ADVERTISEMENT

ಹಿಂಡಲಗಾ–ಬಾಚಿ ರಸ್ತೆ: ಗುಂಡಿಗಳನ್ನು ಮುಚ್ಚಿಸಿದ ಸಚಿವೆ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2024, 15:22 IST
Last Updated 29 ಸೆಪ್ಟೆಂಬರ್ 2024, 15:22 IST
ಬೆಳಗಾವಿ ತಾಲ್ಲೂಕಿನ ಹಿಂಡಲಗಾ–ಬಾಚಿ ರಸ್ತೆಯ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು, ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರಿಂದ ಮಾಹಿತಿ ಪಡೆದರು. ಚನ್ನರಾಜ ಹಟ್ಟಿಹೊಳಿ ಇದ್ದಾರೆ
ಬೆಳಗಾವಿ ತಾಲ್ಲೂಕಿನ ಹಿಂಡಲಗಾ–ಬಾಚಿ ರಸ್ತೆಯ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು, ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರಿಂದ ಮಾಹಿತಿ ಪಡೆದರು. ಚನ್ನರಾಜ ಹಟ್ಟಿಹೊಳಿ ಇದ್ದಾರೆ   

ಬೆಳಗಾವಿ: ರಾಯಚೂರ-ಬಾಚಿ ರಾಜ್ಯ ಹೆದ್ದಾರಿಯಲ್ಲಿ ತಾಲ್ಲೂಕಿನ ಹಿಂಡಲಗಾದಿಂದ ಬಾಚಿ ಗ್ರಾಮದವರೆಗೆ ಹದಗೆಟ್ಟಿರುವ ಮಾರ್ಗದಲ್ಲಿನ ಗುಂಡಿಗಳನ್ನು ಮುಚ್ಚುವ ಕೆಲಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಚಾಲನೆ ನೀಡಿದರು. 

‘ಸತತ ಮಳೆಯಿಂದಾಗಿ ಬೆಳಗಾವಿಯ ಮಹಾತ್ಮ ಗಾಂಧಿ ವೃತ್ತದಿಂದ ಬಾಚಿ ಗ್ರಾಮದವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಪರಿಶೀಲಿಸಬೇಕು’ ಎಂದು ಸಚಿವೆ ಹೆಬ್ಬಾಳಕರ ಅವರು, 15 ದಿನಗಳ ಹಿಂದೆಯೇ ಸೂಚಿಸಿದ್ದರು. 

ಭಾನುವಾರ ಮತ್ತೆ ಸ್ಥಳಕ್ಕೆ ಆಗಮಿಸಿದ ಹೆಬ್ಬಾಳಕರ ಅವರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸಿದರು.

ADVERTISEMENT

‘ಹಿಂಡಲಗಾದಿಂದ ಬಾಚಿವರೆಗಿನ ರಸ್ತೆ ನಿರ್ಮಾಣಕ್ಕೆ ₹15 ಕೋಟಿ ಅನುದಾನ ಮಂಜೂರು ಮಾಡಿಸಿದ್ದೇನೆ. ಮಳೆಗಾಲ ಮುಗಿದ ನಂತರ ಕೆಲಸ ಆರಂಭವಾಗಲಿದೆ. ಅಲ್ಲಿಯವರೆಗೆ ಜನರಿಗೆ ಅನಾನುಕೂಲ ಆಗಬಾರದೆಂಬ ಕಾರಣಕ್ಕೆ, ತುರ್ತಾಗಿ ಗುಂಡಿಗಳನ್ನು ಮುಚ್ಚಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ‘ವಾಹನ ಸಂಚಾರ ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ರಸ್ತೆ ಹಾಳಾಗಿದೆ. ಈ ಮಾರ್ಗದಲ್ಲಿನ ಎಲ್ಲ ಗುಂಡಿಗಳನ್ನೂ ಮುಚ್ಚಬೇಕು. ಸಾರ್ವಜನಿಕರ ಓಡಾಟಕ್ಕೆ ಯಾವ ತೊಂದರೆಯಾಗದಂತೆ ಕ್ರಮ ವಹಿಸಬೇಕು’ ಎಂದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ‘ಇನ್ಮುಂದೆ ವಿಳಂಬವಾಗದಂತೆ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ಜನರಿಂದ ಯಾವುದೇ ರೀತಿಯ ದೂರು ಬರಬಾರದು’ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಎಸ್‌.ಸೊಬರದ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಶಶಿಕಾಂತ ಕೋಳೇಕರ ಇತರರಿದ್ದರು.

ಈ ರಸ್ತೆಯು ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ. ಇದು ಅಧೋಗತಿಗೆ ತಲುಪಿದ್ದರಿಂದ ವಾಹನ ಸವಾರರು ಸರ್ಕಸ್‌ ಮಾಡುತ್ತ ಸಂಚರಿಸುವಂತಾಗಿತ್ತು. ಈಗ ಗುಂಡಿಗಳನ್ನು ಮುಚ್ಚಿದ್ದರಿಂದ ತುಸು ನಿರಾಳವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.