ADVERTISEMENT

ಹಿಂಡಲಗಾ ಗುಂಡಿನ ದಾಳಿ ಪ್ರಕರಣ: ಮೂವರು ಆರೋಪಿತರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 8:30 IST
Last Updated 8 ಜನವರಿ 2023, 8:30 IST
   

ಬೆಳಗಾವಿ: ಸಮೀಪದ ಹಿಂಡಲಗಾ ಕೇಂದ್ರ ಕಾರಾಗೃಹದ ಬಳಿ ಶನಿವಾರ ರಾತ್ರಿ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೋಕಿತ್ಕರ್‌ ಹಾಗೂ ಹಿಂದೂ ರಾಷ್ಟ್ರ ಸೇನಾ ಮುಖಂಡ ಮನೋಜ್ ದೇಸೂರಕರ್‌ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಭಾನುವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇಲ್ಲಿನ ಪಾಟೀಲ ಮಾಳದ ನಿವಾಸಿ ಅಭಿಜಿತ ಸೋಮನಾಥ ಭಾತಖಾಂಡೆ(41), ತಾಲ್ಲೂಕಿನ ಬಸ್ತವಾಡದ ರಾಹುಲ್ ನಿಂಗಾಣಿ ಕೊಡಚವಾಡ(32), ಜ್ಯೋತಿಬಾ ಗಂಗಾರಾಮ ಮುತಗೇಕರ್(25) ಬಂಧಿತರು.

ಹಣಕಾಸಿನ ವ್ಯವಹಾರ ಕಾರಣ: 'ಗುಂಡಿನ ದಾಳಿ ನಡೆಸಿದ ಅಭಿಜಿತ ಹಾಗೂ ರವಿ ಮಧ್ಯೆ ರಿಯಲ್ ಎಸ್ಟೇಟ್ ವ್ಯವಹಾರವಿತ್ತು. ಇತ್ತೀಚೆಗೆ ಮನಸ್ತಾಪ ಉಂಟಾಗಿತ್ತು.

ADVERTISEMENT

ಹಣಕಾಸಿನ ವ್ಯವಹಾರ ಹಾಗೂ ವೈಯಕ್ತಿಕ ದ್ವೇಷವೇ ಈ ಘಟನೆಗೆ ಕಾರಣವಾಗಿದ್ದು, 18 ಗಂಟೆಯೊಳಗೆ ಪೊಲೀಸರು ಪ್ರಕರಣ ಬೇಧಿಸಿದ್ದಾರೆ' ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'2020ರ ಜನವರಿಯಲ್ಲಿ ಅಭಿಜಿತ ಮೇಲೆ‌ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಪ್ರಕರಣದಲ್ಲಿ ಕೋಕಿತ್ಕರ್ ಮೊದಲ ಆರೋಪಿಯಾಗಿದ್ದರು' ಎಂದ ಅವರು, 'ಮೂವರು ಆರೋಪಿಗಳ ಪೈಕಿ ಯಾರ ಬಳಿಯೂ ಶಸ್ತ್ರಾಸ್ತ್ರ ಪರವಾನಗಿ ಇರಲಿಲ್ಲ' ಎಂದು ಸ್ಪಷ್ಟಪಡಿಸಿದರು.

'ಈ‌ ಆರೋಪಿಗಳು ಯಾವುದಾದರೂ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತಿದೆ.‌ ಜನರೂ ಯಾವುದೇ ರೀತಿಯ ವದಂತಿಗೆ ಕಿವಿಗೊಡಬಾರದು' ಎಂದು ಮನವಿ ಮಾಡಿದರು.

ಡಿಸಿಪಿಗಳಾದ ರವೀಂದ್ರ ಗದಾಡಿ, ಪಿ.ವಿ.ಸ್ನೇಹಾ, ಎಸಿಪಿಗಳಾದ ನಾರಾಯಣ ಭರಮನಿ, ಎ. ಚಂದ್ರಪ್ಪ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.