ಬೆಳಗಾವಿ: ‘ಸಂಸದ ಅನಂತಕುಮಾರ ಹೆಗಡೆ ಅಸಂಬದ್ಧ ಹೇಳಿಕೆ ನೀಡುವುದು ಇದೇ ಮೊದಲಲ್ಲ. ಮಸೀದಿಗಳ ಕುರಿತಾಗಿಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಅವರ ಹೇಳಿಕೆ ಕುರಿತು ಬಿಜೆಪಿ ನಾಯಕರು ತಳೆದ ನಿಲುವು ದ್ವಂದ್ವ ನೀತಿಯ ಭಾಗ’ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
‘ಅನಂತಕುಮಾರ ಹೆಗಡೆ ಹೇಳಿಕೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಿರಾಕರಿಸಿದ್ದಾರೆ. ಇನ್ನು ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಬೆಂಬಲಿಸುವುದು, ವಿರೋಧಿಸುವುದು ಮುಂದುವರಿದಿದೆ’ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಗ್ಗೆ ಜನರಿಗೆ ಒಳ್ಳೆಯ ಅಭಿಪ್ರಾಯವಿತ್ತು. ಆದರೆ, ಈಗ ಹೆಗಡೆ ಅಂಥವರು ನೀಡಿದ ಹೇಳಿಕೆಗಳು ಆ ಪಕ್ಷದವರನ್ನು ಬಹಿರಂಗಪಡಿಸಿವೆ. ಇಂಥದ್ದೇ ಕಾರಣಕ್ಕೆ ಸಿ.ಟಿ.ರವಿ ಅವರಂತಹ ಕೆಲವರು ಮನೆ ಸೇರಿದ್ದಾರೆ’ ಎಂದರು.
‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡಿಸಿ ಯಾತ್ರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಈಗ ಮಣಿಪುರದಿಂದ ಮುಂಬೈವರೆಗೆ ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಯುತ್ತಿದ್ದು, ಅದಕ್ಕೂ ಉತ್ತಮ ಸ್ಪಂದನೆ ಸಿಗುತ್ತಿದೆ’ ಎಂದು ತಿಳಿಸಿದರು.
‘ರಾಮಮಂದಿರ ಉದ್ಘಾಟನೆ ಮೂಲಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆಯೇ’ ಎಂಬ ಪ್ರಶ್ನೆಗೆ, ‘ಅದು ಭ್ರಮೆಯಷ್ಟೇ. ಯಾವ ರಾಜ್ಯದಲ್ಲಾದರೂ ಬಿಜೆಪಿ ನೇರವಾಗಿ ಬಹುಮತದಿಂದ ಅಧಿಕಾರಕ್ಕೆ ಬಂದಿದೆಯೇ? ಹಿಂಬಾಗಿಲಿನಿಂದ ಅದು ಅಧಿಕಾರ ಹಿಡಿದಿದ್ದೇ ಹೆಚ್ಚು. ಬೇರೆ ಪಕ್ಷದದಿಂದ ಗೆದ್ದವರನ್ನು ಸೆಳೆಯುವುದು ಆಪರೇಶನ್ ಕಮಲ ಎನ್ನುತ್ತೀರೋ ಅಥವಾ ಅವರ ಮುಟ್ಟಾಳತನ ಎನ್ನುತ್ತೀರೋ ನೀವೆ ಹೇಳಿ. ಜನಾದೇಶದಿಂದ ಗೆದ್ದಿರುವ ರಾಜ್ಯಗಳ ಪಟ್ಟಿ ಕೊಡಿ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.