ಖಾನಾಪುರ: ಪಟ್ಟಣದಿಂದ 4 ಕಿ.ಮೀ ದೂರದ ಶೇಡೇಗಾಳಿ ತೋಟಗಾರಿಕಾ ಕ್ಷೇತ್ರ 30 ಎಕರೆ ಪ್ರದೇಶದಲ್ಲಿ ವಿಶಾಲವಾಗಿ ಹರಡಿಕೊಂಡಿದೆ. ಈ ಕ್ಷೇತ್ರದಲ್ಲಿ ಇಲಾಖೆಯಿಂದ ಸಿದ್ಧಪಡಿಸಿದ ಸುಧಾರಿತ ತಳಿಯ ತೋಟಗಾರಿಕಾ ಸಸಿಗಳನ್ನು ಸಿದ್ಧಪಡಿಸಿ ರೈತರಿಗೆ ನೀಡಲಾಗುತ್ತಿದ್ದು, ರೈತರಿಗೆ ಅನುಕೂಲವಾಗಿದೆ.
ಇಲ್ಲಿಂದ ಪಡೆದ ಸಸಿಗಳ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ಒದಗಿಸಿ ರೈತರು ತೋಟಗಾರಿಕೆಯನ್ನು ಕ್ರಮಬದ್ಧವಾಗಿ ಕೈಗೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆ. ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿದರೆ ಅವರಿಗೆ ತೋಟಗಾರಿಕೆ ಬೆಳೆಗಳ ಪ್ರಾಮುಖ್ಯತೆಯ ಬಗ್ಗೆ ಸಮಗ್ರ ಮಾಹಿತಿ ದೊರೆಯಲಿದೆ.
ಶೇಡೇಗಾಳಿ ತೋಟಗಾರಿಕಾ ಕ್ಷೇತ್ರವನ್ನು ತೋಟಗಾರಿಕೆ ಇಲಾಖೆಯ ರಾಜ್ಯ ಘಟಕ 1965ರಲ್ಲಿ ಪ್ರಾರಂಭಿಸಿದೆ. ಇಲ್ಲಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ತೋಟಗಾರಿಕಾ ಸಸಿಗಳನ್ನು ಆಸಕ್ತರಿಗೆ ವಿತರಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ವಿವಿಧ ಜಾತಿಯ ಹಣ್ಣಿನ, ಹೂವಿನ ಮತ್ತು ತರಕಾರಿ ಸಸಿಗಳನ್ನು ಬೆಳೆಸಲಾಗುತ್ತಿದ್ದು, ನೆರಳು ಚಪ್ಪರದಲ್ಲಿ ತೋಟಗಾರಿಕೆ ಸಸಿಗಳನ್ನು ಸಿದ್ಧಪಡಿಸಲಾಗುತ್ತಿದೆ.
ಇದುವರೆಗೂ ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ ಮತ್ತಿತರ ಜಿಲ್ಲೆಗಳ ರೈತರು ಈ ಕ್ಷೇತ್ರದಿಂದ ತೋಟಗಾರಿಕೆ ಬೆಳೆಗಳ ವಿವಿಧ ಸಸಿಗಳನ್ನು ಖರೀದಿಸಿ ಹೊಲಗಳಲ್ಲಿ ನೆಟ್ಟಿದ್ದಾರೆ.
‘ನಿಶ್ಚಿತ ಮತ್ತು ನಿಯಮಿತವಾದ ಆದಾಯ ನೀಡುವ ನಿಟ್ಟಿನಲ್ಲಿ ರೈತರಿಗೆ ತೋಟಗಾರಿಕೆ ಬೆಳೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಕಾರಣದಿಂದಲೇ ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ರೈತರು ತಮ್ಮ ಜಮೀನುಗಳಲ್ಲಿ ಹೆಚ್ಚಾಗಿ ಗೋಡಂಬಿ ಬೆಳೆಯನ್ನು ಬೆಳೆಯುತ್ತಾರೆ. ಗೋಡಂಬಿ ಜೊತೆಗೆ ಮಾವು, ಪೇರಲ, ಸಪೋಟ, ತೆಂಗು, ಅಂಜೂರ, ಕರಿಬೇವು, ನುಗ್ಗೆ, ಹಲಸು, ಬಾಳೆ ಮತ್ತಿತರ ದೀರ್ಘಾವಧಿ ಬೆಳೆಗಳನ್ನು ಬೆಳೆಯಲು ಬಯಸಿದರೆ; ಸಸಿಗಳನ್ನು ನೀಡಿ ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ’ ಎನ್ನುತ್ತಾರೆ ಶೇಡೇಗಾಳಿ ತೋಟಗಾರಿಕೆ ಕ್ಷೇತ್ರದ ಮುಖ್ಯಸ್ಥ ಹಾಗೂ ಸಹಾಯಕ ತೋಟಗಾರಿಕೆ ನಿರ್ದೇಶಕ ರಾಜಕುಮಾರ ಟಾಕಳೆ.
