ಬೆಳಗಾವಿ: ‘ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತೇವೆ. ಬೆಳಗಾವಿ ಮಾತ್ರವಲ್ಲದೆ, ರಾಜ್ಯವಿಡೀ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ’ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷರೂ ಆಗಿರುವ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಇಲ್ಲಿ ಮಂಗಳವಾರ ನಡೆದ ಶತಮಾನೋತ್ಸವ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘1924ರಲ್ಲಿ ಬೆಳಗಾವಿ ನಗರದಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಐತಿಹಾಸಿಕ ಘಳಿಗೆಗೆ ಈಗ 100 ವಸಂತ ತುಂಬಿದೆ. ಹಾಗಾಗಿ ಅ.2ರಿಂದ ಒಂದು ವರ್ಷದವರೆಗೆ ಶತಮಾನೋತ್ಸವ ವರ್ಷ ಆಚರಿಸಿ, ಮನೆ–ಮನೆಗೆ ಗಾಂಧಿ ಸಿದ್ಧಾಂತ ತಲುಪಿಸುತ್ತೇವೆ’ ಎಂದರು.
‘ಬೆಳಗಾವಿ ಅಧಿವೇಶನವನ್ನು ಸಾರ್ವಜನಿಕರಿಗೆ ಪರಿಚಯಿಸುವ ದೃಷ್ಟಿಯಿಂದ ಸ್ಥಳೀಯ ಕಲಾವಿದರು ವಿಶೇಷ ನಾಟಕ ರಚಿಸಬೇಕು. ಗಾಂಧಿ ಅವರ ಬದುಕು ಹಾಗೂ ಕಾಂಗ್ರೆಸ್ ಅಧಿವೇಶನ ಕುರಿತಾಗಿ ಛಾಯಾಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗುವುದು’ ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗಾಂಧಿ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು. ಜತೆಗೆ, ಎಲ್ಲ ವಿ.ವಿಗಳಲ್ಲಿ ಗಾಂಧಿ ಅಧ್ಯಯನ ಕೇಂದ್ರ ಆರಂಭಿಸಬೇಕು.ಎಚ್.ಕೆ.ಪಾಟೀಲ, ಸಚಿವ
ಶತಮಾನೋತ್ಸವ ಸಮಿತಿ ಗೌರವ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ‘ಶತಮಾನೋತ್ಸವದ ಸಂಭ್ರಮ ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಗಾಂಧಿ ಸ್ಮಾರಕ ಮತ್ತು ಶಾಶ್ವತ ಮ್ಯೂಸಿಯಂ ನಿರ್ಮಿಸಬೇಕು’ ಎಂದು ತಿಳಿಸಿದರು.
‘ಶತಮಾನೋತ್ಸವದ ಅಂಚೆ ಚೀಟಿ ಬಿಡುಗಡೆಗೊಳಿಸುವ ಜತೆಗೆ, ವಿಚಾರಸಂಕಿರಣ ಮತ್ತು ವಿವಿಧ ಸಮ್ಮೇಳನ ಹಮ್ಮಿಕೊಳ್ಳಲು ಯೋಜನೆ ರೂಪಿಸಬೇಕು. ಶತಮಾನೋತ್ಸವ ಉದ್ಯಾನ ಮತ್ತು ಭವನವೂ ನಿರ್ಮಾಣವಾಗಬೇಕಿದೆ’ ಎಂದರು.
ಸಮಿತಿಯ ಸಂಚಾಲಕರಾದ ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ ಮಾತನಾಡಿದರು.
ದೇಶಪಾಂಡೆ ಸ್ಮಾರಕ ಟ್ರಸ್ಟ್ ಅಧ್ಯಕ್ಷ ರವೀಂದ್ರ ದೇಶಪಾಂಡೆ, ಸಾಹಿತಿಗಳಾದ ಸರಜೂ ಕಾಟ್ಕರ್, ಪ್ರೊ.ರಾಮಕೃಷ್ಣ ಮರಾಠೆ, ನಿಲೇಶ್ ಬೇನಾಳ ಅವರು, ಶತಮಾನೋತ್ಸವ ಆಚರಣೆ ಕುರಿತಾಗಿ ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಆಸಿಫ್ ಸೇಠ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಸಮಿತಿ ಸದಸ್ಯ ಎನ್.ಆರ್.ವಿಶುಕುಮಾರ್ ಇದ್ದರು.
ಗಾಂಧಿ ಸ್ಪರ್ಶಿಸಿದ ಸ್ಥಳಗಳಿಗೆ ಭೇಟಿ
ಕಾಂಗ್ರೆಸ್ ಅಧಿವೇಶನಕ್ಕೆ ಸಾಕ್ಷಿಯಾದ ಬೆಳಗಾವಿಯ ಟಿಳಕವಾಡಿಯ ವೀರಸೌಧಕ್ಕೆ ಸಚಿವರಾದ ಎಚ್.ಕೆ.ಪಾಟೀಲ, ಸತೀಶ ಜಾರಕಿಹೊಳಿ, ವೀರಪ್ಪ ಮೊಯಿಲಿ ಹಾಗೂ ಶತಮಾನೋತ್ಸವ ಸಮಿತಿಯವರು ಭೇಟಿ ನೀಡಿದರು.
ಗಾಂಧೀಜಿ ಕಂಚಿನ ಪ್ರತಿಮೆಗೆ ಗೌರವ ಸಲ್ಲಿಸಿದ ಸಚಿವರು, ಅಧಿವೇಶನ ಸಂದರ್ಭದಲ್ಲಿನ ಅಪರೂಪದ ಛಾಯಾಚಿತ್ರಗಳನ್ನು ವೀಕ್ಷಿಸಿದರು. ಸ್ವಾತಂತ್ರ್ಯ ಹೋರಾಟಗಾರ ರಾಜೇಂದ್ರ ಕಲಘಟಗಿ ಅವರು ಮಾಹಿತಿ ಹಂಚಿಕೊಂಡರು.
ನಂತರ ಕಾರ್ಯಕ್ರಮ ಆಯೋಜನೆಗಾಗಿ ಲೇಲೇ ಮೈದಾನ, ಸಿಪಿಇಡಿ ಮೈದಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಣಬರ್ಗಿಯ ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಮತ್ತು ಹುದಲಿಯ ಮಹಾತ್ಮ ಗಾಂಧೀಜಿ ಸ್ಮಾರಕಕ್ಕೆ ತೆರಳಿ, ಗಾಂಧೀಜಿ ಹೆಜ್ಜೆ ಗುರುತಿನ ಕುರಿತಾಗಿ ಮಾಹಿತಿ ಕಲೆಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.