ADVERTISEMENT

ರಾಮದುರ್ಗ | ‘ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ’

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 15:53 IST
Last Updated 29 ಜೂನ್ 2024, 15:53 IST
ರಾಮದುರ್ಗದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ನಿತೇಶ್‌ ಪಾಟೀಲ ಮಾತನಾಡಿದರು
ರಾಮದುರ್ಗದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ನಿತೇಶ್‌ ಪಾಟೀಲ ಮಾತನಾಡಿದರು   

ರಾಮದುರ್ಗ: ‘ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಅಹವಾಲುಗಳನ್ನು ಪರಿಶೀಲಿಸಿ ಅವುಗಳ ಪರಿಹಾರಕ್ಕೆ ಜಿಲ್ಲಾಡಳಿತದಿಂದ  ಪ್ರಾಮಾಣಿಕ ಪ್ರಯತ್ನ ನಡೆಯಲಿದೆ. ಸಾರ್ವಜನಿಕರು ಜನಸ್ಪಂದನಾ ಸಭೆಯ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ನಿತೇಶ್‌ ಪಾಟೀಲ ಹೇಳಿದರು.

ಪಟ್ಟಣದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ರಾಮದುರ್ಗ ತಾಲ್ಲೂಕುಮಟ್ಟದ ಜನಸ್ಪಂದನಾ ಸಭೆಯಲ್ಲಿ ಜನರ ಅಹವಾಲು ಸ್ವೀಕರಿಸಿ ಮಾತನಾಡಿದರು.

‘ತಾಲ್ಲೂಕುಮಟ್ಟದ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಬೇಕು. ಗ್ರಾಮೀಣ ಜನರ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಬೇಕು. ರಾಮದುರ್ಗದಲ್ಲಿ ಸಲ್ಲಿಕೆಯಾದ ನೂರಾರು ಅಹವಾಲುಗಳಲ್ಲಿ ಬಹುತೇಕ ಸಹೋದರರ, ಬಂಧುಗಳ ಹಾಗೂ ನೆರೆಹೊರೆಯವರೊಂದಿಗೆ ಈಗಾಗಲೇ ನ್ಯಾಯಾಲಯದಲ್ಲಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಅವುಗಳನ್ನು ಪರಸ್ಪರ ಒಪ್ಪಂದದ ಮೂಲಕ ಪರಿಹಾರ ಕಲ್ಪಿಸಿ ನಂತರ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು’ ಎಂದು ಹೇಳಿದರು.

ADVERTISEMENT

ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬೆಳಗಾವಿ ರಸ್ತೆಯ ಎಂಎಸ್‍ಐಎಲ್ ಮದ್ಯದಂಗಡಿ ಸ್ಥಳಾಂತರಿಸುವಂತೆ ಸಾರ್ವಜನಿಕರು ಮನವಿ ನೀಡಿದರು. ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ  ಭರವಸೆ ನೀಡಿದರು.

ಕಂದಾಯ, ಪುರಸಭೆ ಮತ್ತು ಅರಣ್ಯ ಇಲಾಖೆಯ ಸಮಸ್ಯೆಗಳ ಅರ್ಜಿಗಳು  ಸಲ್ಲಿಕೆಯಾದವು.

ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಪ್ರಭಾರ ಡಿಎಸ್‍ಪಿ ರವಿ ನಾಯ್ಕ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.

ರಾಮದುರ್ಗದಲ್ಲಿ ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಕುಬ್ಜ ಮಹಿಳೆಯೊಬ್ಬಳು ನೀಡಿದ ಅಹವಾಲನ್ನು ಜಿಲ್ಲಾಧಿಕಾರಿ ಡಾ. ನಿತೇಶ ಪಾಟೀಲ ಅವರು ಭಾರೀ ಕುತೂಹಲದಿಂದ ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.