತನಾಡಿದರೆ ಸಮಾಜದಿಂದ ತಕ್ಕ ಪಾಠ ಕಲಿಸುತ್ತೇವೆ’ ಎಂದು ಹೇಳಿದರು.

ADVERTISEMENT

ಮುಖಂಡ ಅಶೋಕ ಗೋಪನಾಳ, ‘ಮೀಸಲಾತಿ ವಿಚಾರದಲ್ಲಿ ಮುರುಗೇಶ ನಿರಾಣಿ ನಮಗೆ ಅನ್ಯಾಯ ಮಾಡಿದ್ದಾರೆ. ಒಂದುವೇಳೆ ಅನ್ಯಾಯ ಮಾಡಿಲ್ಲ ಎಂದಾದರೆ, ಧರ್ಮಸ್ಥಳ ಮಂಜುನಾಥನ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಿ’ ಎಂದು ಸವಾಲು ಹಾಕಿದರು.

‘ನಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಬೇಡಿ ಎಂದು ಬಿ.ಎಸ್‌.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೆ ತಾಕೀತು ಮಾಡಿದ್ದ ನೀವೇ ಈಗ ಲಕ್ಷ್ಮಿ ಹೆಬ್ಬಾಳಕರ ಪಂಚಮಸಾಲಿ ಅಲ್ಲ ಎನ್ನುತ್ತಿದ್ದೀರಿ. ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶಪ್ಪನವರ ಇರದಿದ್ದರೆ, ನಮ್ಮ ಹೋರಾಟ ಅರ್ಧಕ್ಕೆ ನಿಲ್ಲುತ್ತಿತ್ತು. ಹೆಣ್ಣುಮಗಳಾದ ಲಕ್ಷ್ಮಿ ಸಮಾಜಕ್ಕಾಗಿ ಹೋರಾಡಿದರು. ಗಂಡುಮಗನಾದ ನೀವು ಏನು ಮಾಡಿದ್ದೀರಿ’ ಎಂದು ಪ್ರಶ್ನಿಸಿದರು.

ಪ್ರತಿಭಟನೆ: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಮುಖಂಡರು ನಿರಾಣಿ ವಿರುದ್ಧ ಪ್ರತಿಭಟನೆ ನಡೆಸಿದರು. ನಿರಾಣಿ ಭಾವಚಿತ್ರ ಹರಿದು ಹಾಕಿ, ಪ್ರತಿಕೃತಿ ದಹಿಸಲು ಮುಂದಾದರು. ಆಗ ಪೊಲೀಸರು ಪ್ರತಿಕೃತಿ ಕಸಿದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.