‘ಎಲ್ಲ ಹವಾಮಾನ ಮತ್ತು ಮಣ್ಣಿನಲ್ಲಿ ಸುಲಭವಾಗಿ ಬೆಳೆಯಬಹುದಾದ ಮತ್ತು ಉತ್ತಮ ಆದಾಯ ತರುವ ಅಂಜೂರ ಫಸಲನ್ನು ನಮ್ಮ ರಾಜ್ಯದ ರೈತರಿಗೆ ಪರಿಚಯಿಸಬೇಕು ಎಂದು ನಿಶ್ಚಯಿಸಿ ಹೊರ ರಾಜ್ಯಗಳಿಂದ ಅಂಜೂರ ಬೀಜಗಳನ್ನು ತಂದು ಸಂಸ್ಕರಿಸಿ ಶೇಡೇಗಾಳಿ ತೋಟಗಾರಿಕಾ ಕ್ಷೇತ್ರದ ಪಾಲಿ ಹೌಸ್ನಲ್ಲಿ (ನೆರಳು ಚಪ್ಪರ) ಬೆಳೆಯಲಾಗಿದೆ. ಈಗಾಗಲೇ ಅಂಜೂರ ಸಸಿಗಳನ್ನು ಬೆಳೆಸಿ ಯಶಸ್ಸನ್ನು ಕಂಡುಕೊಳ್ಳಲಾಗಿದೆ. ಈ ಬೆಳೆಯನ್ನು ರೈತರು ತಮ್ಮ ಹೊಲಗಳಲ್ಲಿ ಬೆಳೆಯುವಂತೆ ಮಾಡುವ ಗುರಿ ಹೊಂದಲಾಗಿದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮಹಾಂತೇಶ ಮುರಗೋಡ.
‘ಶೇಡೆಗಾಳಿ ತೋಟಗಾರಿಕೆ ಕ್ಷೇತ್ರದಲ್ಲಿ ರೋಗ ನಿರೋಧಕ ಶಕ್ತಿ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಮಿರ್‍ಯಾಕಲ್ ಫ್ರೂಟ್ ಬೆಣ್ಣೆ ಹಣ್ಣು ರೋಜ್ ಆಪಲ್ ದೇವಿ ಹಲಸು ಮೆಕಡೆಮಿಯ ನಟ್ ಹಾಲು ಹಣ್ಣು ರಾಮ ಭೂತಾನ ಎಗ್ ಫ್ರುಟ್ ಲೊಂಗೋನ್ ಲೀಚಿ ಮ್ಯಾಂಗೋಸ್ಟಿನ್ ಬಿಳಿ ಮತ್ತು ಕಪ್ಪು ನೇರಳೆ ಪುನರ್ಪುಳಿ (ಕೋಕಂ) ಲಕ್ಷ್ಮಣ ಫಲ ಹನುಮಾನ ಫಲ ರಾಮ ಫಲ ಬ್ರೆಡ್ ಪ್ರೂಟ್ ಸಸಿಗಳನ್ನು ಬೆಳೆಸಲಾಗುತ್ತಿದೆ. ಜೊತೆಗೆ 25 ತಳಿಗಳ ಮಾವು ವಿವಿಧ ತಳಿಗಳ ಗೋಡಂಬಿ ಹಲಸಿ ತೆಂಗು ಸಪೋಟ ಹಣ್ಣಿನ ಸಸಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್.ಶಮಂತ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.